ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾತೃಭಾಷೆಯಲ್ಲಿ ಸೃಜನಶೀಲ ಸಾಹಿತ್ಯ ರಚನೆ ಸಾಧ್ಯ

Rashmi Kasaragodu
Updated On : 30 Dec 2013, 2:51 am

ಕ.ಪ್ರ.ವಾರ್ತೆ     ಚನ್ನಪಟ್ಟಣ     ಡಿ.29
ಮಾತೃಭಾಷೆ ಅಜರಾಮರ, ಮಾತೃಭಾಷೆಯಲ್ಲಿ ಮಾತ್ರ ನಾವು ಸೃಜನ ಶೀಲ ಸಾಹಿತ್ಯ ರಚನೆ ಮಾಡಲು ಸಾಧ್ಯ ಎಂಬ ಸಂಗತಿಯನ್ನು ಸಾಹಿತ್ಯ ಜಗತ್ತಿಗೆ ಸಾರಿದ ದಿಗ್ಗಜ  ರಸಋಷಿ ಕುವೆಂಪು ಎಂದು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಬಿ.ಎಸ್.ಅಶೋಕ್ಕುಮಾರ್ ತಿಳಿಸಿದರು.
ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ಪಟ್ಟಣದ ಗಾಂಧಿಸ್ಮಾರಕ ಭವನದ ಆವರಣದಲ್ಲಿ ಹಮ್ಮಿ ಕೊಂಡಿದ್ದ ಕುವೆಂಪು ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಶಿಶು ಸಾಹಿತ್ಯದಿಂದ ಮಹಾಕಾವ್ಯದ ವರೆಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತಮ್ಮ ಚಾಕಚಕ್ಯತೆ ಪ್ರದರ್ಶಿಸಿದ ಕುವೆಂಪು  ಸಾಹಿತಿಗಳಲ್ಲಿ ಸ್ವಾಭಿಮಾನದ ಕೆಚ್ಚನ್ನಚ್ಚಿದ ಮಹನೀಯ ಎಂದರು.
ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಟಿ.ವೆಂಕಟಪ್ಪ ಮಾತನಾಡಿ, ಚನ್ನಪಟ್ಟಣಕ್ಕೆ 1922ರಲ್ಲಿ ಸಾರ್ವಜನಿಕ ಶಾಲೆ ಉದ್ಘಾಟಿಸಲು ಆಗಮಿಸಿದ್ದರು. ಆ ಸಂದರ್ಭದಲ್ಲಿ ಇಲ್ಲಿನ ಒಂದು ಮನೆಯಲ್ಲಿ ಉಳಿದುಕೊಂಡಿದ್ದರು. ಆ ಕಾರಣದಿಂದ ಕುವೆಂಪುನಗರ ಎಂದು ನಾಮಕರಣ ಮಾಡಲಾಯಿತು ಎಂದು ತಿಳಿಸಿದರು.
ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಎಂ.ಶಿವನಂಜಯ್ಯ ಎಂದು ಕೂಡ ಅಲ್ಪತೆಯ ಕಡೆಗೆ ಹೋಗದ ಜಾಯಮಾನ ವಿಶ್ವಮಾನವ ಕುವೆಂಪು ಅವರದು. ಕುವೆಂಪು ಪ್ರಣೀತ ನವ ಸಮಾಜ ನಿರ್ಮಾಣವಾಗಲು ಅವರ ಸಾಹಿತ್ಯದ ಅಧ್ಯಯನ ಹೆಚ್ಚಾಗಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸು.ತ.ರಾಮೇಗೌಡ ಮಾತನಾಡಿ, ಈ ತಾಲೂಕಿನ ಬಗ್ಗೆ ಕುವೆಂಪುಗೆ ವಿಶೇಷ ಗೌರವವಿತ್ತು.
 ತಾಲೂಕಿನ ಮುದಗೆರೆ ಬಳಿಯ ದಬಾನ್ಗುಂಡಿನ ಬಳಿ ಇಲ್ಲಿನ ಪ್ರಿಯ ಶಿಷ್ಯ ದೇಜಗೌ ಜೊತೆಯಲ್ಲಿ ಬಂದು ಕುಳಿತು ಹೋಗುತ್ತಿದ್ದರು. ಅವರ ಪಂಚಮಂತ್ರಗಳು, ಸಪ್ತಸೂತ್ರಗಳನ್ನು ಪರಿಷತ್ತು ಪಸರಿಸಬೇಕು. ದೇಶಭಕ್ತಿಯನ್ನು ಕನ್ನಡ ಭಾಷೆಯ ಮೂಲಕ ಕಟ್ಟಿಕೊಟ್ಟ ಸತ್ಪುರುಷ ಎಂದರು.
ಅನನ್ಯ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಂ.ಶಿವಮಾದು ಮಾತನಾಡಿ ರಾಷ್ಟ್ರಕವಿಯ ಬಗೆಗೆ ಎಷ್ಟು ಹೇಳಿದರೂ, ಕೇಳಿದರೂ, ಓದಿದರೂ ಸಾಲದು. ಈ ರಸಋಷಿ ಸಾಹಿತ್ಯವನ್ನು ಕಟ್ಟಿ ಬೆಳೆಸಿದ ರೀತಿ ಅನನ್ಯವಾದುದು. ಕನ್ನಡ ನುಡಿ ರಾಣಿಯ ಗುಡಿ ಕುವೆಂಪು, ಸಿರಿ ರಾಣಿಯ ಮುಕುಟಮಣಿ ಕುವೆಂಪು ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್, ಲಕ್ಷ್ಮೀದೇವಮ್ಮ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಸಿ.ಶಿವಕುಮಾರ್ ಮತ್ತು ಶಿಕ್ಷಕರ ಸಂಘದ ಅಧ್ಯಕ್ಷ ಮಹಾದೇವಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗಾಯಕಿ ಶಾರದಾ ನಾಗೇಶ್, ನವೀನ್ ಉಮೇಶ್, ಮಣಿಯಮ್ಮ ಕರಿಸಿದ್ದಪ್ಪನವರು ನಾಡಗೀತೆ ಹಾಡಿದರು. ಚೌ.ಪು.ಸ್ವಾಮಿ, ಹೊನ್ನಿಗನಹಳ್ಳಿ ಸಿದ್ದರಾಜು, ಬೇವೂರು ರಾಮಯ್ಯ ಚಂದ್ರು ಸಾಕ್ಯವಂಶಿ ತಂಡ ರೈತಗೀತೆ ಹಾಗೂ ಕುವೆಂಪು ರಚಿತ ಗೀತೆಗಳ ಗಾಯನ ನಡೆಸಿಕೊಟ್ಟರು.
ತಾಲೂಕು ಗೌರವ ಕಾರ್ಯದರ್ಶಿ ವಿಜಯ್ರಾಂಪುರ ಸ್ವಾಗತಿಸಿದರು. ಕಾರ್ಯದರ್ಶಿ ಬ್ರಹ್ಮಣೀಪುರ ರಾಮಕೃಷ್ಣಯ್ಯ ನಿರೂಪಿಸಿದರು. ಶಿಕ್ಷಕ ಎಚ್.ನಾಗರಾಜು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement