ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತೆರೆದ ಚರಂಡಿ ಮುಚ್ಚದ ಪುರಸಭೆ ಅಧಿಕಾರಿಗಳು

Rashmi Kasaragodu
Updated On : 30 Dec 2013, 2:50 am

ಮಾಗಡಿ ಪಟ್ಟಣದ ಪ್ರಕಾಶ್  ಹೊಟೇಲ್ ಬಳಿ ಇರುವ ಮುಖ್ಯ ರಸ್ತೆ ತಿರುವಿನಲ್ಲಿ ತೆರೆದ ಚರಂಡಿಗೆ ಹತ್ತಾರು ವಾಹನ ಚಾಲಕರು, ಪಾದಚಾರಿಗಳು ಬಿದ್ದು ಗಾಯಗೊಂಡರೂ ಪುರಸಭೆ ಅಧಿಕಾರಿಗಳು ಮಾತ್ರ ನಿದ್ದೆಯಿಂದ ಎದ್ದಿಲ್ಲ. ಪುರಸಭೆ ಸಿಬ್ಬಂದಿಗಳು ಚರಂಡಿಯಲ್ಲಿದ್ದ ತ್ಯಾಜವನ್ನು ಹೊರಹಾಕಲು ಚರಂಡಿಗೆ ಹಾಕಿದ್ದ ಚಪ್ಪಡಿಯನ್ನು ತೆಗೆದಿದ್ದರು. ತ್ಯಾಜ್ಯ ಹೊರತೆಗೆದು ಆರು ತಿಂಗಳಾದರೂ ಚರಂಡಿಗೆ ಕಲ್ಲು ಚಪ್ಪಡಿ ಮುಚ್ಚುವ ಪ್ರಯತ್ನ ಮಾಡಲೇ ಇಲ್ಲ.  ಮಾಗಡಿ ಪಟ್ಟದ ಹೃದಯಭಾಗವಾಗಿರುವ ಕೆಂಪೇಗೌಡ ವೃತ್ತದ ಬಳಿ ಇರುವ ಈ ಚರಂಡಿಯ ರಸ್ತೆ ಮೂಲಕವೇ ತಿರುಮಲೆ ಗ್ರಾಮಕ್ಕೆ ವಾಹನಗಳು ಹಾಗೂ ಪಾದಚಾರಿಗಳು ಸಂಚರಿಸಬೇಕು. ರಾತ್ರಿ ವೇಳೆ ಕೆಲ ಸಮಯವಂತೂ ವಿದ್ಯುತ್ ದೀಪ ಸಹ ಇರುವುದಿಲ್ಲ. ವಾಹನ ಚಾಲಕರು, ಪಾದಚಾರಿಗಳು ಈ ರಸ್ತೆಯಲ್ಲಿ ಹಾದು ಹೋಗುವಾಗ ಈ ಕಿರಿದಾದ ರಸ್ತೆ ಬದಿ ಇರುವ ಚರಂಡಿಗೆ ಬಿದ್ದು, ಗಾಯಗೊಂಡು ಚರಂಡಿ ಎದುರಿಗೆ ಇರುವ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿರುವ ಅನೇಕ ಉದಾಹರಣೆಗಳು ಇದೆ. ಈ ಸಂಬಂಧ ಅನೇಕ ಗಾಯಾಳುಗಳು ಪುರಸಭೆ ಸಿಬ್ಬಂದಿಗಳಿಗೆ ದೂರು ನೀಡಿದರೂ ಪುರಸಭೆ ಸಿಬ್ಬಂದಿಗಳು ಮಾತ್ರ ತೆರೆದ ಚರಂಡಿಗೆ ಕಲ್ಲುಚಪ್ಪಡಿ ಹಾಕುವ ಗೋಜಿಗೆ ಹೋಗಿಲ್ಲ. ಇನ್ನೂ ಮುಂದಾದರೂ ಸಂಬಂಧಪಟ್ಟ ಪುರಸಭಾ ಸದಸ್ಯರು, ಪುರಸಭೆ ಸಿಬ್ಬಂದಿಗಳನ್ನು ಎಚ್ಚರಿಸಿ ತೆರೆದ ಚರಂಡಿಗೆ ಕಲ್ಲು ಚಪ್ಪಡಿಯಿಂದ ಮುಚ್ಚಿಸುವ ಕೆಲಸ ಮಾಡಬೇಕಿದೆ.
