ಚುನಾವಣೆ ನಂತರವೂ ಸಿದ್ದರಾಮಯ್ಯ ಸಿಎಂ
ಮಾಗಡಿ: ಲೋಕಸಭಾ ಚುನಾವಣೆ ನಂತರವೂ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯಲಿದ್ದಾರೆ. ಯಾವುದೇ ಅನುಮಾನ ಬೇಡ ಎಂದು ಸಂಸದ ಎಚ್. ವಿಶ್ವನಾಥ್ ಅಭಿಪ್ರಾಯಪಟ್ಟರು. ಅವರು ಮೋಟಗಾನಹಳ್ಳಿಯಲ್ಲಿ ಏರ್ಪಡಿಸಿದ್ದ ಶ್ರೀ ಆಧಿಶಕ್ತಿ ಮಾರಮ್ಮದೇವಿ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇತ್ತೀಚೆಗೆ ಕೇಂದ್ರ ಸರ್ಕಾರ ಮಹತ್ವದ ಆಹಾರ ಕಾಯ್ದೆ ಮಸೂದೆಯನ್ನು ಜಾರಿ ತಂದಿದೆ. ರಾಜ್ಯದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ರೈತರ ಸಾಲಮನ್ನಾ ಯೋಜನೆ, ಗ್ರಾಮಿಣ ಭಾಗದ ಅಭಿವೃದ್ಧಿಗೆ ನರೇಗ ಯೋಜನೆ ಇವೆಲ್ಲವೂ ಕಾಂಗ್ರೆಸ್ನ ಮಹತ್ವದ ಕೊಡುಗೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಆಡಳಿತವನ್ನು ಜನತೆ ಮೆಚ್ಚಿದ್ದಾರೆ. ಸಿದ್ದರಾಮಯ್ಯ ಅವರು ಸಹ ಜನರ ವಿಶ್ವಾಸ ಗಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲವಿನ ಕುರಿತು ಅನುಮಾನವಿಲ್ಲ ಎಂದರು. ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾಳಜಿ ನಿಜಕ್ಕೂ ಮೆಚ್ಚುವಂತಹದ್ದು, ಅವರ ದೂರದೃಷ್ಟಿ, ಬಡವರ, ರೈತರ ಪರವಾದ ಯೋಜನೆಗಳು ಶ್ಲಾಘನೀಯ ಎಂದರು.
ಶಾಸಕ ಗೋಪಾಲಯ್ಯ, ಮಾಜಿ ಶಾಸಕ ಅಂಜನಮೂರ್ತಿ, ಬಿಬಿಎಂಪಿ ಸದಸ್ಯರಾದ ರವೀಂದ್ರ, ನಾಗರಾಜು, ಕೃಷ್ಣಪ್ಪ, ಹನುಮಂತರಾಯಪ್ಪ, ರೇಣುಕಪ್ಪ, ಬಿಬಿಎಂಪಿ ಮಾಜಿ ಉಪಮೇಯರ್ ಬಿ. ಪುಟ್ಟರಾಜು, ಜಿ.ಪಂ.ಸದಸ್ಯ ರಂಗಸ್ವಾಮಿ, ತಾಲೂಕು ಪಂಚಾಯ್ತಿ ಸದಸ್ಯ ಅನುಸೂಯಮ್ಮ ಕಾಂತರಾಜು, ಮೋಟಗಾನಹಳ್ಳಿ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್, ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್, ಸಿ.ಆರ್. ಗೌಡ,ಜಯರಾಮು, ನಯಾಜ್, ಶಶಾಂಕ್, ನರಸಿಂಹಯ್ಯ, ಗಂಗಾಂಭಿಕೆ ರೇಣುಕಾಪ್ರಸಾದ್, ಪ್ರಕಾಶ್, ರಾಮಣ್ಣ ಸೇರಿದಂತೆ ಅನೇಕ ಗಣ್ಯರು ಮಾರಮ್ಮ ದೇವಿ ಮಹೋತ್ಸವದಲ್ಲಿ ಭಾಗವಹಿಸಿದ್ದರು.