ಏಡ್ಸ್ ರೋಗದ ನಿಯಂತ್ರಣ ಮುಂಜಾಗೃತೆಯಿಂದ ಸಾಧ್ಯ
ಕನಕಪುರ: ಮಾನವಕುಲವನ್ನು ಕಾಡುತ್ತಿರುವ ಮಹಾಮಾರಿ ಏಡ್ಸ್ ರೋಗದ ನಿಯಂತ್ರಣ ಕೇವಲ ಮುಂಜಾಗೃತೆ,ತಿಳುವಳಿಕೆ ಹಾಗೂ ಪ್ರಚಾರಗಳಿಂದ ಮಾತ್ರ ಸಾಧ್ಯ ಎಂದು ಲಯನ್ಸ್ ಅಧ್ಯಕ್ಷ ಕೆ.ಜಿ. ಸತೀಶ್ ಹೇಳಿದ್ದಾರೆ. ಅವರು ಕನಕಪುರದ ರೂರಲ್ ಕಾಲೇಜು ಆವರಣದಲ್ಲಿ ಏಡ್ಸ್ ಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಆರ್ಇಎಸ್ ಮಾಜಿ ಕಾರ್ಯದರ್ಶಿ ಎಂ.ಎಲ್.ಶಿವಕುಮಾರ್ ಜಾಗೃತಿ ಜಾಥಾಕ್ಕೆ ಬಾವುಟ ಬೀಸಿ ಚಾಲನೆ ನೀಡಿದರು. ಏಡ್ಸ್ ಜಾಗೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ನಡೆದರು. ಏಡ್ಸ್ ಜಾಗೃತಿ ಅಂಗವಾಗಿ ಸಾರ್ವಜನಿಕರಿಗೆ ಕರಪತ್ರಗಳ ವಿತರಣೆ ನಡೆಯಿತು. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಸ್ವಚ್ಛಂದ ಜೀವನ ನಡೆಸದೆ ಸರಳ, ಸಜ್ಜನರಾಗಿ ಬಾಳುವುದಾಗಿ ಪ್ರಮಾಣ ಸ್ವೀಕರಿಸಿದರು. ಆರೋಗ್ಯ ವೈದ್ಯಾಧಿಕಾರಿಗಳಾದ ಮರಿಯಪ್ಪ ಹಾಗೂ ಪಂಚಲಿಂಗೇಗೌಡ ಏಡ್ಸ್ರೋಗದ ಬಗ್ಗೆ ಉಪನ್ಯಾಸ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಮುಖ್ಯಅತಿಥಿಗಳಾಗಿ ಗ್ರಾಮವಿದ್ಯಾ ಪ್ರಚಾರಕ ಸಂಘದ ಕಾರ್ಯದರ್ಶಿ ಸಿ.ರಮೇಶ್, ಲಯನ್ಸ್ ಪದಾಧಿಕಾರಿಗಳಾದ ಎಂ.ಎನ್. ಚಂದ್ರಶೇಖರ್, ಮರಸಪ್ಪರವಿ, ಪ್ರಶಾಂತ್, ಶಿವಕುಮಾರ್, ಬಾಲರಾಜು ಪಾಲ್ಗೊಂಡಿದ್ದರು.