 ದಿವ್ಯಶ್ರೀ ತಿರುಮಲೆ.



ಲೈಟ್ ಅಳವಡಿಸದೇ ಕಿರಿಕಿರಿ
ಚನ್ನಪಟ್ಟಣ ತಾಲೂಕಿನ ರಾಮಮ್ಮನ ಕೆರೆ ಏರಿಯ ಮೇಲೆ ಅಳವಡಿಸಲಾಗಿರುವ ವಿದ್ಯುತ್ ಕಂಬಗಳಿಗೆ ಸಮರ್ಪಕವಾಗಿ ಲೈಟ್ ಅಳವಡಿಸಿಲ್ಲ.  ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅದರಲ್ಲೂ ಹೆಚ್ಚಿನದಾಗಿ ಪಾದಚಾರಿಗಳಿಗೆ ಸಾಕಷ್ಟು ಕಿರಿಕಿರಿ ಅನುಭವಿಸುವಂತಾಗಿದೆ. ತಿಟ್ಟಮಾರನಹಳ್ಳಿ ಸೇರಿದಂತೆ ಈಭಾಗದ ಸಾಕಷ್ಟು ಗ್ರಾಮಗಳಿಗೆ ತೆರಳುವ ಮಂದಿಗೆ ಇದು ಅನುಕೂಲಕಾರಿ ಎನಿಸಲಿದ್ದು ಸಾಕಷ್ಟು ಮಂದಿ ಕಾಲುನಡುಗೆಯಲ್ಲಿ, ಇನ್ನುಕೆಲ ಮಂದಿ ಬೆಳ್ಳಂ ಬೆಳಿಗ್ಗೆ ಹಾಗೂ ಸಂಜೆ ವೇಳೆ ಈ ಮಾರ್ಗ ವಾಯುವಿಹಾರಕ್ಕೆ ತೆರಳಲಿದ್ದು ಈ ಮಾರ್ಗದಲ್ಲಿ ವಿದ್ಯುತ್ ದೀಪಗಳಿಲ್ಲದಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ.
ಪ್ರಧಾನಮಂತ್ರಿ ಗ್ರಾಮ್ಸಡಕ್ ಯೋಜನೆಯಡಿ 10 ವರ್ಷಗಳ ಹಿಂದೆಯೇ ರಸ್ತೆ ನಿರ್ಮಾಣ ಕಾರ್ಯ ಕೈಗೊಂಡಿದ್ದು ಇದೇ ವೇಳೆಯಲ್ಲಿ ವಿದ್ಯುತ್ ದೀಪವನ್ನು ಅಳವಡಿಸಲಾಗಿದೆಯಾದರೂ ಇದನ್ನು ಸೂಕ್ತ ನಿರ್ವಹಣೆ ಮಾಡದ ಕಾರಣ ವಿದ್ಯುತ್ ದೀಪಗಳು ಕೆಟ್ಟು ನಿಂತಿವೆ. ರಾತ್ರಿ ಮತ್ತು ಬೆಳಗಿನ ಜಾವ ಈ ಮಾರ್ಗವಾಗಿ ತಿರುಗಾಡುವ ಮಂದಿಗೆ ಕತ್ತಲಲ್ಲಿ ತಿರುಗಾಡುವಂತಾಗಿದ್ದು ಕಳ್ಳಕಾಕರ ಹಾವಳಿಗೆ ಸಿಲುಕಿದ ಉದಾಹರಣೆಯೂ ಸಾಕಷ್ಟಿವೆಯಾದರೂ ಸಂಬಂಧಿಸಿದ ಮಂದಿ ಮಾತ್ರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.



ಮೂತ್ರಾಲಯ ಸರಿಪಡಿಸಿ
ರಾಮನಗರದ ಎಂ.ಜಿ. ರಸ್ತೆಗೆ ಹೊಂದಿಕೊಂಡಂತೆ ನಗರಸಭೆಯು ಮೂತ್ರಾಲಯವೊಂದನ್ನು ನಿರ್ಮಿಸಿದೆ. ಈ ಮೂತ್ರಾಲಯದ ಒಂದು ಗೋಡೆ ವರ್ಷದ ಹಿಂದೆಯೇ ಉರುಳಿಬಿದ್ದು, ಜನ ಬಳಕೆಗೆ ನಿರುಪಯುಕ್ತವಾಗಿದೆ.
ಎಂ.ಜಿ. ರಸ್ತೆಯಲ್ಲಿ ನೂರಾರು ಅಂಗಡಿಗಳಿದ್ದು, ಸಾವಿರಾರು ಮಂದಿ ಈ ರಸ್ತೆಯಲ್ಲಿ ದಿನನಿತ್ಯ ಸಂಚರಿಸುತ್ತಾರೆ. ದೇಹಬಾಧೆ ತೀರಿಸಿಕೊಳ್ಳಲು ಮೂತ್ರಾಲಯ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಕೆಟ್ಟು ನಿಂತಿರುವ ಮೂತ್ರಾಲಯದ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡುವುದರಿಂದ ಗಬ್ಬು ವಾಸನೆ ಬೀರುತ್ತಿದೆ.
ರಸ್ತೆ ಬದಿಯಲ್ಲೇ ಮೂತ್ರ ವಿಸರ್ಜನೆ ಮಾಡುವುದರಿಂದ ಈ ರಸ್ತೆಯಲ್ಲಿ ಮಹಿಳೆಯರು ಓಡಾಡಲು ಮುಜುಗರ ಅನುಭವಿಸುವಂತಾಗಿದೆ. ಉರುಳಿ ಬಿದ್ದಿರುವ ಗೋಡೆ ಮೂತ್ರಾಲಯದ ಕಣ್ಣೆದುರಿಗೇ ಇದ್ದರೂ ಸರಿಪಡಿಸದ ನಗರಸಭೆ ಅಧಿಕಾರಿಗಳು ಸಾರ್ವಜನಿಕ ಕುಂದುಕೊರತೆ ಸಭೆ ನಡೆಸುತ್ತಿರುವುದು ವಿಪರ್ಯಾಸವೇ ಸರಿ. ಇನ್ನಾದರೂ ಇತ್ತ ಕಡೆ ಗಮನ ಹರಿಸಿ ಉರುಳಿ ಬಿದ್ದಿರುವ ಗೋಡೆಯನ್ನು ಸರಿಪಡಿಸಿ, ಮೂತ್ರಿಗಳಿಗೆ ಅನುಕೂಲ ಕಲ್ಪಿಸಲಿ.
 ಮಂಜುನಾಥ್, ರಾಮನಗರ




ಕೋ-ಆಪರೇಟಿವ್ ಸೊಸೈಟಿ ಶತಮಾನೋತ್ಸವ
ಮಾಗಡಿ: ಶತಮಾನೋತ್ಸವದ ಸವಿ ನೆನಪಿಗಾಗಿ ನಿರ್ಮಿಸಲಿರುವ ನೂತನ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರು ದೇಣಿಗೆ ನೀಡುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ಭರವಸೆ ನೀಡಿದರು. ಅವರು ಮಾಗಡಿ ಟೌನ್ ಕೋ-ಆಪರೇಟಿವ್ ಸೊಸೈಟಿ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ದೇಶದ ಅಭವೃದ್ಧಿಯಲ್ಲಿ ಸಹಕಾರಿ ಕ್ಷೇತ್ರಗಳು ಅತ್ಯಂತ ಮಹತ್ವದ ಪಾತ್ರ ವಹಿಸಿವೆ. ಬಡವರ ಹಾಗೂ ರೈತರ ಅನುಕೂಲಕ್ಕಾಗಿ ಸಹಕಾರಿ ಕ್ಷೇತ್ರ ತನ್ನ ಕಾರ್ಯಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಬರಬೇಕಿದೆ ಎಂದರು. ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾತನಾಡಿ ಬಡವರ, ರೈತರ ಕಲ್ಯಾಣಕ್ಕಾಗಿ ಸಹಕಾರಿ ಕ್ಷೇತ್ರಗಳು ದುಡಿಯುವ ಕಾಲ ದೂರವಾಗಿ ಜಾತಿಗೊಂದು ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವುದು ವಿಷಾದನೀಯ. ಸ್ನೇಹ,ಪ್ರೀತಿ ವಿಶ್ವಾಸದ ನಂಬಿಕೆಯ ತಳಹದಿಯ ಮೇಲೆ ಸಹಕಾರಿ ಕ್ಷೇತ್ರ ಕಾರ್ಯನಿರ್ವಹಿಸುವಂತಾಗಬೇಕು. ಶತಮಾನೋತ್ಸವ ಕಟ್ಟಡ ನಿರ್ಮಾಣ ಎಲ್ಲರ ಸಹಕಾರದಿಂದ ನಿರ್ಮಾಣವಾಗಲಿ, ಕಟ್ಟಡ ನಿರ್ಮಾಣಕ್ಕೆ 2.5 ಲಕ್ಷ ರು ದೇಣಿಗೆ ನೀಡುವುದಾಗಿ ಎಚ್.