ವಿಷಕಾರಿ ತ್ಯಾಜ್ಯ ಸೇವನೆ: 16 ಕುರಿಗಳ ಸಾವು
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಡಿ.29
ತಾಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ವಿಷಕಾರಿ ತ್ಯಾಜ್ಯ ಸೇವನೆ ಮಾಡಿದ ಕುರಿಗಳು ಸಾಲು ಸಾಲಾಗಿ ಸತ್ತು ಬಿದ್ದಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಘಟನೆಯಲ್ಲಿ ಗ್ರಾಮದ ರೈತ ಹನುಮಂತರಾಯಪ್ಪ ಎಂಬುವವರಿಗೆ ಸೇರಿದ 16 ಕುರಿಗಳು ಸತ್ತಿವೆ.
ದೊಡ್ಡತುಮಕೂರು ಗ್ರಾಮದ ಹೊರವಲಯದಲ್ಲಿರುವ ಗದ್ದೆ ಮೈದಾನದಲ್ಲಿ ಕುರಿಗಳು ಮೇಯುತ್ತಿದ್ದ ವೇಳೆ ವಿಷಕಾರಿ ರಾಸಾಯನಿಕ ತ್ಯಾಜ್ಯದ ಪುಡಿಯನ್ನು ತಿಂದಿರುವ ಕುರಿಗಳು ಸ್ಥಳದಲ್ಲೇ ನರಳುತ್ತಾ ಬಿದ್ದಿವೆ. ಈ ಪ್ರದೇಶದಲ್ಲಿ ಸ್ಥಳೀಯ ಕೈಗಾರಿಕೆಗಳ ವಿಷಕಾರಿ ತ್ಯಾಜ್ಯ ವಿಲೇವಾರಿ ಮಾಡಲಾಗಿತ್ತು. ದ್ರವರೂಪದಲ್ಲಿದ್ದ ತ್ಯಾಜ್ಯ ಒಣಗಿ ಗಟ್ಟಿಯಾಗಿದೆ. ನೀರಿನ ಅಂಶ ಭೂಮಿಗಿಳಿದು ಘನತ್ಯಾಜ್ಯ ಉಳಿದುಕೊಂಡಿದೆ. ಪ್ಯಾಕೆಟ್ ಗಟ್ಟಲೆ ರಾಸಾಯನಿಕಗಳನ್ನು ಮುಕ್ತವಾಗಿ ಇಲ್ಲಿ ತಂದು ಸುರಿಯಲಾಗಿತ್ತು. ಇದನ್ನು ಕುರಿಗಳು ಸೇವಿಸಿವೆ. ಸೇವಿಸಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿವೆ ಎನ್ನುವುದು ಗ್ರಾಮಸ್ಥರ ವಿವರಣೆ.
ಸತ್ತ ಕುರಿಯೊಂದರ ಹೊಟ್ಟೆ ಬಗೆದು ನೋಡಿದಾಗ ಕುರಿಗಳು ಈ ರಾಸಾಯನಿಕವನ್ನು ಪ್ಯಾಕಿಂಗ್ ಮಾಡಿರುವ ಪ್ಲಾಸ್ಟಿಕ್ ಪೇಪರ್ಸಹಿತ ತಿಂದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಘಟನೆಗೆ ರಾಸಾಯನಿಕ ವಿಷಕಾರಿ ತ್ಯಾಜ್ಯವೇ ಕಾರಣ ಎಂದು ದೃಢಪಟ್ಟಿದೆ. ಕುರಿಗಳು ಮೈದಾನದಲ್ಲಿ ಸಾಲು ಸಾಲಾಗಿ ಸತ್ತು ಬಿದ್ದಿರುವುದನ್ನು ರೈತ ಹನುಮಂತರಾಯಪ್ಪ ತಡವಾಗಿ ಗಮನಿಸಿದ್ದಾರೆ. ಆ ವೇಳೆಗಾಗಲೇ ನಾಯಿಗಳು ಕೆಲ ಕುರಿಗಳ ಮಾಂಸ ಬಗೆದಿದ್ದವು. ಹೀಗಾಗಿ ನಾಯಿಗಳಿಗೂ ಅಪಾಯ ಆಗಬಹುದು ಎಂಬ ಆತಂಕವಿದೆ. ಸ್ಥಳದಲ್ಲಿ ಪೂನಾ ಮೂಲದ ರಾಸಾಯನಿಕ ಕಂಪನಿಯೊಂದರ ಲೇಬಲ್ ಇರುವ ಪ್ಲಾಸ್ಟಿಕ್ ಕವರ್ ಮತ್ತು ಕಾಗದಗಳು ಸಿಕ್ಕಿವೆ ಎಂದು ಅವರು ಕನ್ನಡಪ್ರಭಕ್ಕೆ ವಿವರಿಸಿದರು.
ಅಕ್ರಮ ತ್ಯಾಜ್ಯ: ಹಲವು ದಿನಗಳಿಂದಲೂ ಅಕ್ರಮ ತ್ಯಾಜ್ಯಗಳ ಅವೈಜ್ಞಾನಿಕ ವಿಲೇವಾರಿ ಈ ಭಾಗದಲ್ಲಿ ದೊಡ್ಡಸಮಸ್ಯೆಯಾಗಿ ಕಾಡುತ್ತಿದೆ. ಸರಿಯಾಗಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಮಾಡದ ಹಲವು ಕಾರ್ಖಾನೆಗಳು ತಡರಾತ್ರಿಯ ವೇಳೆ ಲಾರಿಗಳಲ್ಲಿ ತಂದು ಚೀಲಗಟ್ಟಲೆ ವಿಷಕಾರಿ ತ್ಯಾಜ್ಯವನ್ನು ಹೆದ್ದಾರಿಯ ಇಕ್ಕೆಲಗಳಲ್ಲಿ, ಜಮೀನುಗಳಲ್ಲಿ ಬಿಸಾಡಿ ಹೋಗುವುದು ಅವ್ಯಾಹತ ನಡೆಯುತ್ತಿದೆ. ಕೆಲ ಖಾಸಗಿ ಜಮೀನು ಮಾಲೀಕರು ಕೆಲ ಕೈಗಾರಿಕೆಗಳಿಂದ ಹಣ ಪಡೆದು ತಮ್ಮ ಜಮೀನುಗಳಿಗೆ ಈ ರೀತಿಯ ರಾಸಾಯನಿಕ ತ್ಯಾಜ್ಯಗಳನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅವಕಾಶ ಕೊಟ್ಟಿದ್ದಾರೆ. ಕೆಲ ಕಾರ್ಖಾನೆಗಳು ವಿಷಯುಕ್ತ ನೀರನ್ನು ಬತ್ತಿಹೋಗಿರುವ ಕೊಳವೆ ಬಾವಿಗಳಿಗೆ ಬಿಡುತ್ತಾರೆ. ಹೋರಾಟಗಳಾದರೂ ಪರಿಸ್ಥಿತಿ ಹಾಗೇ ಮುಂದುವರೆದಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ಭೇಟಿ: ಘಟನೆ ಹಿನ್ನಲೆಯಲ್ಲಿ ಶಾಸಕ ಟಿ.ವೆಂಕಟರಮಣಯ್ಯ ದೊಡ್ಡತುಮಕೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವೈಜ್ಞಾನಿಕವಾಗಿ ತ್ಯಾಜ್ಯ ಬಿಸಾಡುವ ಕಾರ್ಖಾನೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ ಅವರು, ಕುರಿಗಳನ್ನು ಕಳೆದುಕೊಂಡ ರೈತರಿಗೆ ಸರ್ಕಾರದಿಂದ ಒದಗಬಹುದಾದ ಪರಿಹಾರವನ್ನು ನೀಡುವ ಭರವಸೆ ನೀಡಿದರು.
ತನಿಖೆಗೆ ಆದೇಶ: ಘಟನೆಗೆ ಸಂಬಂಧಪಟ್ಟಂತೆ ಸಾವಿನ ಕಾರಣ, ಘಟನೆಗೆ ಕಾರಣವಾದ ರಾಸಾಯನಿಕ ಮತ್ತು ಅದನ್ನು ತಂದು ಸುರಿದಿರುವ ಕಾರ್ಖಾನೆಯ ಸಮಗ್ರ ವಿವರಗಳನ್ನು ತನಿಖೆ ನಡೆಸುವಂತೆ ಶಾಸಕರು ಇದೇ ಸಂದರ್ಭದಲ್ಲಿ ಪೊಲೀಸರಿಗೆ ಆದೇಶ ನೀಡಿದರು. ಕಾಂಗ್ರೆಸ್ ಮುಖಂಡ ತಿ.ರಂಗರಾಜು, ಸ್ಥಳೀಯ ಮುಖಂಡ ಟಿ.ಜಿ.ಮಂಜುನಾಥ್, ನಗರಸಭಾ ಸದಸ್ಯ ಲೋಕೇಶ್ಬಾಬು, ಕೆ.ಜಿ.ರಘುರಾಂ ಮತ್ತಿತರರಿದ್ದರು.