ಸಾಹಿತ್ಯ ಲೋಕದಲ್ಲಿ ಕುವೆಂಪು ಅದ್ಭುತ ಸಾಧನೆ
ಮಾಗಡಿ: ರಾಷ್ಟ್ರಕವಿ ಕುವೆಂಪು ಸಾಹಿತ್ಯ ಲೋಕದಲ್ಲಿ ಅದ್ಭುತ ಸಾಧನೆ ಮಾಡಿ, ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಾಲೂಕು ದೇವರಾಜ ಅರಸು ಕಲೆ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ ಅಧ್ಯಕ್ಷ ಪಿ.ವಿ. ಸೀತಾರಾಂ ನುಡಿದರು. ಅವರು ಇಲ್ಲಿನ ಶ್ರೀರಾಮೇಶ್ವರ ಬಡಾವಣೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 109ನೇ ಜನ್ಮದಿನಾಚರಣೆಯಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಹಾಗೂ ಯುವ ಮುಖಂಡ ಬಿ.ವಿ.ಜಯರಾಮು ಮಾತನಾಡಿ ಕುವೆಂಪು ರಾಮಾಯಣ ದರ್ಶನಂ ನ ಡಿವಿಡಿ- ಧ್ವನಿಸುರಳಿಯನ್ನು ಸಮಾಜದ ಎಲ್ಲರೂ ಕೇಳುವಂತೆ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕಿದೆ ಎಂದರು. ಪುರಸಭೆ ಮಾಜಿ ಸದಸ್ಯೆ ಗಿರಿಜಾ ಶಿವಾನಂದ್, ನಿವೃತ್ತ ಶಿಕ್ಷಕ ಸಿದ್ದಗಂಗಯ್ಯ, ಹಳ್ಳಿಮನೆ ಹನುಮಂತಯ್ಯ, ಮುನಿರಾಜಯ್ಯ ಇತರರು ಕುವೆಂಪು ಅವರ ಸಾಹಿತ್ಯ ಕೃಷಿ ಕುರಿತು ಮಾತನಾಡಿದರು. ವೇದಿಕೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಕಲಾವಿದರು ಭಾಗವಹಿಸಿದ್ದರು.
ವಿಷ್ಣುವರ್ಧನ ನಟನೆ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದವರು
ಮಾಗಡಿ: ದಿವಂಗತ ವಿಷ್ಣುವರ್ಧನ ನಟನೆ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ವಿಷ್ಣು ಸೇನೆ ಸಮಿತಿ ಅಧ್ಯಕ್ಷ ಉಮೇಶ್ ತಿಳಿಸಿದರು. ಅವರು ಮಾಗಡಿ ಪಟ್ಟಣದ ರಾಮರಾಜ ಅರಸು ರಸ್ತೆಯಲ್ಲಿ ಡಾ.ವಿಷ್ಣು ಸೇನೆ ಸಮಿತಿ ಏರ್ಪಡಿಸಿದ್ದ ದಿ.ಡಾ.ವಿಷ್ಣುವರ್ಧನ್ ಅವರ 4ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಸರ್ಕಾರ ವಿಷ್ಣುವರ್ಧನ್ ಅವರ ಸಮಾಧಿಯನ್ನು ಸ್ಮಾರಕವನ್ನಾಗಿಸಬೇಕು. ವಿಷ್ಣುವರ್ಧನ್ ಅವರ ಚಿತ್ರದಲ್ಲಿನ ಉತ್ತಮ ಸಂದೇಶಗಳನ್ನು ಮಕ್ಕಳಿಗೆ ತಲುಪಿಸುವಂತಹ ಕಾರ್ಯಕ್ರಮಗಳನ್ನು ಪಠ್ಯ ಪುಸ್ತಕದಲ್ಲಿ ತರಲು ಸರ್ಕಾರ ಚಿಂತಿಸಲಿ ಎಂದರು.ವಿಜಯಸಿಂಹ, ಪ್ರಮೀಣ್, ಗೋಪಾಲ್, ಕಾರ್ತೀಕ್, ಕಲಾವಿದ ಶ್ರೀನಿವಾಸ್, ರಾಜಶೇಖರ್, ನವೀನ್,ನಾಗರಾಜು ಸೇರಿದಂತೆ ಅನೇಕ ವಿಷ್ಣು ಅಭಿಮಾನಿಗಳು ಭಾಗವಹಿಸಿದ್ದರು.