ಮಾನವೀಯ ಮೌಲ್ಯಗಳಿಗೆ ಮರುಜೀವಕೊಟ್ಟ ಕವಿ ಡಾ.ಜಿ.ಎಸ್. ಶಿವರುದ್ರಪ್ಪ
ರಾಮನಗರ: ಮಧುರ ಕಾವ್ಯಗಳನ್ನು ರಚಿಸುವ ಮೂಲಕ ಮಾನವೀಯ ಮೌಲ್ಯಗಳಿಗೆ ಮರುಜೀವಕೊಟ್ಟ ಮಹಾಕವಿ ಡಾ.ಜಿ.ಎಸ್.ಶಿವರುದ್ರಪ್ಪ ಎಂದು ಉಪನ್ಯಾಸಕ ಜಿ.ಶಿವಣ್ಣ ಬಣ್ಣಿಸಿದರು. ನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಕಾಲೇಜಿನಲ್ಲಿ ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ಆಯೋಜಿಸಿದ್ದ ಶ್ರದ್ಧಾಂಜಲಿ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಎಸ್ಎಸ್ ರಚಿಸಿರುವ ಕವಿತೆಯ ಸಾಲುಗಳು ಜನರ ಹೃದಯದಲ್ಲಿ ಹರಿಯಬೇಕಾದ್ದು ಪ್ರೀತಿ, ಸ್ನೇಹಗಳ ಪ್ರವಾಹ ಎಂಬುದನ್ನು ತೋರಿಸುತ್ತದೆ ಎಂದರು.
ನೂರಾರು ಕಾವ್ಯಗಳನ್ನು ಕನ್ನಡಿಗರಿಗೆ ಕಾಣಿಕೆಯಾಗಿ ಕೊಟ್ಟು, ಅತ್ಯಂತ ಸರಳವಾಗಿ ಬದುಕಿ ತೋರಿಸಿದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ನಮ್ಮನ್ನಗಲಿರುವುದು ಅತ್ಯಂತ ನೋವಿನ ಸಂಗತಿ. ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರ ಪರಮ ಶಿಷ್ಯರಾಗಿದ್ದ ಡಾ.ಜಿ.ಎಸ್.ಎಸ್ ಅವರು ಗುರುವಿನ ದಾರಿಯಲ್ಲಿಯೇ ನಡೆದು, ಗುರು ಪರಂಪರೆಗೆ ಕೀರ್ತಿತಂದವರು. ಅವರ ಕಾವ್ಯಗಳು ಹಾಡಲಷ್ಟೆ ಅಲ್ಲದೆ ಜನರ ಜೀವನಕ್ಕೆ ಬೆಳಕನ್ನೂ ನೀಡುತ್ತವೆ ಎಂದು ಪ್ರಾಂಶುಪಾಲ ಬಿ.ಗೋಪಾಲ್ ಹೇಳಿದರು.
ಒಂದು ನಿಮಿಷ ಮೌನಚಾರಣೆ ಮಾಡುವ ಮೂಲಕ ಡಾ.ಜಿಎಸ್ಎಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.