ಅಪಾಯ ಆಹ್ವಾನಿಸುತ್ತಿರುವ ಬೃಹತ್ ಮರದ ಒಣಗಿದ ಕೊಂಬೆ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಡಿ.30
ಇಲ್ಲಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿರುವ ಜಯಚಾಮರಾಜೇಂದ್ರ ವೃತ್ತ (ಸರ್ಕಾರಿ ಆಸ್ಪತ್ರೆ ವೃತ್ತ)ದಲ್ಲಿರುವ ಬೃಹತ್ ಮರವೊಂದರ ದೊಡ್ಡ ಕೊಂಬೆಯೊಂದು ಒಣಗಿನಿಂತಿದ್ದು ಈಗಲೋ ಆಗಲೋ ಬೀಳುವಂತಿದೆ.
ಈ ಬಗ್ಗೆ ಸಂಬಂಧಪಟ್ಟವರಿಗೆ ಸ್ಥಳೀಯರು ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಡಾ.ರಾಜ್ಕುಮಾರ್ ಪುತ್ಥಳಿ ಇರುವ ಈ ವೃತ್ತದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ದೊಡ್ಡಬಳ್ಳಾಪುರ ಬಸ್ ನಿಲ್ದಾಣಕ್ಕೆ ಹೋಗಬೇಕಾದ ಎಲ್ಲ ವಾಹನಗಳೂ ಈ ವೃತ್ತವನ್ನು ಬಳಸಿಯೋ ಹೋಗಬೇಕು. ಈ ವೃತ್ತದಲ್ಲಿರುವ ದಶಕಗಳನ್ನು ಕಂಡ ಬೃಹತ್ ಮರ ಇಡೀ ವೃತ್ತವನ್ನು ಆವರಿಸಿಕೊಂಡಿದೆ. ಇದರ ದೊಡ್ಡ ಕೊಂಬೆಯೊಂದು ದಿಢೀರನೇ ಒಣಗಿ ನಿಂತಿದೆ. ಕೊಂಬೆಯ ಸಣ್ಣಪುಟ್ಟ ಕಡ್ಡಿಗಳು ಆಗಾಗ್ಗೆ ಕೆಳಗೆ ಬೀಳುತ್ತಿದ್ದು, ಕೊಂಬೆ ಇಂದೋ-ನಾಳೆಯೋ ಎನ್ನುವ ಸ್ಥಿತಿಯಲ್ಲಿದೆ.
ಮರದ ಪಕ್ಕದಲ್ಲೇ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಇದೆ. ನೆಲದಾಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲೇ ಈ ಮರ ಇರುವುದು. ಹೀಗಾಗಿ ನಿತ್ಯ ಜನಸಂಚಾರ, ವಾಹನ ಸಂಚಾರ ಇಲ್ಲಿ ಇದ್ದದ್ದೇ. ಸ್ವಲ್ಪ ಎಚ್ಚರ ತಪ್ಪಿದರೂ ಕೊಂಬೆಯೇನಾದರೂ ನೆಲಕ್ಕೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ನಗರಸಭೆ ಅಥವಾ ಸಂಬಂಧಪಟ್ಟವರು ಕೂಡಲೇ ಈ ಒಣಗಿ ನಿಂತ ಕೊಂಬೆಯನ್ನು ತೆರವು ಮಾಡಬೇಕು. ಈ ಕೊಂಬೆಯ ಕೆಳಗೇ ವಿದ್ಯುತ್ ಸಂಪರ್ಕದ ಹೈಟೆನ್ಷನ್ ತಂತಿಗಳೂ ಸಹ ಹಾದು ಹೋಗಿವೆ. ಈ ಬಗ್ಗೆ ಬೆಸ್ಕಾಂ ಕೂಡ ನಿಗಾ ವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.