ಕೌಟುಂಬಿಕ ಕಲಹ: ಮಹಿಳೆ ಆತ್ಮಹತ್ಯೆ
ದೊಡ್ಡಬಳ್ಳಾಪುರ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಣಿಗರಪೇಟೆ ಬಡಾವಣೆಯಲ್ಲಿ ನಡೆದಿದೆ. ವೆಂಕಟೇಶ್ ಎಂಬುವವರ ಪತ್ನಿ ಮೀನಾ (30) ನೇಣಿಗೆ ಶರಣಾದ ದುರ್ದೈವಿ. ಗಂಡ-ಹೆಂಡತಿ ನಡುವಿನ ವಿರಸವೇ ಘಟನೆಗೆ ಕಾರಣ ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ. ಭಾನುವಾರ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ನಂತರ ಮಧ್ಯರಾತ್ರಿ ವೇಳೆ ಆಕೆ ಕೊಠಡಿಯೊಂದರಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆಕೆಗೆ ಇಬ್ಬರು ಗಂಡು ಮಕ್ಕಳಿದ್ದು, ಮೀನಾ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನೌಕರಿ ಮಾಡುತ್ತಿದ್ದಳು. ಹೊಸವರ್ಷದ ಸಿದ್ಧತೆಯಲ್ಲಿ 2 ದಿನ ಮುಂಚೆಯೇ ಹೊಸಬಟ್ಟೆಯನ್ನೂ ಖರೀದಿಸಿ ತಂದಿದ್ದ ಮನೆಯಲ್ಲಿ ಈಗ ಆಕೆಯೇ ಇಲ್ಲವಾಗಿರುವುದು ವಿಧಿಯ ದುರ್ದೈವ. ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.