ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ವಸೂಲಿ ದಂಧೆಯವರಿಂದ ಹುರುಳಿಲ್ಲದ ಆರೋಪ

Rashmi Kasaragodu
Updated On : 29 Dec 2013, 1:43 am

ಕ.ಪ್ರ. ವಾರ್ತೆ  ರಾಮನಗರ  ಡಿ. 28
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ, ವಸೂಲಿ ಮಾಡುವುದನ್ನೇ ದಂಧೆ ಮಾಡಿಕೊಂಡಿರುವ ಕೆಲವರು ನನ್ನ ವಿರುದ್ಧ ಭ್ರಷ್ಟಾಚಾರ ನಡೆಸಿರುವ ಆರೋಪ ಮಾಡಿದ್ದಾರೆ. ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ದೊಡ್ಡಗಂಗವಾಡಿ ಗ್ರಾ.ಪಂ. ಅಧ್ಯಕ್ಷ ಡಿ.ಎಂ.ಮಹದೇವಯ್ಯ ಸ್ಪಷ್ಟಪಡಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡಗಂಗವಾಡಿ ಸಹಕಾರಿ ಸಂಘದ ಮಾಜಿ ಕಾರ್ಯದರ್ಶಿ ರಾಮಚಂದ್ರಯ್ಯ ಅವರು ಉಮೇಶ್, ಸುರೇಂದ್ರ ಮತ್ತು ಸುಂದರೇಶ್ ಎಂಬುವರನ್ನು ಬಳಸಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಾಮಾಜಿಕ ಕಾರ್ಯಕರ್ತರು ಎಂದು ಹೇಳಿಕೊಳ್ಳುವ ಸುಂದರೇಶ್, ಉಮೇಶ್ ಮತ್ತು ಸುರೇಂದ್ರ ಅವರು ಗ್ರಾಮ ಪಂಚಾಯ್ತಿ ಎಲ್ಲಾ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯನ್ನು  ದುರುಪಯೋಗ ಪಡಿಸಿಕೊಂಡು ಬ್ಲಾಕ್ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದರು. ಅವರು ಕೇಳುವ ಮಾಹಿತಿಯು ನೂರಾರು ಪುಟದಷ್ಟಿರುತ್ತದೆ. ಎಲ್ಲ ಮಾಹಿತಿಯನ್ನೂ ಸಿದ್ಧಪಡಿಸಿ, ಕಾನೂನಿನಂತೆ ಪ್ರತಿ ಪುಟಕ್ಕೆ ರು.2 ಶುಲ್ಕ ಪಾವತಿಸಿ ಮಾಹಿತಿ ಪಡೆಯಿರಿ ಎಂದು ಹೇಳಿದರೆ ಮಾಹಿತಿ ಪಡೆಯುವ ಬದಲು ಹಣ ನೀಡುವಂತೆ ಧಮಕಿ ಹಾಕುತ್ತಾರೆ. ನೀಡಲು ಒಪ್ಪದಿದ್ದರೆ ವೃಥಾ ಆರೋಪ ಮಾಡುತ್ತಾರೆ ಎಂದು ಹೇಳಿದರು.
ಹೇಗೆ ಸಾಧ್ಯ?: ದೊಡ್ಡಗಂಗವಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಆರು ವರ್ಷಗಳಲ್ಲಿ ಕೇವಲ ರು.3 ಲಕ್ಷ ವೆಚ್ಚದ ಎರಡು ಕಾಮಗಾರಿಗಳು ಮಾತ್ರ ನಡೆದಿದ್ದು, ಇದರಲ್ಲಿ ಲಕ್ಷಾಂತರ ರು. ಗೋಲ್ಮಾಲ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.  ಉಮೇಶ್ ಅವರ ತಾಯಿಗೆ ಒಟ್ಟು ರು.11625 ಸಂದಾಯವಾಗಿದೆ. ಇದರಲ್ಲಿ ಯಾರು ಅವರಿಗೆ ಹಣವನ್ನು ವಂಚಿಸಿಲ್ಲ. ಉಮೇಶ್ ಹೊಟೇಲ್ ನಡೆಸುವುದಕ್ಕೆ ದೇವಾಲಯದ ಕೊಠಡಿಯನ್ನು ಬಾಡಿಗೆಗೆ ನೀಡುವಂತೆ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದರು. ಬಾಡಿಗೆಗೆ ಕೊಡಲು ನಿರಾಕರಿಸಿದಾಗ ತಮ್ಮ ತಾಯಿಯ ಹಣವನ್ನು ವಂಚಿಸಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಮಹದೇವಯ್ಯ ಹೇಳಿದರು.
ಇಲ್ಲ ಸಲ್ಲದ ಆರೋಪ: ಗ್ರಾ.ಪಂ.ನ ಮಾಜಿ ಅಧ್ಯಕ್ಷೆ ಸುಮಂಗಲ ಮಾತನಾಡಿ, ನಾನು ಎರಡು ಉದ್ಯೋಗ ಚೀಟಿಗಳನ್ನು ಹೊಂದಿರುವ ಬಗ್ಗೆ ಆರೋಪ ಮಾಡಲಾಗಿದೆ. ಸುಮಂಗಲ ಎಂಬ ಹೆಸರಿನಲ್ಲಿ ಮಾತ್ರ ಶೌಚಾಲಯ, ತಡೆಗೋಡೆ ಕಾಮಗಾರಿಗೆ ಹಣ ಪಡೆದಿದ್ದೇನೆ. ನನ್ನ ಹೆಸರಿನಲ್ಲಿ ಒಂದು ಜಾಬ್ಕಾರ್ಡ್ ಮಾತ್ರ ಚಾಲ್ತಿಯಲ್ಲಿದೆ. ನನ್ನ ವಿರುದ್ಧ ಸತ್ಯಾಂಶ ಇಲ್ಲದ ಆರೋಪ ಮಾಡಿರುವ ಉಮೇಶ್, ಸುಂದರೇಶ್, ಸುರೇಂದ್ರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ನಿಂಗಮ್ಮ, ಸದಸ್ಯ ಮಹದೇವಯ್ಯ, ಮುಖಂಡ ಗೋಪಾಲ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement