ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿಯಲ್ಲಿ ಕಾನೂನು ಸಾಕ್ಷರತಾ ಜಾಗೃತಿ

Rashmi Kasaragodu
Updated On : 29 Dec 2013, 1:45 am

ದೇವನಹಳ್ಳಿ: ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ, ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ  ಸಂಯುಕ್ತ ಆಶ್ರಯದಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಐದು ದಿನಗಳ ಕಾನೂನು ಸಾಕ್ಷರತಾ ಸಂಚಾರಿ ರಥದ ಮೂಲಕ ಸಾಕ್ಷರತಾ ಅರಿವಿನ ಕಾರ್ಯಕ್ರಮಕ್ಕೆ  ಇಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೈಬುನ್ನಿಸಾ ಹಾಗೂ ಸಿವಿಲ್ ನ್ಯಾಯಾಧೀಶೆ ಅನಿತಾ ಚಾಲನೆ ನೀಡಿದರು.
ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಸಿವಿಲ್ ನ್ಯಾಯಾಧೀಶೆ ಅನಿತಾ ಅವರು ಉದ್ಘಾಟಿಸಿ ಪ್ರತಿಯೊಬ್ಬರು ಸಾಮಾನ್ಯ ಜೀವನದಲ್ಲಿ ಅಗತ್ಯವಾಗಿರುವ ಅಗತ್ಯ ಕಾನೂನುಗಳನ್ನು ತಿಳಿದಿದ್ದರೆ ಅನೇಕ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬಹುದಾಗಿದೆ ಎಂದರು. ಸರ್ಕಾರಿ ಸಹಾಯಕ ಅಭಿಯೋಜಕರಾದ ಗಣಪತಿ ಗ್ರಾಹಕರ ಹಕ್ಕುಗಳ ಕಾಯಿದೆ ಬಗ್ಗೆ ಮತ್ತು ಮೋಟಾರು ವಾಹನ ಕಾಯಿದೆ ಬಗ್ಗೆ ವಕೀಲೆ ಮುನಿರತ್ನಮ್ಮ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಮುನಿರಾಜು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಉಪ ಪ್ರಾಂಶುಪಾಲ ಪರುಶುರಾಮ್ ವಹಿಸಿದ್ದರು. ಶಿಕ್ಷಕ ಕೆ.ಬಸವರಾಜು ಸ್ವಾಗತ ಕೋರಿದರು, ಉಪನ್ಯಾಸಕ ಗುರುರಾಜ್ ವಂದನೆ ಅರ್ಪಿಸಿದರು. ಸಾಕ್ಷರತಾ ಕಾನೂನಿನ ರಥ ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸಲು ತಾಲೂಕಿನ ವಿಜಯಪುರ, ವಿಶ್ವನಾಥಪುರ, ಬೂದಿಗೆರೆ, ನಾರಾಯಣಪುರ, ಚಿಕ್ಕಜಾಲ, ಬಿದಲೂರು, ಕಾರಹಳ್ಳಿ, ಚನ್ನರಾಯಪಟ್ಟಣ, ಕನ್ನಮಂಗಲ ಗ್ರಾಮಗಳಲ್ಲಿ ಸಂಚರಿಸಲಿದೆ ಎಂದು ವಕೀಲರ ಸಂಘದ ಕಾರ್ಯದರ್ಶಿ ಮುನಿರಾಜು ತಿಳಿಸಿದ್ದಾರೆ.
ಶಾಲಾ ವಾರ್ಷಿಕೋತ್ಸವ
ಮಾಗಡಿ: ಒಕ್ಕಲಿಗರ ಸಂಘದ ವತಿಯಿಂದ ನಡೆಯುತ್ತಿರುವ ಮಾನಸ ಪೂರ್ವ ಪ್ರಾಥಮಿಕ, ಶ್ರೀವಿದ್ಯಾನಿಧಿ ಹಾಗೂ ಕೆಂಪೇಗೌಡ ಪ್ರೌಢಶಾಲೆಯ 2013-14ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಡಿ.29 ರಂದು ಸಂಜೆ 4 ಗಂಟೆಗೆ ಇಲ್ಲಿನ ಶಾಲಾ  ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಡಿ.ಎಚ್. ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.
ಪಡಿತರ: ಜ.15 ಕಡೇ ದಿನ
ಸೂಲಿಬೆಲೆ: 2010ಕ್ಕಿಂತ ಪೂರ್ವದಲ್ಲಿ ವಿತರಣೆ ಮಾಡಿರುವ ಪಡಿತರ ಚೀಟಿಗಳ ನವೀಕರಣಕ್ಕೆ  ಆಹಾರ ಇಲಾಖೆ ಅವಕಾಶ ಕಲ್ಪಿಸಿದ್ದು, ಜ.15ರೊಳಗೆ ಪಡಿತರ ಚೀಟಿಗಳನ್ನು ನವೀಕರಣ ಮಾಡಿಕೊಳ್ಳುವಂತೆ ಇಲಾಖೆ ಗ್ರಾಪಂಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಸೂಚಿಸಿದೆ. ಈ ಹಿಂದೆ ನವೀಕರಣವನ್ನು ತಾತ್ಕಾಲಿಕವಾಗಿ ತಡೆಹಿಡಿದ್ದ ಇಲಾಖೆ ಮೂಲಕ ಮತ್ತೇ ಅವಕಾಶವನ್ನು ಒದಗಿಸಿರುವುದು  ವರದಾನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement