ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶ್ರೀಗಂಧ ಮರ ಬೆಳೆಸಲು ರೈತರಿಗೆ ತರಬೇತಿ

Rashmi Kasaragodu
Updated On : 29 Dec 2013, 1:44 am

ದೇವನಹಳ್ಳಿ: ಬೆಂಗಳೂರು ಜಿಲ್ಲಾ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಮತ್ತು ಕರ್ನಾಟಕ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದೇವನಹಳ್ಳಿ ತಾಲೂಕು ರೈತರಿಗೆ ಶ್ರೀಗಂಧದ ಗಿಡಗಳನ್ನು ವೈಜ್ಞಾನಿಕವಾಗಿ ಬೆಳೆಸಲು ಅಗತ್ಯವಾದ ಗೊಬ್ಬರ ಬಳಸುವುದು ಮತ್ತು ಕೀಟಗಳ ರಕ್ಷಣೆಗಾಗಿ ಕ್ರಿಮಿನಾಶಕ ಔಷಧಗಳ ಸಿಂಪರಣೆ ಅಲ್ಲದೆ ನೀರಿನ ನಿರ್ವಹಣೆ ಬಗ್ಗೆ ತರಬೇತಿ ಶಿಬಿರ ಇಲ್ಲಿನ ಗುರುಭವನದಲ್ಲಿ  ಆಯೋಜಿಸಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸರಾವ್ ನೆರವೇರಿಸಿ ಶೇ.90 ಭಾಗ ಕರ್ನಾಟಕ ಮತ್ತು ತಮಿಳುನಾಡಿನ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿಗೆ ಶ್ರೀಗಂಧದ ಮರಗಳಿದ್ದು ಇತ್ತೀಚಿನ ವರ್ಷಗಳಲ್ಲಿ ಶ್ರೀಗಂಧದ ಮರಗಳ ಸಂಖ್ಯೆ ಕಡಿಮೆಯಾಗಿದೆ. ಶ್ರೀಗಂಧದ ಬೇಡಿಕೆ ಹೆಚ್ಚುತ್ತಿದೆ, ಮರವಿಜ್ಞಾನ ಸಂಸ್ಥೆಯಿಂದ ಸರಿಯಾದ ಮಾಹಿತಿ ಪಡೆದು ರೈತರು ತಮ್ಮ ಜಮೀನುಗಳಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಿದ್ದೇ ಆದರೆ 15 ವರ್ಷಗಳ ನಂತರ ಅದರ ಫಲ ಪಡೆಯಬಹುದಾಗಿದೆ ಎಂದರು.
ಶ್ರೀಗಂಧದ ಮರಗಳನ್ನು ಬೆಳೆಸಲು ಸರ್ಕಾರ ನಿಯಮಗಳನ್ನು ರೂಪಿಸಿದ್ದು ರೈತರು ಕಾನೂನು ಬದ್ಧವಾಗಿ
ತಮ್ಮ ಜಮೀನಿನಲ್ಲಿ ಬೆಳೆಸಿದ ಶ್ರೀಗಂಧದ ಮರಗಳು ಸರ್ಕಾರದ ಆಸ್ತಿಯಾಗಿರುವುದರಿಂದ ಯಾವುದೇ ದತ್ತಿ, ದಾನ, ಭೋಗ್ಯ ಅಥವ ಹಸ್ತಾಂತರ ಅಲ್ಲದೆ ಮರವನ್ನು ಕಡಿಯುವುದಕ್ಕಾಗಲಿ ಅಥವ ಮಾರಾಟ ಮಾಡುವುದಕ್ಕಾಗಲಿ ಅಧಿಕಾರವಿಲ್ಲ. ಕಟಾವಿಗೆ ಸಿದ್ಧವಾದ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಗಳ ಸೂಚನೆ ಮೇರೆಗೆ ಕಟಾವು ಮಾಡಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ಸಹಾಯಕ ಸಂಶೋಧಕ ಡಾ.ಸೋಮಶೇಖರ್ ಶ್ರೀಗಂಧದ ಬೀಜಗಳ ಆಯ್ಕೆ, ಬೀಜಗಳ ಬಿತ್ತನೆ, ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಮಿಶ್ರಣ ಉಪಯೋಗಿಸಿದರೆ ಉತ್ತಮ ದರ್ಜೆಯ ಸಸಿಗಳನ್ನು ಬೆಳೆಸುವ ಬಗ್ಗೆ ಮಾಹಿತಿ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ್, ಮರ ವಿಜ್ಞಾನ ಸಂಸ್ಥೆಯ ವಿಸ್ತರಣಾಧಿಕಾರಿ ಪ್ರಣೀತ ಪೌಲ್, ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸರಾವ್, ವಲಯ ಅರಣ್ಯಾಧಿಕಾರಿ ಆರ್. ಶಾಂತಕುಮಾರ ಸ್ವಾಮಿ ಉಪಸ್ಥತಿರಿದ್ದರು.
ದೇವನಹಳ್ಳಿ ತಾಲೂಕಿನಲ್ಲಿ ಶ್ರೀಗಂಧ ಬೆಳೆಯಲು ರೈತರು ಉತ್ಸುಕರಾಗಿದ್ದಾರೆ. ಆದರೆ ಫಸಲು ಬಂದ ನಂತರ ಮಾರಾಟ ಮಾಡುವ ಹಕ್ಕು ಇದ್ದರೆ ಮಾತ್ರ ರೈತರು ಹೆಚ್ಚಿನ ಆಸಕ್ತಿ ತೋರಬಲ್ಲರು ಎಂದು ರೈತ ಮುಖಂಡರು ತಿಳಿಸಿದರು. ವಿಜಯಲಕ್ಷ್ಮಿ ಸ್ವಾಗತ ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement