ರಾಮನಗರದಲ್ಲಿ ಹಾಲುಪುಡಿ ಪರಿವರ್ತನಾ ಘಟಕ ಸ್ಥಾಪನೆ
ಬೆಂಗಳೂರು: ಹಾಲನ್ನು ಪುಡಿಯಾಗಿ ಪರಿವರ್ತಿಸಲು ಆಗುತ್ತಿರುವ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ ರಾಮನಗರದಲ್ಲಿ ಹಾಲು ಪುಡಿ ಪರಿವರ್ತನಾ ಘಟಕ ಸ್ಥಾಪಿಸಲು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ನಿರ್ಧರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ಅಧ್ಯಕ್ಷ ಉಲ್ಲೂರು ಸಿ. ಮಂಜುನಾಥ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಟಿ. ಗುರುಲಿಂಗಯ್ಯ, ರಾಮನಗರದಲ್ಲಿ 100 ಕೋಟಿ ವೆಚ್ಚದಲ್ಲಿ ಪ್ರತಿನಿತ್ಯ 3 ಲಕ್ಷ ಲೀಟರ್ ಹಾಲನ್ನು ಪುಡಿಯಾಗಿ ಪರಿವರ್ತಿಸುವ (30 ಲಕ್ಷ ಟನ್) ಘಟಕ ಸ್ಥಾಪಿಸಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಿ, ಈ ಕುರಿತಂತೆ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿದೆ. ಪುಡಿ ಪರಿವರ್ತನಾ ಘಟಕಕ್ಕೆ ಭೂಮಿ ಒದಗಿಸುವ ಕುರಿತು ಮುಖ್ಯಮಂತ್ರಿಗಳು ರಾಮನಗರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.
ಬೆಂಗಳೂರು ಹಾಲು ಒಕ್ಕೂಟದಿಂದ ಅಂಗನವಾಡಿ ಮಕ್ಕಳಿಗೆ 45 ಮೆಟ್ರಿಕ್ ಟನ್ ಕೆನೆರಹಿತ ಹಾಲಿನ ಪುಡಿ ಮತ್ತು ಶಾಲಾ ಮಕ್ಕಳಿಗೆ 130 ಮೆಟ್ರಿಕ್ ಟನ್ ಕೆನೆಭರಿತ ಹಾಲಿನ ಪುಡಿ ಒದಗಿಸಲಾಗುತ್ತಿದೆ. ಆದರೆ, ಪುಡಿ ಪರಿವರ್ತನಾ ಘಟಕ ಇಲ್ಲದೇ ಇರುವುದರಿಂದ ಆಂಧ್ರಪ್ರದೇಶಕ್ಕೆ ಹಾಲು ಸಾಗಿಸಿ ಅಲ್ಲಿ ಅದನ್ನು ಪುಡಿಯಾಗಿ ಪರಿವರ್ತನೆ ಮಾಡಿ ಶಾಲೆಗಳಿಗೆ ಒದಗಿಸಲಾಗುತ್ತಿದೆ. ಇದರಿಂದ ಪ್ರತಿ ಕೆ.ಜಿ. ಹಾಲಿನ ಪುಡಿ ತಯಾರಿಸಲು 40 ಹೆಚ್ಚುವರಿ ಹೊರೆ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಹಾಲು ಪುಡಿ ಪರಿವರ್ತನಾ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.
ಫ್ಲೆಕ್ಸಿ ಪ್ಯಾಕ್ ಘಟಕ: ಹಾಲಿನ ಪುಡಿ ಬದಲಾಗಿ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಹಾಲು ನೀಡುವ ಚಿಂತನೆ ಸರ್ಕಾರದ್ದು. ಒಂದು ವೇಳೆ ಸರ್ಕಾರ ಅಂತಹ ತೀರ್ಮಾನ ಕೈಗೊಂಡರೆ ಹಾಲು ಪೂರೈಸಲು ಅನುಕೂಲವಾಗುವಂತೆ ವಿಜಯಪುರದಲ್ಲಿ ಫ್ಲೆಕ್ಸಿಪ್ಯಾಕ್ ಹಾಲು ತಯಾರಿಕಾ ಘಟಕ ಸ್ಥಾಪಿಸಲು ಚಿಂತನೆ ನಡೆದಿದೆ.
ಇದಕ್ಕಾಗಿ 15 ಕೋಟಿಯಿಂದ 20 ಕೋಟಿ ವೆಚ್ಚ ಅಂದಾಜು ಮಾಡಲಾಗಿದ್ದು, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ತಾಂತ್ರಿಕ ಸಲಹೆ ಮತ್ತು ನೆರವು ನೀಡಲು ಎನ್ಡಿಡಿಬಿ ಕೂಡ ಸಮ್ಮತಿಸಿದೆ ಎಂದು ತಿಳಿಸಿದರು. ಆರಂಭದಲ್ಲಿ ಟೆಟ್ರಾಪ್ಯಾಕ್ ಮೂಲಕವೇ ವಿದ್ಯಾರ್ಥಿಗಳಿಗೆ ಹಾಲು ನೀಡುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಇದಕ್ಕೆ ಹೆಚ್ಚು ವೆಚ್ಚ ಬೀಳುವುದರಿಂದ ಫ್ಲೆಕ್ಸಿಪ್ಯಾಕ್ನಲ್ಲಿ ಹಾಲು ಪೂರೈಸಲು ಯೋಚಿಸಲಾಗಿದೆ. ಸರ್ಕಾರ ಸಮ್ಮತಿಸಿದರೆ ತಕ್ಷಣದಿಂದಲೇ ಕೆಲಸ ಆರಂಭಿಸಲಾಗುವುದು ಎಂದರು.
ಇನ್ನಷ್ಟು ಯೋಜನೆಗಳು: ಇದಲ್ಲದೆ ಹೊಸಕೋಟೆಯಲ್ಲಿ 38.5 ಕೋಟಿ ವೆಚ್ಚದಲ್ಲಿ 4 ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಪ್ಯಾಕಿಂಗ್ ಘಟಕ ಸ್ಥಾಪಿಸಲಾಗುತ್ತಿದ್ದು, ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಆನೇಕಲ್ನಲ್ಲೂ ಹಾಲು ಪ್ಯಾಕಿಂಗ್ ಘಟಕ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಬೆಂಗಳೂರು ಡೇರಿ ಆವರಣದಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಟೆಟ್ರಾಪ್ಯಾಕ್ ಹಾಲು ಘಟಕ ಸ್ಥಾಪಿಸಲು ನಿರ್ಧರಿಸಿದ್ದು, ಈ ಕುರಿತಂತೆ ತಾಂತ್ರಿಕ ಸಲಹೆ ಪಡೆಯಲಾಗುತ್ತಿದೆ ಎಂದು ವಿವರಿಸಿದರು.