ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಪೂಜಾರಿಗಳ ಕಲಹಕ್ಕೆ ಅಂತೂ ಬಿತ್ತು ತೆರೆ

Rashmi Kasaragodu
Updated On : 31 Dec 2013, 2:13 am

ರಾಮನಗರ: ಗರ್ಭಗುಡಿಯ ಮೂಲ ದೇವರ ಪೂಜೆ ವಿಷಯವಾಗಿ ಪೂಜಾರಿಗಳ ನಡುವೆ ಕಾಳಗ ನಡೆದಿದ್ದ ಮಾಗಡಿಯ ಪುರಾಣ ಪ್ರಸಿದ್ಧ ತಿರುಮಲೆ ಶ್ರೀರಂಗನಾಥನ ಸನ್ನಿಧಿಯಲ್ಲೀಗ ಅಮೂಲಾಗ್ರ ಬದಲಾವಣೆ ತರುವಲ್ಲಿ ಜಿಲ್ಲಾಡಳಿತ ಪ್ರಯತ್ನ ಫಲಪ್ರದವಾಗಿದೆ.  
ಘಟನೆ ಹಿನ್ನೆಲೆಯಲ್ಲಿ ದೇಗುಲಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಮತ್ತು ತಹಸೀಲ್ದಾರ್ ಶಿವಕುಮಾರ್ ಅರ್ಚಕರಿಗೆ ನೊಟೀಸ್ ಜಾರಿಗೊಳಿಸಿದ್ದರು. ಈ ಪರಿಣಾಮ ಎಚ್ಚೆತ್ತ ಅರ್ಚಕರು ತಮ್ಮಲ್ಲೇ ಸೂತ್ರ ರೂಪಿಸಿಕೊಂಡು, ರಂಪಾಟಕ್ಕೆ ತೆರೆ ಎಳೆದಿದ್ದಾರೆ.
ಲಿಖಿತ ಒಂಡಂಬಡಿಕೆ: ಅರ್ಚಕರಾಗಿ ಸರ್ಕಾರದಿಂದ ನೇಮಕಗೊಂಡಿರುವ ಕೃಷ್ಣ ಅಯ್ಯಂಗಾರ್ ಮತ್ತು ವೆಂಕಟೇಶ ಅಯ್ಯಂಗಾರ್ ಕುಟುಂಬಗಳ ನಡುವೆ ಒಮ್ಮತವೇರ್ಪಟ್ಟಿದ್ದು, ಲಿಖಿತ ಒಡಂಬಡಿಕೆಯೊಂದಿಗೆ ಪೂಜಾ ಅವಧಿಯನ್ನು ಪರಸ್ಪರ ಹಂಚಿಕೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ವಿವಾದಕ್ಕೆ ತೆರೆಬಿದ್ದಿದೆ.
ಧನುರ್ಮಾಸ ಪ್ರಾರಂಭದಿಂದ ಮೂಲ ದೇವರ ಪೂಜಾ ಕೈಂಕರ್ಯ ಮುಂದುವರೆಸುವ ಅವಕಾಶ ವೆಂಕಟೇಶ ಅಯ್ಯಂಗಾರ್ ಕುಟುಂಬಕ್ಕೆ ಸಿಕ್ಕಿದ್ದು, ಕೃಷ್ಣ ಅಯ್ಯಂಗಾರ್ ಕುಟುಂಬ ಅಮ್ಮನವರು ಮತ್ತು ಉತ್ಸವ ಮೂರ್ತಿಯ ಪೂಜಾಕೈಂಕರ್ಯಗಳ ಜವಾಬ್ದಾರಿಯನ್ನು ನಿರ್ವಹಿಸಲಾರಂಭಿಸಿದೆ.  
ದೇಗುಲಕ್ಕೆ ಸಿಕ್ಕಿದ ಕಳೆ: ಗೋಪೂಜೆ ಬಳಿಕವಷ್ಟೇ ಶ್ರೀರಂಗನಿಗೆ ಪೂಜೆ ಸಲ್ಲಿಕೆ ವಾಡಿಕೆಯಾಗಿತ್ತು. ಆದರೆ, ದೇವಾಸ್ಥಾನಕ್ಕೆ ಸ್ವಂತ ಗೋವು ಇಲ್ಲದಿದ್ದರಿಂದ ಈ ಪೂಜೆ ನಿಂತಿತ್ತು. ಅಂತೆಯೇ  ಪಶ್ಚಿಮ ವೆಂಕಟಾಚಲಪತಿ ಎಂದೇ ಹೆಸರಾಗಿರುವ ಶ್ರೀರಂಗನಿಗೆ ಬೆಳ್ಳಿತಟ್ಟೆಯಲ್ಲೇ ಮಹಾಮಂಗಳಾರತಿ ಆಗಬೇಕಾಗಿತ್ತು. ಸಿರಿವಂತ ದೇಗುಲದಲ್ಲಿ ಇಲ್ಲಿಯವರೆಗೂ ಬೆಳ್ಳಿಮಹಾಮಂಗಳಾರತಿ ತಟ್ಟೆ ಇರಲಿಲ್ಲ.
ಶ್ರೀರಂಗ ಸೇವಾ ಟ್ರಸ್ಟಿನ ಅಧ್ಯಕ್ಷ ಟಿ.ಎಸ್. ಸತೀಶ್ ರು.35 ಸಾವಿರ ಕೊಟ್ಟು ಹಸು ಮತ್ತು ಕರು,  ರು.80ದಿಂದ ಬೆಳ್ಳಿ ಮಂಗಳಾರತಿ ತಟ್ಟೆಯನ್ನು ದೇಣಿಗೆ ನೀಡುವ ಮೂಲಕ ದೇಗುಲದ ಆಚರಣೆಯಲ್ಲಿದ್ದ ಎರಡೂ ಕೊರಗುಗಳನ್ನು ನಿವಾರಿಸಿದ್ದಾರೆ. ಧನುರ್ಮಾಸಾರಂಭದಿಂದಲೇ ಗೋ ಪೂಜೆ, ಬೆಳ್ಳಿ ತಟ್ಟೆಯ ಆರತಿ ಪ್ರಾರಂಭವಾಗಿದೆ.   
ವಿರಸ ಮರೆತು ಪೂಜೆ: ಕೃಷ್ಣ ಅಯ್ಯಂಗಾರ್ ಕುಟುಂಬ ಮತ್ತು ವೆಂಕಟೇಶ ಅಯ್ಯಂಗಾರ್ ಕುಟುಂಬಗಳ ನಡುವೆ ಈಗ ವಿರಸ ದೂರಾಗಿದೆ. ವಿಶೇಷ ಪೂಜೆ, ಉತ್ಸವಾದಿಗಳಲ್ಲಿ ಎರಡೂ ಕುಟುಂಬದವರು ಪರಸ್ಪರ ಸಹಕಾರ ನೀಡುತ್ತಿದ್ದಾರೆ. ಮತ್ತೊಬ್ಬರು ಅಧಿಕೃತ ಅರ್ಚಕ ಶ್ರೀಶೈಲನ್ ಅವರು ಮಾತ್ರ ಗರ್ಭಗುಡಿಯ ಪೂಜೆಯತ್ತ ತಲೆ ಹಾಕುತ್ತಿಲ್ಲ.  
ಶ್ರೀಶೈಲನ್ ಅವರು ಬೆಳೆಯೋರಂಗನಾಥಸ್ವಾವು ಮೂರ್ತಿಯ ಅರ್ಚಕರಾಗಿದ್ದಾರೆ. ಭಕ್ತ ವೃಂದ, ಪುರ ಪ್ರಮುಖರು ಗರ್ಭಗುಡಿ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಹಲವು ಬಾರಿ ಮನವಿ ಮಾಡಿದ್ದಾಗ್ಯೂ ಶ್ರೀಶೈಲನ್ ಒಗ್ಗಟ್ಟಿನ ಮಂತ್ರ ಜಪಿಸುತ್ತಿಲ್ಲ. ಖಾಲಿ ಇರುವ ಪ್ರಧಾನ ಅರ್ಚಕರ ಹುದ್ದೆ ಮೇಲೆ ಅವರು ಕಣ್ಣಿಟ್ಟಿದ್ದಾರೆ.
ಸಂಪ್ರದಾಯಕ್ಕೆ ಚ್ಯುತಿ: ಧನುರ್ಮಾಸದ 30 ದಿನ ಪೂಜಾ ಸಮಯದಲ್ಲಿ ಕೆಲವೊಂದು ನಿಯಮ ಪಾಲನೆ ಅಗತ್ಯ. ಧನುರ್ಮಾಸದಲ್ಲಿ ಬೆಣ್ಣೆ ಅಲಂಕಾರ, ಅಭಿಷೇಕ ಸಂಪ್ರದಾಯವಲ್ಲವಾದರೂ ಬೆಳೆಯೋ ರಂಗನ ಸನ್ನಿಧಿಯಲ್ಲಿ ಯಥಾ ಪ್ರಕಾರ ಮುಂದುವರೆದಿದೆ. ಈ ಸನ್ನಿಧಿಯ ವಿಶೇಷ ಅಲಂಕಾರ, ಅಭಿಷೇಕಗಳಿಗೆ ಭಕ್ತರಿಂದ ಸಲ್ಲಿಕೆಯಾಗುವ ಹಣಕ್ಕೆ ರಶೀದಿ ಈಗಲೂ ಸಿಗುತ್ತಿಲ್ಲವೆನ್ನುವ ದೂರಿದೆ.
ಸಮಸ್ಯೆಗಳ ಸರಮಾಲೆ: ರಾಮನಗರ ಜಿಲ್ಲೆಯಲ್ಲೇ ಅತ್ಯಂತ ಶ್ರೀಮಂತ ದೇವಾಲಯವಾಗಿರುವ ಶ್ರೀರಂಗನ ಸನ್ನಿಧಿಯಲ್ಲಿ ವಿದ್ಯುತ್ ಸಂಪರ್ಕವೇ ಸರಿಯಾಗಿಲ್ಲ. ಇಲ್ಲೊಂದು ಜನರೇಟರ್ ವ್ಯವಸ್ಥೆಯೂ ಇಲ್ಲ. ದೇಗುಲ ಎದುರಿನ ಪೇ ಅಂಡ್ ಯೂಸ್ ಶೌಚಾಲಯ ವಾರದ ಎಲ್ಲ ದಿನವೂ ತೆರೆಯುತ್ತಿಲ್ಲ. ಭಕ್ತರಿಗೆ ಶುದ್ಧ ಮತ್ತು ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ನಾಲ್ಕೈದು ವರ್ಷದಿಂದ ಧರ್ಮದರ್ಶಿ ಸಮಿತಿಯೂ ಅಸ್ತಿತ್ವದಲ್ಲಿಲ್ಲ.



ಜ.5 ರಿಂದ ಉತ್ಸವ  
ಶ್ರೀರಂಗನ ಸನ್ನಿಧಿಯಲ್ಲಿ ಜ.5 ರಿಂದ 14ರವರೆಗೆ ಕೊಠಾರೋತ್ಸವಕ್ಕೆ ಸಿದ್ಧತೆ ನಡೆದಿದೆ. ಉತ್ಸವದ ಪ್ರಯುಕ್ತ ಪ್ರತಿ ದಿನವೂ ಭಜನೆ, ಭರತನಾಟ್ಯ, ಗೀತ ಗಾಯನ, ನಾದಸ್ವರ ಕಾರ್ಯಕ್ರಮಗಳನ್ನ ಶ್ರೀರಂಗ ಸೇವಾಟ್ರಸ್ಟ್ ಆಯೋಜಿಸಿದೆ.



ಅಭಿವೃದ್ಧಿಗೆ ನಿರಾಸಕ್ತಿ
ದೇಗುಲದಲ್ಲಿ ಅರ್ಚಕರ ಕಚ್ಚಾಟಕ್ಕೆ ಕೊನೆ ಸಿಗಲು ಮಾಧ್ಯಮಗಳೇ ಕಾರಣವಾವಾಗಿವೆ. ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದ ಶ್ರೀರಂಗನಾಥಸ್ವಾಮಿ ದೇಗುಲದ ಅಭಿವೃದ್ಧಿ ಬಗ್ಗೆ ಶಾಸಕರು, ಸರ್ಕಾರಕ್ಕೆ ನಿರಾಸಕ್ತಿ ಸಲ್ಲದು.  
ಟಿ ಭಾನುಮತಿ, ಮಾಗಡಿ.

ಅತಿಥಿಗೃಹ ನಿರ್ಮಿಸಲಿ
ಶ್ರೀರಂಗನ ಸನ್ನಿಧಿಗೆ ದೂರದೂರುಗಳಿಂದ ಬರುವ ಭಕ್ತರ ಅನುಮೂಲಕ್ಕಾಗಿ ವಸತಿಗೃಹ ಇಲ್ಲವೇ ಅತಿಥಿಗೃಹಗಳ ನಿರ್ಮಾಣಕ್ಕೆ ಸರ್ಕಾರ, ಮುಜರಾಯಿ ಇಲಾಖೆ ಕ್ರಮ ಕೈಗೊಳ್ಳಬೇಕು.
ಟಿ ಗಣೇಶ್ ಮಲ್ಲಣ್ಣ, ಮಾಗಡಿ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement