ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಾತಿ ಜನಗಣತಿ: ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ

Rashmi Kasaragodu
Updated On : 30 Dec 2013, 2:50 am

ಕ.ಪ್ರ.ವಾರ್ತೆ     ರಾಮನಗರ     ಡಿ.29
ಪರಿಶಿಷ್ಟ ಜಾತಿ ಮತ್ತು ವರ್ಗದ ಜನಾಂಗಕ್ಕೆ ಕಲ್ಪಿಸಿರುವಂತೆ ಹಿಂದುಳಿದ ವರ್ಗಕ್ಕೂ ಸಮರ್ಪಕ ಮೀಸಲಾತಿ ಕಲ್ಪಿಸಲು ಜಾತಿ ಜನಗಣತಿಯನ್ನು ನಡೆಸಲು ಸರ್ಕಾರ ತೆಗೆದುಕೊಂಡಿರುವ ಕ್ರಮ ಸೂಕ್ತವಾಗಿದೆ ಎಂದು  ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಸಿದ್ಧಗಂಗಯ್ಯ ತಿಳಿಸಿದರು.
ದೇವರಾಜ ಅರಸು ಅವರು ಹಿಂದುಳಿದ ವರ್ಗದ ಜನರಿಗೆ ಉತ್ತಮ ಸ್ಥಾನಮಾನ ಕಲ್ಪಿಸಿಕೊಟ್ಟು ಜನಾಂಗವನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದ್ದರು.
ಅವರ ನಂತರ ಇದೀಗ ಸಿದ್ಧರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿರುವುದು ಹಿಂದುಳಿದ ವರ್ಗದ ಜನರ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ ಎಂದು ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.
ಸಮಾಜದಲ್ಲಿ ಎಸ್ಸಿ, ಎಸ್ಟಿ ಜನಾಂಗಕ್ಕೆ ಶೇ.18ರಷ್ಟು ಮೀಸಲಾತಿ ಕಲ್ಪಿಸಿರುವಂತೆ ಹಿಂದುಳಿದ ವರ್ಗದ ಜನಾಂಗಕ್ಕೆ ಶೇ.32ರಷ್ಟು ಮೀಸಲಾತಿ ಸಮ ಪ್ರಮಾಣದಲ್ಲಿ ವಿತರಣೆಯಾಗಬೇಕಾದರೆ ಜಾತಿಗಣತಿ ನಡೆಸುವುದು ಅವಶ್ಯವಾಗಿದೆ.
ಅದರಂತೆ ಇಡಿ ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಎಂಬಂತೆ ಕರ್ನಾಟಕದಲ್ಲಿ ಜಾತಿ ಜನಗಣತಿ ನಡೆಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.  
ಜ.12ರಂದು ಬೆಂಗಳೂರಿನಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಬೃಹತ್ ಸಮಾವೇಶ ಹಾಗೂ ಒಕ್ಕೂಟದ ದಶಮಾನೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಸಮಾವೇಶದಲ್ಲಿ ಹಿಂದುಳಿದ ಜನಾಂಗದ ಅಭಿವೃದ್ಧಿಗೆ ಹಲವು ಹಕ್ಕೊತ್ತಾಯಗಳನ್ನು ಮಂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ತಿಳಿಸಿದರು.
ರಾಜ್ಯದಲ್ಲಿ ಲಿಂಗವಂತ ಹೆಸರಿನ ಸುಮಾರು 18 ಉಪ ಜಾತಿಗಳು ತಮ್ಮ ನೈಜ ಜಾತಿಯನ್ನು ತಿರುಚಿ 2ಎ ಮೀಸಲಾತಿಯನ್ನು ಪಡೆದುಕೊಂಡು ರಾಜಕೀಯ ಸ್ಥಾನ ಸೇರಿದಂತೆ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಇದರಿಂದ ಅರ್ಹರಿಗೆ ವಂಚನೆಯಾಗಿದ್ದು ಇದರ ಬಗ್ಗೆ ಸಮಗ್ರ ತಿದ್ದುಪಡಿ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ, ಸಮುದಾಯ ಭವನ ಸೇರಿದಂತೆ ಇತರೆ ಅಭಿವೃದ್ಧಿಗೆ ಸರ್ಕಾರ ರು.75 ಕೋಟಿಯನ್ನು ಕಳೆದ ಸಾಲಿನ ಬಜೆಟ್ನಲ್ಲಿ ಬಿಡುಗಡೆಗೊಳಿಸಿದ್ದು, ಮುಂದಿನ 2004ರ ಬಜೆಟ್ನಲ್ಲಿ ರು.200 ಕೋಟಿ ನೀಡಬೇಕೆಂದು ಮನವಿ ಸಲ್ಲಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಕಾಳೇಗೌಡ, ಉಪಾಧ್ಯಕ್ಷ ಸುರೇಶ್ ಎಂ.ಲಾತೂರ್, ಬಿ.ಉಮೇಶ್, ಕಾರ್ಯದರ್ಶಿ ಜೆ.ಡಿ.ಗೋಪಾಲ್, ಜಿಲ್ಲಾಧ್ಯಕ್ಷ ಬೀರಯ್ಯ, ಪ್ರಧಾನ ಕಾರ್ಯದರ್ಶಿ ಟಿ.ವಿ.ನಾರಾಯಣ, ರಾಮಕೃಷ್ಣ, ಗುರುವೇಗೌಡ, ಸುಜ್ಞಾನ ಮೂರ್ತಿ, ಅಶೋಕ್ ಕುಮಾರ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement