ರಂಜಿತಾ ಈಗ ನಿತ್ಯಾನಂದನ ಅಧಿಕೃತ ಶಿಷ್ಯೆ!
ಕ.ಪ್ರ.ವಾರ್ತೆ ರಾಮನಗರ ಡಿ.27
ಬಿಡದಿಯ ಧ್ಯಾನಪೀಠದಲ್ಲಿ ಶುಕ್ರವಾರ ನಡೆದ ನಿತ್ಯಾನಂದ ಅವರ 37ನೇ ಅವತಾರೋತ್ಸವ ಅರ್ಥಾತ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮೋಹಕ ನಟಿ ರಂಜಿತಾ ಸನ್ಯಾಸ ದೀಕ್ಷೆ ಪಡೆದಿದ್ದಾರೆ.
ಸ್ವತ: ನಿತ್ಯಾನಂದ ದೀಕ್ಷೆ ಪ್ರದಾನಿಸಿದ್ದು, ರಂಜಿತಾಗೆ ಮಾ ಆನಂದಮಯಿ ಎಂದು ನಾಮಕರಣವನ್ನೂ ಮಾಡಿದ್ದಾರೆ.
ತನ್ನ ಮೈಮಾಟ ಮತ್ತು ನಟನೆಯಿಂದ ಅಸಂಖ್ಯಾತ ಪ್ರೇಕ್ಷಕರ ಮನ ಗೆದ್ದಿದ್ದ ಬಹುಭಾಷಾ ಮೋಹಕ ನಟಿ ರಂಜಿತಾ ಅವರ ವರ್ಣರಂಜಿತ ಬದುಕು ಸನ್ಯಾಸ ದೀಕ್ಷೆ ಸ್ವೀಕಾರದೊಂದಿಗೆ ಮತ್ತೊಂದು ಮಡಲು ತಲುಪಿದೆ. ಅವರೀಗ ಖಾವಿ ಧರಿಸಿದ್ದು, ಸನ್ಯಾಶ್ರಾಮವನ್ನು ಪ್ರಾರಂಭಿಸಿದ್ದಾರೆ. ರಂಜಿತಾ ಜತೆಗಿನ ನಿತ್ಯಾನಂದ ರಾಸಲೀಲೆ ಸಿಡಿ 3 ವರ್ಷದ ಹಿಂದೆ ಬಿಡುಗಡೆಗೊಂಡಿತ್ತು. ಅದರಿಂದ ನಿತ್ಯಾನಂದ ಜೈಲು ಸೇರಬೇಕಾಯಿತು. ಆ ನಂತರವೂ ಧ್ಯಾನಪೀಠದ ಜತೆಗಿನ ರಂಜಿತಾ ಸಂಬಂಧ ಮುಂದುವರೆದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ತಮಿಳು, ಕನ್ನಡ, ತೆಲುಗು, ಮಲೆಯಾಳಿ ಸಹಿತ ಬಹುಭಾಷಾ ಚಿತ್ರಗಳಲ್ಲಿ ನಟಿಸಿದ್ದ ರಂಜಿತಾ ಈಚೆಗೆ ಚಿತ್ರರಂಗದಲ್ಲಿ ಬೇಡಿಕೆ ಕಳೆದುಕೊಂಡಿದ್ದರೂ ವೈರಾಗಿಯಾಗುವ ಸುಳಿವು ನೀಡಿರಲಿಲ್ಲ. ಇದೀಗ ನಿತ್ಯಾನಂದ ಹುಟ್ಟುಹಬ್ಬ ಆಚರಣೆಯಂದೇ ಸನ್ಯಾಸ ದೀಕ್ಷೆ ಪಡೆದು, ಅಚ್ಚರಿ ಮೂಡಿಸಿದ್ದಾರೆ.
ಅದ್ಧೂರಿ ಅವತಾರೋತ್ಸವ: ಧ್ಯಾನಪೀಠದಲ್ಲಿ ಸತ್ಸಂಗ ಸಹಿತ ತನ್ನದೇ ಆದ ಚಿತ್ರ, ವಿಚಿತ್ರ ಆಚರಣೆಗಳೊಂದಿಗೆ ನಿತ್ಯಾನಂದರ 37ನೇ ಅವತಾರೋತ್ಸವ ವೈಭವೋಪೇತವಾಗಿ ಜರುಗಿತು. ಕಾರ್ಯಕ್ರಮದಲ್ಲಿ ರಂಜಿತಾ ಮಾತ್ರವಲ್ಲದೆ 50ಕ್ಕೂ ಹೆಚ್ಚು ಮಂದಿ ಅನುಯಾಯಿಗಳು ನಿತ್ಯಾನಂದರಿಂದ ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದಾರೆ. ಅವತಾರೋತ್ಸವದ ಪ್ರಯುಕ್ತ ತಮಿಳುನಾಡಿನ ತಿರುವಣ್ಣಾಮಲೈನಿಂದ ಹೊರಟ ನಿತ್ಯಾನಂದರ ನೂರಾರು ಅನುಯಾಯಿಗಳು ರುದ್ರಹೋಮ ನಡೆಸಿ ಡಿ.18ರಂದು ಪಾದಯಾತ್ರೆ ಮೂಲಕ ಹೊರಟಿದ್ದರು. ಈ ತಂಡ ಗುರುವಾರವಷ್ಟೇ ಧ್ಯಾನಪೀಠ ತಲುಪಿದ್ದು, ಅದರಲ್ಲಿದ್ದ ಹಲವರು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.
ರುದ್ರಾಭಿಷೇಕವನ್ನು ಲೋಕಕಲ್ಯಾಣಾರ್ಥ ನೆರವೇರಿಸಿದ್ದು, ಅವತಾರೋತ್ಸವದಲ್ಲಿ ಕಲ್ಪತರು ದರ್ಶನವೂ ಆಗಿದೆ. ನಾನಾ ಭಾವ, ಭಂಗಿ, ವೇಷಭೂಷಣಗಳಲ್ಲಿ ನಿತ್ಯಾನಂದ ಕಾಣಿಸಿಕೊಳ್ಳುವ ಮೂಲಕ ಕಾರ್ಯಕ್ರಮದಲ್ಲಿ ಭಕ್ತರನ್ನು ಭಾವಪರವಶರಾಗಿ ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ.
ಸತ್ಸಂಗ, ಪಲ್ಲಕ್ಕಿ ಉತ್ಸವ: ಹುಟ್ಟುಹಬ್ಬ ಅರ್ಥಾತ್ ಅವತಾರೋತ್ಸವದಲ್ಲಿ ಚಿನ್ನಲೇಪಿತ ಕಿರೀಟಧಾರಿಯಾಗಿ ಸಿಂಹಾಸನಾಸೀನರಾಗಿದ್ದ ನಿತ್ಯಾನಂದಗೆ ಅನುಯಾಯಿಗಳು ಜ್ಯೋತಿ ಬೆಳಗಿ ಪೂಜೆ ಸಲ್ಲಿಸಿದ್ದಾರೆ. ನಂತರ ಮತ್ತೊಂದು ಪೇಟತೊಟ್ಟ ಅವರನ್ನು ಪಲ್ಲಕ್ಕಿ ಮೇಲೆ ಕೂರಿಸಿ ಹೊತ್ತು ಮೆರವಣಿಗೆ ಮಾಡಲಾಗಿದೆ. ಸತ್ಸಂಗದ ಹೆಸರಿನಲ್ಲಿ ನಿತ್ಯಾನಂದ ನೀಡಿದ ಪ್ರವಚನಕ್ಕೆ ಅನುಯಾಯಿಗಳು ತಲೆದೂಗಿದರು. ಹಲವರು ಮನ ಬಂದಂತೆ ಕುಣಿದು ಕುಪ್ಪಳಿಸಿದ್ದೂ ಉಂಟು ಎಂದು ಹೇಳಲಾಗಿದೆ. ಮುಂಜಾನೆಯಿಂದಲೇ ಪ್ರಾರಂಭವಾದ ಕಾರ್ಯಕ್ರಮ ಹೊತ್ತು ಮುಳುಗುವವರೆಗೂ ನಿರಂತರವಾಗಿ ನಡೆದಿದೆ.
ಮರುಕಳಿಸಿದ ಅಪಮಾನ: ಅವತಾರೋತ್ಸವಕ್ಕೆ ಆಗಮಿಸುವಂತೆ ಧ್ಯಾನಪೀಠವು ಇ-ಮೇಲ್ ಮೂಲಕ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ ನೀಡಿತ್ತು. ವರದಿ ಮಾಡಲು ತೆರಳಿದ ಪತ್ರಕರ್ತರನ್ನು ನಿತ್ಯಾನಂದ ಅನುಯಾಯಿಗಳು ಮುಖ್ಯ ಗೇಟ್ ಬಳಿಯೇ ತಡೆದು, ಅಪಮಾನಿಸುವ ಹಳೆಯ ಚಾಳಿಯನ್ನು ಮುಂದುವರೆಸಿದರು. ಗೇಟ್ ಹೊರಗೆ, ಮರದ ಮೇಲೆ ಕುಳಿತು ಮಾಧ್ಯಮ ಪ್ರತಿನಿಧಿಗಳು ವೀಡಿಯೋ ಮತ್ತು ಫೋಟೋ ಚಿತ್ರೀಕರಿಸುತ್ತಿದ್ದಾಗ ನಿತ್ಯಾನಂದ ಅನುಯಾಯಿಗಳ ಗುಂಪೊಂದು ಅಡ್ಡಿಪಡಿಸಿತು. ಕೆಲವರು ಕ್ಯಾಮೆರಾ ಕಸಿದುಕೊಳ್ಳಲು ಯತ್ನಿಸಿದಾಗ ನಿತ್ಯಾ ಅನುಯಾಯಿಗಳು ಮತ್ತು ಪತ್ರಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಸಂಘಟನೆಗಳ ಪ್ರತಿಭಟನೆ: ನಿತ್ಯಾನಂದ ಅನುಯಾಯಿಗಳು ಪತ್ರಕರ್ತರ ಮೇಲೆ ದೌರ್ಜನ್ಯ ನಡೆಸಿ, ಅಪಮಾನವೆಸಗಿದ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಧ್ಯಾನಪೀಠದ ಎದುರು ಜಮಾಯಿಸಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮತ್ತು ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ವ್ಯಕ್ತಪಡಿಸಿದರು.
ಧ್ಯಾನಪೀಠದ ಮುಖ್ಯ ದ್ವಾರದ ಬಳಿ ಟಯರ್‌ಗಳಿಗೆ ಬೆಂಕಿ ಹಚ್ಚಿ, ನಿತ್ಯಾನಂದ ಭಾವಚಿತ್ರ ಸಹಿತ ಪ್ರಚಾರ ಫಲಕವನ್ನು ಹರಿದು ಬೆಂಕಿಗೆ ಹಾಕಿದರು. ನಿತ್ಯಾನಂದ ವಿರುದ್ಧ ಘೋಷಣೆ ಕೂಗಿ, ಆತನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ್ ಪಾಟೀಲ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಯೋಗೇಶ್ ಸಹಿತ ಹಲವರು ಭಾಗವಹಿಸಿದ್ದರು. ಇಷ್ಟೆಲ್ಲಾ ಘಟನೆಗಳಿಗೆ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು.