ಎತ್ತಿನಹೊಳೆ ಕಾರ್ಯರೂಪಕ್ಕೆ ಶೀಘ್ರ ಚಾಲನೆ: ಮೊಯ್ಲಿ
ನೆಲಮಂಗಲ: ಎತ್ತಿನಹೊಳೆ ಯೋಜನೆ ಕಾರ್ಯರೂಪಕ್ಕೆ ಶೀಘ್ರ ಚಾಲನೆ ನೀಡುತ್ತಿರುವುದಾಗಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಅವರು ಸೋಮವಾರ ದಾಸನಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ ಮಾಕಳಿ - ಹಾರೋಕ್ಯಾತನಹಳ್ಳಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ ಬಿ.ಹೆಚ್.ಇ.ಎಲ್ ಸಂಸ್ಥೆಯ ವತಿಯಿಂದ 80 ಲಕ್ಷ ರು.ಗಳ ಅನುದಾನದಿಂದ ಸೇತುವೆ ನಿರ್ಮಿಸುತ್ತಿರುವ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.
ಎತ್ತಿನಹೊಳೆ ಯೋಜನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪೂರ್ಣ ಪ್ರಮಾಣದ ಅರಿವು ಇಲ್ಲದೆ ಟೀಕಿಸುವುದು ಸಮಂಜಸವಲ್ಲ. ರಾಜಕೀಯವಾಗಿ ಪ್ರಚಾರ ಗಳಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿದರು. ಮಾಕಳಿ- ಹಾರೋಕ್ಯಾತನಹಳ್ಳಿ ಈ ಸೇತುವೆ ಕಾಮಗಾರಿ ಹಲವಾರು ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ಈ ಸೇತುವೆ ಇಲ್ಲದ್ದರಿಂದ ಕೆಲವರು ಪ್ರಾಣಕೂಡ ಕಳೆದುಕೊಂಡಿದ್ದರು. ಸೇತುವೆ ನಿರ್ಮಾಣದಿಂದ ಸಾವಿರಾರು ಜನ ಗ್ರಾಮಸ್ಥರಿಗೆ ಸದುಪಯೋಗವಾಗುತ್ತಿದೆ ಎಂದು ಜಿ.ಪಂ.ಮಾಜಿ ಸದಸ್ಯ ಸೀನಪ್ಪ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವ್ಯಾಪ್ತಿ ಅಗತ್ಯ ಅಭಿವೃದ್ಧಿ ಕಾಮಗಾರಿ ಹಾಗೂ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಮೇಳದಿಂದ ಉದ್ಯೋಗವನ್ನು ಕಲ್ಪಿಸಲು ಸಚಿವರು ಶ್ರಮಿಸಿದ್ದಾರೆ ಎಂದು ಮಾಜಿ ಸಚಿವ ಅಂಜನಮೂರ್ತಿ ತಿಳಿಸಿದರು. ಮುಖಂಡರಾದ ಡಿ.ಎಂ.ಎಂ.ಗೌಡ, ಪ್ರಕಾಶ್, ಗೋಪಾಲಕೃಷ್ಣ, ಜಿ.ಪಂ.ಸದಸ್ಯ ಜಯರಾಮ್, ತಾ.ಪಂ.ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಗ್ರಾ.ಪಂ.ಅಧ್ಯಕ್ಷ ಎಚ್.ರವಿ, ಬಿ.ಹೆಚ್.ಇ.ಎಲ್ ಸಂಸ್ಥೆ ನಿರ್ದೇಶಕ ಆರ್.ಕೃಷ್ಣನ್, ಮುಖಂಡ ಜಿ.ಎ.ಬಾವ ಸೇರಿದಂತೆ ಹಲವಾರು ಗಣ್ಯರು ಹಾಗೂ ಸದಸ್ಯರು ಇದ್ದರು.