ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಹಾಲು ಮಾರಾಟ ದರ ಹೆಚ್ಚಳವಿಲ್ಲ

Rashmi Kasaragodu
Updated On : 31 Dec 2013, 2:15 am

ಬೆಂಗಳೂರು: ಹೊಸ ವರ್ಷದಿಂದ ಹಾಲು ಉತ್ಪಾದಕರಿಗೆ ಲೀಟರ್ ಹಾಲಿಗೆ 2 ಹೆಚ್ಚಿಸಲು ನಿರ್ಧರಿಸಿದ್ದರೂ ಹಾಲು ಮಾರಾಟ ದರದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ ಎಂದು ಬೆಂ.ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಉಲ್ಲೂರು ಸಿ. ಮಂಜುನಾಥ್ ಹೇಳಿದ್ದಾರೆ.
ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಹಾಲು ಉತ್ಪಾದಕರಿಗೆ ಹೊಸ ವರ್ಷದಿಂದ ಹೆಚ್ಚುವರಿಯಾಗಿ 2 ನೀಡಲಾಗುತ್ತಿದೆ. ಇದರಿಂದಾಗಿ ರೈತ ಪ್ರತಿ ಲೀಟರ್ ಹಾಲಿಗೆ 23 ಪಡೆಯಲಿದ್ದು, ಸರ್ಕಾರದ ಪ್ರೋತ್ಸಾಹಧನ 4 ಸೇರಿ ಒಟ್ಟು 27 ಪಡೆಯುವಂತಾಗಲಿದೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಈ ಕುರಿತು ವಿವರ ನೀಡಿದ ಸಿ. ಮಂಜುನಾಥ್ ಅವರು, ಹಾಲು ಉತ್ಪಾದಕರಿಗೆ ಮಾತ್ರವಲ್ಲದೆ, ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೂ ಹೊಸ ವರ್ಷದಿಂದ ಪ್ರೋತ್ಸಾಹಧನ ನೀಡಲಾಗುತ್ತದೆ. ಇವರಿಗೆ ಪ್ರತಿ ಲೀಟರ್ ಹಾಲಿಗೆ 15 ಪೈಸೆ ಪ್ರೋತ್ಸಾಹಧನ ನೀಡಲಾಗುತ್ತದೆ. ಇದರ ಜತೆಗೆ ಸಂಘಗಳ ನಿರ್ವಹಣೆಗಾಗಿ ನೀಡುವ ಮೊತ್ತವನ್ನು 2 ಪೈಸೆ ಹೆಚ್ಚಿಸಲಾಗಿದ್ದು, ಇದುವರೆಗೆ ನೀಡುತ್ತಿದ್ದ 70 ಪೈಸೆ ಬದಲಾಗಿ 72 ಪೈಸೆ ನೀಡಲಾಗುವುದು ಎಂದು ಹೇಳಿದರು.
ಹಾಲು ಒಕ್ಕೂಟಗಳಿಗೆ ಮೂಲ ಸೌಕರ್ಯ ಒದಗಿಸುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್ನಲ್ಲಿ ಹಾಲು ಮಾರಾಟ ದರ ಹೆಚ್ಚಿಸಲಾಗಿತ್ತು. ಇದರಿಂದ 2014ರ ಮಾರ್ಚ್ ಅಂತ್ಯದ ವೇಳೆಗೆ ಸುಮಾರು 22 ಕೋಟಿ ಹೆಚ್ಚುವರಿ ಲಾಭ ನಿರೀಕ್ಷಿಸಲಾಗಿದೆ. ಈ ಮೊತ್ತವನ್ನು ರೈತರಿಗೆ ಹಸ್ತಾಂತರಿಸುವ ಉದ್ದೇಶದಿಂದ ಹಾಲು ಖರೀದಿ ದರವನ್ನು ಪ್ರತಿ ಲೀಟರ್ಗೆ 2 ಹೆಚ್ಚಿಸಲಾಗುತ್ತಿದೆ. ಹೀಗಾಗಿ ಗ್ರಾಹಕರಿಗೆ ಯಾವುದೇ ಹೊರೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಸುಗಳಿಗೆ ಪರಿಹಾರ: ಒಕ್ಕೂಟದ ವ್ಯಾಪ್ತಿಯಲ್ಲಿ ಕಾಲುಬಾಯಿ ಜ್ವರದಿಂದ ಮೃತಪಟ್ಟ ರಾಸುಗಳಿಗೆ ಪರಿಹಾರ ನೀಡಲಾಗುತ್ತಿದೆ. ವಿಮೆ ಇಲ್ಲದ ಹಸುಗಳಿಗೆ ಸರ್ಕಾರ 16,400 ಮತ್ತು ಒಕ್ಕೂಟದ ವತಿಯಿಂದ 8600 ಸೇರಿ ಒಟ್ಟು 25 ಸಾವಿರ ಪರಿಹಾರ ನೀಡಲಾಗುತ್ತಿದೆ. ಇದಕ್ಕಾಗಿ ಒಕ್ಕೂಟದ ವತಿಯಿಂದ ಪರಿಹಾರಧನವಾಗಿ 78.43 ಲಕ್ಷ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಬೇಕಾಗಿದೆ. ಈ ಪೈಕಿ 73.63 ಲಕ್ಷವನ್ನು ಸೋಮವಾರ ಒಕ್ಕೂಟದ ಅಧ್ಯಕ್ಷರು ಸರ್ಕಾರಕ್ಕೆ ಚೆಕ್ ಮೂಲಕ ಪಾವತಿ ಮಾಡಿದ್ದಾರೆ.
ಇದಲ್ಲದೆ ವಿಮೆ ಇಲ್ಲದ ರಾಸುಗಳಿಗೆ ಒಕ್ಕೂಟದ ವತಿಯಿಂದ 10 ಸಾವಿರ, ಕರುವಿಗೆ 3 ಸಾವಿರ ಪರಿಹಾರ ನೀಡಲಾಗುತ್ತಿದೆ. ಇದಲ್ಲದೆ ವಿಮೆ ಸೌಲಭ್ಯ ಇರುವ ಪಡ್ಡೆಗೆ 6 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು. ಬೆಂಗಳೂರು ಒಕ್ಕೂಟದ ವ್ಯಾಪ್ತಿಯಲ್ಲಿ 1.10 ಲಕ್ಷ ರಾಸುಗಳಿಗೆ ವಿಮೆ ಮಾಡಿಸಲಾಗಿದೆ. ವಿಮೆ ಪ್ರೀಮಿಯಂನ ಶೇ.50ನ್ನು ರೈತರು ಪಾವತಿಸಿದರೆ ಉಳಿದ ಭಾಗವನ್ನು ಒಕ್ಕೂಟ ನೀಡುತ್ತದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 3.50 ಕೋಟಿ ಒದಗಿಸಲಾಗಿದೆ ಎಂದು ಅವರು ವಿವರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement