ಬಚ್ಚೇಗೌಡ, ಕುಟುಂಬದಿಂದ 200 ಎಕರೆ ಅಕ್ರಮ ಕಬಳಿಕೆ
ಬೆಂಗಳೂರು: ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ಹಾಗೂ ಅವರ ಕುಟುಂಬ ಸದಸ್ಯರು 200 ಎಕರೆ ಭೂಮಿ ಅಕ್ರಮ ಕಬಳಿಕೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಸಮಿತಿಯ ಅಧ್ಯಕ್ಷ ಎಸ್.ಆರ್. ಹಿರೇಮಠ್ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಶಾಂತನಪುರ ಎಂಬಲ್ಲಿ ಸರ್ವೆ ನಂಬರ್ 9ರಲ್ಲಿ ಭೂಕಬಳಿಕೆ ಮಾಡಿದ್ದಾರೆ. ಆ ಜಾಗ ಹರಿಜನರಿಗೆ ಸೇರಿದ್ದು, ಸುಮಾರು 50 ಮಂದಿಗೆ ಸೇರಿದ ತಲಾ 4 ಎಕರೆ ಸೇರಿ ಒಟ್ಟು 200 ಎಕರೆ ಜಾಗವನ್ನು ಮೋಸದಿಂದ ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್ ಅವರು ದೂರು ನೀಡಿದ ನಂತರ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಪರಿಶೀಲಿಸಿದಾಗ ಅವ್ಯವಹಾರ ಬೆಳಕಿಗೆ ಬಂದಿದೆ ಎಂದರು.
ಬಿ.ಎನ್. ವೆಂಕಟರಮಣಗೌಡ, ಬಿ.ಸಿ. ಚಿಕ್ಕಬಚ್ಚೇಗೌಡ, ಬಿ.ಎನ್. ಗೋಪಾಲಗೌಡ, ಬಿ.ಎನ್. ಬಚ್ಚೇಗೌಡ, ಬಿ.ಸಿ. ವೆಂಕಟಗೌಡ ಅವರ ಹೆಸರಿಗೆ ಈ ಜಮೀನು ನೋಂದಣಿ ಮಾಡಿಸಿಕೊಳ್ಳಲಾಗಿದೆ ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಅವರ ಅಳಿಯ ಸಿದ್ಧಾರ್ಥ್ಗಾಗಿ ಸಿಎ ಸೈಟನ್ನು ಕೈಗಾರಿಕಾ ನಿವೇಶನ ಆಗಿ ಪರಿವರ್ತಿಸಿ ಅಲ್ಲಿ ಕಾಫಿ ಕೆಫೆ ಡೇ ತೆರೆಯಲು ಅನುಕೂಲ ಮಾಡಿಕೊಟ್ಟದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಸಹಾಯ ಮಾಡಿದ ಐಎಎಸ್ ಅಧಿಕಾರಿ ಜೈಕರ್ ಜರೋಮ್ ಅವರ ವಿರುದ್ಧವೂ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಟಿ 50 ಮಂದಿ ಹರಿಜನರಿಗೆ ಸೇರಿದ ಭೂಮಿ ಮೋಸದಿಂದ ನೋಂದಣಿ: ಎಸ್.ಆರ್. ಹಿರೇಮಠ್
ಟಿ ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಪರಿಶೀಲಿಸಿದಾಗ ಅವ್ಯವಹಾರ ಬೆಳಕಿಗೆ
ಟಿ ಅಳಿಯ ಸಿದ್ಧಾರ್ಥ್ನ ಕಾಫಿ ಕೆಫೆಗೆ ಸಿಎ ನಿವೇಶನ ನೀಡಿದ ಮಾವ ಎಸ್.ಎಂ. ಕೃಷ್ಣ
ನಾನೇಕೆ ನ್ಯಾಯಾಲಯಕ್ಕೆ ಹೋಗಲಿ?
ಎಸ್.ಆರ್. ಹಿರೇಮಠ್ ಅವರು ಸುಖಾಸುಮ್ಮನೆ ನನ್ನ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ. ಬೇಕಿದ್ದರೆ ಅವರು ನ್ಯಾಯಾಲಯಕ್ಕೆ ಹೋಗಲಿ, ಸರ್ಕಾರಿ ಜಮೀನನ್ನು ವಾಪಸ್ ಕೊಡಿಸಲು ಎಂದು ಎಸ್.ಎಂ. ಕೃಷ್ಣ ಅವರು ಹೇಳಿದ್ದಾರಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಿರೇಮಠ್ ಅವರು, ನಾನೇಕೆ ನ್ಯಾಯಾಲಯಕ್ಕೆ ಹೋಗಬೇಕು. ನಾವು ದೇಶದ ಪ್ರಜೆಯಾಗಿದ್ದು ಅವ್ಯವಹಾರವಾದಾಗ, ಕಾರ್ಯಾಂಗ ನಿಷ್ಕ್ರಿಯವಾದಾಗ ಪ್ರಶ್ನಿಸುವ ಹಕ್ಕು ಇದೆ. ಜನಪ್ರತಿನಿಧಿಗಳು ಜನರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಅದನ್ನು ತಡೆಯಲು ಸರ್ಕಾರ ನ್ಯಾಯಾಲಯಕ್ಕೆ ಹೋಗಲಿ. ಆಗಿರುವ ಅವ್ಯವಹಾರ ಸರಿಪಡಿಸಿ, ಜನರಿಗೆ ನ್ಯಾಯ ಒದಗಿಸಲಿ ಎಂದರು.