ಎಂ. ರೇವಣ್ಣ ಭರವಸೆ ನೀಡಿದರು. ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಆರ್. ರಂಗನಾಥಶೆಟ್ಟಿ ಸಂಘದ ಕಾರ್ಯಚಟವಟಿಕೆ ಹಾಗೂ ಶತಮಾನೋತ್ಸವ ಸಮಾರಂಭದ ವೆಚ್ಚದ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸುಮಾರು 80 ಕ್ಕೂ ಹೆಚ್ಚು ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಎಲ್ಲಾ ಸದಸ್ಯರಿಗೂ ನೆನಪಿನ ಕಾಣಿಗೆ ನೀಡಿ ಗೌರವಿಸಿದರು. ನಿರ್ದೇಶಕರಾದ ಕುಮಾರಸ್ವಾಮಿ, ಗೋಪಾಲ್ ದೀಕ್ಷಿತ್, ಮೋಹನ್, ಎಸ್.ಮಹದೇವ್, ಟಿ.ಭೋಗೇಶ್, ವಿ.ಪಿ. ಲೋಕೇಶ್, ಎಸ್.ಎ. ಮುದ್ದಹನುಮಯ್ಯ, ಸುಶೀಲಮ್ಮ, ಕಾರ್ಯದರ್ಶಿ ಟಿ.ಎನ್. ನರಸಿಂಹಮೂರ್ತಿ, ಪಾನ್ಯಂ ನಟರಾಜು, ಸಹಕಾರಿ ಸಹಾಯಕ ಅಸ್ಲಂಪಾಷ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎನ್. ಭಾಸ್ಕರ್, ಚಿದಾನಂದ್, ಶಿವಶಂಕರಯ್ಯ  ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಲಯನೆಸ್ ಜಿಲ್ಲಾ ಮುಖಂಡರ ಭೇಟಿ
ದೊಡ್ಡಬಳ್ಳಾಪುರ: ಇಲ್ಲಿನ ಲಯನೆಸ್ ಕ್ಲಬ್ಗೆ ಲಯನ್ಸ್ ಜಿಲ್ಲೆ-317ಎಫ್ನ ಅಧ್ಯಕ್ಷರಾದ ಎಂ.ಬಿ. ದೀಪಕ್ ಸುಮನ್, ಅಸೋಸಿಯೋಟ್ ಮುಖ್ಯಸ್ಥೆ ಸುಧಾ ಪತ್ರೆ ಭೇಟಿ ಕಾರ್ಯಕ್ರಮ ಡಿ.30ರ ಸೋಮವಾರ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಲಯನೆಸ್ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಸಂಜೆ 4 ಗಂಟೆಗೆ ಸರ್ವಸದಸ್ಯರ ಸಭೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಶಾಮು ಹೆಲ್ತ್ ಕೇರ್ ಸೆಂಟರ್ನಲ್ಲಿ ಆರೋಗ್ಯ ಶಿಬಿರ, ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳ ವಿತರಣೆ, ನೀರಿನ ಫಿಲ್ಟರ್ ವಿತರಣೆ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಣೆ ಸೇರಿದಂತೆ ಹಲವು ಸೇವಾ ಕಾರ್ಯಗಳು ನಡೆಯಲಿವೆ. ಲಯನೆಸ್ ಅಧ್ಯಕ್ಷ ಅನ್ನಪೂರ್ಣಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement