ಶಾಲೆಗಳಲ್ಲಿ ಆರ್ಟಿಇ ದಾಖಲಿಗೆ ಅರ್ಜಿ ಸಲ್ಲಿಕೆ
ಹೊಸಕೋಟೆ: ತಾಲೂಕಿನಲ್ಲಿರುವ ಅನುದಾನ ರಹಿತ ಹಾಗೂ ಅನುದಾನಿತ ಖಾಸಗಿ ಶಾಲೆಗಳ (ಭಾಷೆ ಮತ್ತು ಮತೀಯ ಅಲ್ಪ ಸಂಖ್ಯಾತ ವರ್ಗದ ಶಾಲೆ ಹೊರತು ಪಡಿಸಿ) ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರಂತೆ ಶೇ.25ರ ಪ್ರಮಾಣದಲ್ಲಿ ಪೂರ್ವ ಪ್ರಾಥಮಿಕ ಹಾಗೂ ಒಂದನೇ ತರಗತಿಗೆ ದಾಖಲಿಗೆ ಅರ್ಜಿಗಳನ್ನು ಜ.7ರಿಂದ ಫೆ.8 ರವರೆಗೆ ಪೋಷಕರು ಸಲ್ಲಿಸಬಹುದು. ಆಯಾ ಶಾಲೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆದುಕೊಳ್ಳಬಹುದು. ನಿಯಮಗಳಿಗೆ ಅನುಸಾರವಾಗಿ ಲಭ್ಯವಿರುವ ಶೇ.25 ಸೀಟುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜ.6ರಂದು ಪ್ರಕಟಿಸುತ್ತಾರೆ. ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅನುಮೋದಿಸಿ ಪಟ್ಟಿಯನ್ನು ಸಂಬಂಧಪಟ್ಟ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಫೆ.28 ರೊಳಗೆ ಕಳುಹಿಸಿಕೊಡಲಿದ್ದು ಶಾಲೆಗಳಲ್ಲಿ ದಾಖಲೆ ಪ್ರಕ್ರಿಯೆ ಮಾ.3ರ ನಂತರ ಪ್ರಾರಂಭಗೊಳ್ಳಲಿದೆ ಎಂದು ಬಿಇಒಪಿ.ಬೈಲಾಂಜಿನಪ್ಪ ತಿಳಿಸಿದ್ದಾರೆ.
ಕ್ರಿಕೆಟ್ ಪಂದ್ಯಾವಳಿ
ಹೊಸಕೋಟೆ: ಪಟ್ಟಣದ ಶ್ರೀ ಅಣ್ಣಮ್ಮದೇವಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಮೇಲಿನ ಪೇಟೆಯಲ್ಲಿ ಅಣ್ಣಮ್ಮದೇವಿ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕದ ಅಂಗವಾಗಿ ಜ.11ರಿಂದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಪ್ರಥಮ ಸ್ಥಾನ 50,000 ರು., ದ್ವಿತೀಯ 25,000 ರು,. ನೀಡಲಾಗುವುದು. ತಂಡಗಳು ಜ.4ರೊಳಗೆ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 9916679367, 7259972779 ಸಂಪರ್ಕಿಸಬಹುದು.