ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಕಣಾಚಾರಿ ಕುರಿತ ಸಂಶೋಧಕರ ವಾದ ಅತಾರ್ಕಿಕ

Rashmi Kasaragodu
Updated On : 30 Dec 2013, 2:50 am

ಕ.ಪ್ರ.ವಾರ್ತೆ     ದೊಡ್ಡಬಳ್ಳಾಪುರ     ಡಿ.29
ದೇವಶಿಲ್ಪಿ ಜಕಣಾಚಾರಿ ಇದ್ದನೆಂಬುದರ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಜಕಣಾಚಾರಿ ಚಾರಿತ್ರಿಕ ವ್ಯಕ್ತಿಯಲ್ಲ ಎಂದು ಹೇಳುವ ಮೂಲಕ ಕೆಲ ಸಂಶೋಧಕರು ಅತಾರ್ಕಿಕ ವಾದ ಮಂಡಿಸಲು ಹೊರಟಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷ ಆರ್. ಶ್ರೀನಿವಾಸ್ ಹೇಳಿದರು.
ಇಲ್ಲಿನ ಬಸವಣ್ಣ ದೇವಾಲಯದಲ್ಲಿ ಭಾನುವಾರ ನಡೆದ ದೇವಶಿಲ್ಪಿ ಜಕಣಾಚಾರಿ ಸ್ಮರಣ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಕಣಾಚಾರಿ ಸ್ವಾರ್ಥವಿಲ್ಲದೆ ನಾಡು-ನುಡಿ, ಸಂಸ್ಕೃತಿ-ಪರಂಪರೆಯ ಸೇವೆ ಮಾಡಿದ ಮಹಾತ್ಮ. ದೇಗುಲ ಶಿಲ್ಪಕ್ಕೆ ತನ್ನದೇ ಆದ ಚಾರಿತ್ರಿಕ ಸ್ಪರ್ಶ ನೀಡದ ವ್ಯಕ್ತಿ. ಎಲ್ಲೂ ತನ್ನ ಹೆಸರನ್ನು ಉಲ್ಲೇಖ ಮಾಡಿಕೊಂಡಿಲ್ಲ ಎಂಬುದು ಆತನ ಹಿರಿತನದ ಸಾಕ್ಷಿಯೇ ಹೊರತು ಅವನು ಇದ್ದಿರಲೇ ಇಲ್ಲ ಎಂಬುದಕ್ಕೆ ಪುರಾವೆಯಲ್ಲ. ಪಟ್ಟಭದ್ರಹಿತಾಸಕ್ತಿಗಳು ಈ ರೀತಿಯ ತಪ್ಪು ಹೇಳಿಕೆಗಳ ಮೂಲಕ ಸಮಾಜವನ್ನು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟ ನಿರಂತರ: ರಾಜ್ಯದಲ್ಲಿ ಬಹಳಷ್ಟು ಸಂಖ್ಯೆಯಲ್ಲಿರುವ ವಿಶ್ವಕರ್ಮರು ಇಂದು ಸಂಘಟಿತರಾಗಿದ್ದಾರೆ. ಆದರೆ ರಾಜಕೀಯವಾಗಿ ಅವಕಾಶಗಳನ್ನು ಕೊಡದಿರುವುದು ಖಂಡನೀಯ. ಜನಾಂಗವನ್ನು ಪ್ರತಿನಿಧಿಸುವ ಶಾಸಕರು, ಸಂಸದರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳೂ ಇಲ್ಲದಿರುವುದು ದುರಂತ. ಜನಾಂಗವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಮೇಲೆತ್ತುವ ಹೊಣೆಗಾರಿಕೆ ಸರ್ಕಾರದ್ದು ಎಂದ ಅವರು, ಹೋರಾಟದ ಫಲವಾರಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಯಾಗುತ್ತಿದೆ ಎಂದರು.
ಹಂಪಿ ಉತ್ಸವದಲ್ಲಿ ಕಡೆಗಣನೆ: ವಿಶ್ವಕರ್ಮರನ್ನು ಹಂಪಿ ಉತ್ಸವದಲ್ಲಿ ಕಡೆಗಣಿಸಲಾಗುತ್ತಿದೆ. ಶಿಲ್ಪಕಲೆಯ ಮೂಲಕ ಜಗತ್ತಿನ ಗಮನ ಸೆಳೆದ ಹಂಪಿ, ಬೇಲೂರು, ಹಳೇಬೀಡು, ಪಟ್ಟದಕಲ್ಲು ಸೇರಿದಂತೆ ಅನೇಕ ದೇಗುಲಗಳ ನಿರ್ಮಾಣದ ಹಿಂದೆ ವಿಶ್ವಕರ್ಮರ ಪರಿಶ್ರಮ ಇದೆ. ಸರ್ಕಾರ ಹಂಪಿ ಉತ್ಸವದಲ್ಲಿ ಸಮಾಜದ ಗಣ್ಯರಿಗೆ ಅವಕಾಶ ಕೊಡಬೇಕು. ಕಡೆಗಣಿಸಿದರೆ ಪ್ರತಿಭಟನೆಗೆ ಸಜ್ಜಾಗಬೇಕಾದೀತು ಎಂದರು.
ಜಕ್ಕಣ್ಣ ಸ್ಮರಣೆ: ವಿಶ್ವಕರ್ಮ ಮಹಾಸಭಾ ನೇತೃತ್ವದಲ್ಲಿ ದೇವಶಿಲ್ಪಿ ಜಕಣಾಚಾರಿ ಸ್ಮರಣ ದಿನಾಚರಣೆಯನ್ನಾಗಿ  ಜ. 1ರಂದು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಅಲ್ಲದೆ ವಿಶ್ವಕರ್ಮ ಮಹಾಸಭಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟಿಸಲಾಗುವುದು. ಇದಕ್ಕಾಗಿ ರಾಜ್ಯಾದ್ಯಂತ ಸಂಘಟನೆ ಮಾಡಲಾಗುತ್ತಿದೆ. 67 ಅಡಿ ಎತ್ತರದ ವಿಶ್ವಕರ್ಮ ಪುತ್ಥಳಿಯನ್ನು ಸದ್ಯದಲ್ಲೇ ಮೈಸೂರು ರಸ್ತೆಯಲ್ಲಿ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಮಹಾಸಭಾದ ರಾಜ್ಯ ಮಹಿಳಾಧ್ಯಕ್ಷೆ ಆರ್.ವಿ.ಭಾಗ್ಯಮ್ಮ, ಪ್ರ.ಕಾರ್ಯದರ್ಶಿ ವೈ.ಡಿ.ಶ್ರೀನಿವಾಸಮೂರ್ತಿ, ಎಚ್.ಪಿ. ಷಣ್ಮುಖಾಚಾರ್, ಹಿರಿಯ ಮುಖಂಡ ಜಗನ್ನಾಥಾಚಾರ್, ಪುಟ್ಟಶಾಮಾಚಾರ್, ಜಿಲ್ಲಾ ಮುಖಂಡ ಸುಬ್ರಹ್ಮಣ್ಯಾಚಾರ್, ಕೃಷ್ಣಾಚಾರ್, ರಘು, ಹರೀಶ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement