ಸವಲತ್ತನ್ನು ಸದ್ಬಳಕೆ ಮಾಡಿಕೊಳ್ಳಿ'
ಚನ್ನಪಟ್ಟಣ: ಗ್ರಾಮೀಣಭಾಗದ ವಿದ್ಯಾರ್ಥಿಗಳು ಪಟ್ಟಣ ಪ್ರದೇಶದ ಮಕ್ಕಳಿಗೆ ಸರಿಸಮನಾಗಿ ಪೈಪೋಟಿ ನೀಡಲಿ ಎಂಬ ಉದ್ದೇಶದಿಂದ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದು ಇದೆಲ್ಲ ಸವಲತ್ತನ್ನು ಸದ್ಬಳಕೆ ಮಾಡಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಜಿ.ಪಂ ಸ್ಥಾಯಿಸಮಿತಿ ಅಧ್ಯಕ್ಷ ರಘುಕುಮಾರ್ ಕರೆ ನೀಡಿದರು.
ತಾಲೂಕಿನ ಬೇವೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ 8 ನೇ ತರಗತಿ ಮಕ್ಕಳಿಗೆ ಉಚಿತ ಬೈಸಿಕಲಲ್ವಿತರಣೆ ಮಾಡಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಸಾರಿಗೆ ಸೌಕರ್ಯ ಇಲ್ಲವಾದ ಕಾರಣ ಅವರು ಶಾಲೆಗೆ ಸಕಾಲಕ್ಕೆ ಬರಲು ಸಾಕಷ್ಟು ಪರಿಶ್ರಮ ಪಡಬೇಕಿದೆ. ಈ ಸಂಗತಿಯನ್ನು ಮನವರಿಕೆ ಮಾಡಿಕೊಂಡ ಸರ್ಕಾರ ಶಾಲಾಮಕ್ಕಳಿಗೆ ಬೈಸಿಕಲ್ ನೀಡುವ ಕಾರ್ಯವನ್ನು ಜಾರಿಗೆ ತಂದಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಶಿಕ್ಷಣ ಮತ್ತು ಸೌಲಭ್ಯ ನೀಡುವಲ್ಲಿ ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿದ್ದು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರ್ಪಡೆ ಗೊಳಿಸಿ ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾ.ಪಂ ಸದಸ್ಯ ಗುರುಕುಮಾರ್ ವಿದ್ಯಾರ್ಥಿಗಳು ಸರ್ಕಾರದಿಂದ ದೊರೆಯುವ ಸೈಕಲ್ ಅನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು. ಪೋಷಕರು ಸಹ ಈ ಸೈಕಲ್ಗಳನ್ನು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡಬೇಕೆಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಜೀವಿತಾವಧಿಯಲ್ಲಿ ಉತ್ತಮ ಶಿಕ್ಷಣ ಪಡೆಯುವ ಮೂಲಕ ಗುರುಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಶಾಲೆಗೆ, ತಮ್ಮ ತಂದೆತಾಯಿಗಳಿಗೆ ಹಾಗೂ ಊರಿಗೆ ಕೀರ್ತಿ ತರಬೇಕು. ಪ್ರತಿಯೊಬ್ಬರಲ್ಲೂ ತಮ್ಮದೇ ಆದ ಸಾಮರ್ಥ್ಯ ಇದ್ದು ತಮ್ಮ ಪ್ರತಿಭೆಯನ್ನು ನಿಸ್ಸಂಕೋಚವಾಗಿ ಅನಾವರಣ ಗೊಳಿಸಬೇಕೆಂದು ಸಲಹೆ ಇತ್ತರು.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷ ಶಿವಕುಮಾರ್, ಸದಸ್ಯ ಬಿ.ಸಿ. ರಾಮಯ್ಯ, ಬಿ.ಎಲ್. ಶಿವಕುಮಾರ್ ಶಾಲಾ ಶಿಕ್ಷಕ ವೆಂಕಟಾಚಲಗೌಡ, ಸಮೂಹ ಸಂಪನ್ಮೂಲ ವ್ಯಕ್ತಿ ಕರಿಯಪ್ಪ, ಮುಖ್ಯ ಶಿಕ್ಷಕ ಶಿವನಂಜಯ್ಯ ಪಾಲ್ಗೊಂಡಿದ್ದರು.