ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಿ: ಹೇಮಲತಾ
ಸೂಲಿಬೆಲೆ: ಗ್ರಾಮೀಣ ಭಾಗದಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಭಯಪಡದೇ ಆತ್ಮಸ್ಥೈರ್ಯದಿಂದ ಇದನ್ನು
ಎದುರಿಸುವ ಮನೋಭಾವ ಬೆಳೆಸಿಕೊಂಡು ಶೈಕ್ಷಣಿಕ ಭವಿಷ್ಯತ್ತನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಹೊಸಕೋಟೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಹೇಮಲತಾ ಹೇಳಿದ್ದಾರೆ.
ಹೊಸಕೋಟೆ ತಾ.ಜಡಿಗೇನಹಳ್ಳಿ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ವಸತ ನಿಲಯದಲ್ಲಿ 2013-14ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ 2 ದಿನದ ಪರೀಕ್ಷೆ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸರ್ಕಾರ ಇಲಾಖೆ ಮುಖಾಂತರ ಹತ್ತಾರು ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಇಲಾಖೆ ಮೂಲಕ ತಾಲೂಕಿನ ಎಲ್ಲ ವಸತಿ ನಿಲಯಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಚನ್ನಾಗಿ ಓದಿ ಇಲಾಖೆ, ಗುರುಗಳು ಹಾಗೂ ಹೆತ್ತವರಿಗೆ ಕೀರ್ತಿ ತನ್ನಿ. ವಿದ್ಯಾರ್ಥಿ ಜೀವನ ಉತ್ತಮ ಪಡಿಸಿಕೊಳ್ಳಲು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಹಿತ ನುಡಿದರು.
ಅಧ್ಯಕ್ಷತೆ ವಹಿಸಿದ್ದ ವಸತಿ ನಿಲಯದ ಪ್ರಾಂಶುಪಾಲ ಕೆ.ವಿ ನಾಗರಾಜು ಮಾತನಾಡಿ, ಎಸ್ಎಸ್ಎಲ್ಸಿ ತರಬೇತಿ ಕಾರ್ಯವನ್ನು ಜಿಲ್ಲಾ ಸಮಾಜ ಕಲ್ಯಾಧಿಕಾರಿ ಡಾ. ನಟರಾಜ್ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದು, ಇದರ ಉದ್ದೇಶ ಮಕ್ಕಳಲ್ಲಿ ಪರೀಕ್ಷೆ ಭಯವನ್ನು ಹೋಗಲಾಡಿಸಿ ಮಾನಸಿಕ ಧೈರ್ಯವನ್ನು ನೀಡುವುದಾಗಿದೆ.ನಿಲಯಗಳ ವಿದ್ಯಾಥಿಗಳು ಸಮಯವನ್ನು ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನಾನಾ ಭಾಗದ ಕಡೆಯಿಂದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಆಗಮಿಸಿದ್ದರು. ವಸತಿನಿಲಯದ ಎಲ್ಲ ನಿಲಯಪಾಲಕರು, ವಸತಿ ಶಾಲೆ ಶಿಕ್ಷಕರು ಭಾಗವಹಿಸಿದ್ದರು.