ಕೈಕೊಟ್ಟ ವರ್ಷಧಾರೆ... ಮತ್ತೆ ಬರದ ಛಾಯೆ..
ಮತ್ತೀಕೆರೆ ಜಯರಾಮ್
ರಾಮನಗರ: ಕೈಕೊಟ್ಟ ವರ್ಷಧಾರೆ... ಮತ್ತೆ ಆವರಿಸಿದ ಬರದ ಛಾಯೆ... ಸಾವಿರ ಅಡಿಯಾಚೆ ಇಳಿದ ಅಂತರ್ಜಲ... ಸುಳಿ ಒಣಗಿ ಸತ್ತವು ಕಲ್ಪವೃಕ್ಷ... ಹೂ ಹಂತದಲ್ಲೇ ಆವರಿಸಿತು ಮಾವಿಗೆ ರೋಗ... ಕಂಗೆಡಿಸಿತು ಕಾಲುಬಾಯಿ ಜ್ವರಬಾಧೆ... ಮೂಡದ ಅಭಿವೃದ್ಧಿಯ ಗೆರೆ... ಸಾಲು ಸಾಲು ಚುನಾವಣೆ... ಹೆಚ್ಚಿದ ಅಪಘಾತ-ಅಪರಾಧ ಪ್ರಕರಣ...
ಹೀಗೆ ಹತ್ತು ಹಲವು ಕರಾಳ ನೆನಪುಗಳೊಂದಿಗೆ ರೇಷ್ಮೆನಾಡು ರಾಮನಗರದ ಜನತೆ 2013ಕ್ಕೆ ವಿದಾಯ ಹೇಳಿದ್ದಾರೆ. ನಾನಾ ನಿರೀಕ್ಷೆ, ಭರವಸೆಗಳ ಮೂಟೆಯನ್ನೊತ್ತು 2014ಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಹೊಸ ವರ್ಷದಲ್ಲಾದರೂ ಕಹಿ ಘಟನೆಗಳು ಮಾಸಿ, ಹೊಸ ಹರುಷ ಮೂಡಲೆನ್ನುವ ಆಶಯವನ್ನು ಹೊತ್ತಿದ್ದಾರೆ. ಕಳೆದ ವರ್ಷದ ಪ್ರಮುಖ ಘಟನಾವಳಿಗಳ ತುಣುಕು ಇಲ್ಲಿದೆ.
ಭೀಕರ ಬರದ ಬವಣೆ: ಸತತ ಮೂರನೇ ವರ್ಷವೂ ರಾಮನಗರ ಜಿಲ್ಲೆಯನ್ನು ಭೀಕರ ಬರ ಕಾಡಿದೆ. ವರ್ಷಧಾರೆ ಕೈಕೊಟ್ಟಿದ್ದರಿಂದ ಈ ಬಾರಿಯೂ ನದಿ, ತೊರೆ, ಕೆರೆ, ಕಟ್ಟೆಗಳು ಬರಿದಾದವು. ಮಳೆಯಿಲ್ಲದೆ ಅಂತರ್ಜಲ ಪಾತಾಳಕ್ಕೆ ಇಳಿದಾಯ್ತು. ಅಳಿದುಳಿದ ಕೊಳವೆ ಬಾವಿಗಳು ಬರಿದಾಗಿ ನಿಂತಿವೆ. ಈ ಬಾರಿ ಬೇಸಿಗೆಯಲ್ಲಿ ಜಲಕ್ಷಾಮದ ಭೀತಿ ಆವರಿಸಿದೆ.
ರೇಷ್ಮೆ, ತೆಂಗು, ಮಾವು ಉತ್ಪಾದನೆಯಲ್ಲಿ ಭಾರಿ ಪ್ರಮಾಣದ ಕುಸಿತ ಕಾಣಲಾಗಿದೆ. ಕಲ್ಪವೃಕ್ಷಗಳು, ಮಾವಿನ ಮರಗಳು ಒಣಗಿವೆ. ಹಿಪ್ಪುನೇರಳೆ ಬೆಳೆ ಕ್ಷೀಣಿಸಿದೆ. ಬರದ ಬವಣೆಗೆ ತುತ್ತಾದ ರೈತರು ಕೃಷಿಗೆ ಬೆನ್ನು ತೋರುತ್ತಿದ್ದಾರೆ. ಉದ್ಯೋಗ ಹುಡುಕಿಕೊಂಡು ಬಿಡದಿ, ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಯುವ ಸಮುದಾಯಕ್ಕೆ ಕೃಷಿ ಬಗ್ಗೆ ನಿರಾಸಕ್ತಿ ಮೂಡಿದೆ.
ಕಾಣದಾಯ್ತು ಪ್ರಗತಿ: ವರ್ಷವೊಂದು ಕಳೆಯಿತೇ ಹೊರತು ರಾಮನಗರ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಗೆರೆಗಳು ಮೂಡಲಿಲ್ಲ. ರಾಮನಗರದಲ್ಲಿ ಮಂಚನಬಲೆಯಿಂದ ನಿರ್ಮಿಸಿದ ನಾಲೆಗಳಲ್ಲಿ ನೀರು ಕಂಡಿಲ್ಲ. ಚನ್ನಪಟ್ಟಣದಲ್ಲಿ ಕಣ್ವ-ಕಾವೇರಿ ಸಂಗಮ ಯೋಜನೆ ಪೈಪ್ಲೈನ್ ಅಳವಡಿಕೆಯಷ್ಟೇ ಮುಂದುವರೆದಿದೆ. ಉಳಿದ ಯೋಜನೆಗಳು ಒಂದಿಂಚೂ ಕದಲಲಿಲ್ಲ.
ಜಿಲ್ಲಾಡಳಿತ ಕಟ್ಟಡ ಆರು ವರ್ಷವಾದರೂ ಪೂರ್ಣಗೊಂಡಿಲ್ಲ. ರಾಜೀವ್ಗಾಂಧಿ ಆರೋಗ್ಯ ವಿವಿ, ನೂತನ ಜಿಲ್ಲಾಸ್ಪತ್ರೆ ಸ್ಥಾಪನೆ ಕನಸು ಮರೀಚಿಕೆಯಾಗಿದೆ. ಚನ್ನಪಟ್ಟಣದಲ್ಲಿ ಸ್ಪನ್ ಸಿಲ್ಕ್ ಮಿಲ್ ಪುನಾರಂಭದ ಕನಸು ನನಸಾಗಲೇ ಇಲ್ಲ. ಬಿಡದಿ ಮತ್ತು ಹಾರೋಹಳ್ಳಿಯಲ್ಲಿ ಕೈಗಾರಿಕೆಗಳು ತಲೆ ಎತ್ತುತ್ತಲೇ ಇವೆ. ಹಾರೋಹಳ್ಳಿಗರಿಗೆ ಕಸಾಯಿಖಾನೆ ಪ್ರಾರಂಭ ಆತಂಕ ಮೂಡಿಸಿದೆ.
ಕಂಗೆಡಿಸಿದ ಕಾಲುಬಾಯಿ: ರಾಮನಗರ ಜಿಲ್ಲಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ಜ್ವರಬಾಧೆ ವ್ಯಾಪಕವಾಗಿ ಹರಡಿದ್ದು, 2100ಕ್ಕೂ ಹೆಚ್ಚು ರಾಸುಗಳು ಸಾವನ್ನಪ್ಪಿವೆ. ಪರಿಹಾರ ಘೋಷಣೆ ಆಗಿದ್ದರೂ ಎಲ್ಲ ಸಂತ್ರಸ್ತ ರೈತರಿಗೂ ತಲುಪಿಲ್ಲ. ರೋಗಬಾಧೆ ಹೆಚ್ಚು ವ್ಯಾಪಿಸಿದ್ದ ಚನ್ನಪಟ್ಟಣಕ್ಕೆ ಪರಿಹಾರವೇ ಬಿಡುಗಡೆಯಾಗಿಲ್ಲ. ಹಂಚಿಕೆ ಆಗಿರುವೆಡೆ ರಾಜಕಾರಣ ಮೇಳೈಸಿದೆ.
ತೆಂಗಿಗೆ ನುಸಿಪೀಡೆ ಆಯ್ತು. ರಾಸುಗಳಿಗೆ ಕಾಲುಬಾಯಿ ಮತ್ತು ಗಳಲೇ ರೋಗ ಆವರಿಸಿತು. ಇದೀಗ ಹೂ ಕಚ್ಚುವ ಹಂತದಲ್ಲೇ ಮಾವಿನ ಮರಗಳಿಗೆ ಬೂದಿ ರೋಗ ಮತ್ತು ಜಿಗಿ ಹುಳುವಿನ ಬಾಧೆ ಕಾಣಿಸಿಕೊಂಡಿದೆ. ಸಮಸ್ಯೆಗಳ ಸುಳಿಗೆ ಸಿಲುಕಿದ ರೈತರಿಗೆ ಸರ್ಕಾರದ ಪರಿಹಾರ ಮತ್ತು ಸಾಂತ್ವನ ನೆಮ್ಮದಿ ಬದುಕನ್ನಂತೂ ತಂದುಕೊಟ್ಟಿಲ್ಲ.
ಅಕ್ರಮಕ್ಕೆ ಕೊನೆಯಿಲ್ಲ: ರಾಮನಗರ ಜಿಲ್ಲೆಯಾದ್ಯಂತ ಸರ್ಕಾರಿ ಭೂಮಿ ಕಬಳಿಕೆ, ಅಕ್ರಮ ಮರಳು ಮತ್ತು ಗಣಿಗಾರಿಕೆ ಸಹಿತ ಕಾನೂನು ಬಾಹಿರ ಚಟುವಟಿಕೆಗಳು ಎಗ್ಗಿಲ್ಲದೆ ಸಾಗಿವೆ. ರಾ-ಚ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ರು.19.50 ಕೋಟಿ ಕಬಳಿಕೆಯಿಂದ ಆಯುಕ್ತ ಚಿದಾನಂದ ಸಹಿತ ಆರೋಪಿಗಳು ಕಂಬಿ ಹಿಂದಿದ್ದಾರೆ. ಭೂ ಅಕ್ರಮ ಸುಳಿಗೆ ಕೆಐಎಡಿಬಿ ಅಧಿಕಾರಿಗಳು ಜೈಲು ಪಾಲಾಗುವ ಕಾಲ ಸನ್ನಿಹಿತವಾಗಿದೆ. ಫಿಲ್ಟರ್ ಮರಳು, ಅಕ್ರಮ ಮರಳು ದಂಧೆ ಮತ್ತು ಗಣಿಗಾರಿಕೆ, ರಿಯಲ್ ಎಸ್ಟೇಟ್ ಮಾಫಿಯಾದ ಅಬ್ಬರಕ್ಕೆ ಕೊನೆ ಹಾಡಿಯೇ ತೀರುವುದಾಗಿ ಅಧಿಕಾರಿಗಳು ವೀರಾವೇಷದ ಮಾತುಗಳನ್ನಾಡುತ್ತಲೇ ಇದ್ದರೂ ಸಾಧಿಸಿದ್ದೇನೂ ಇಲ್ಲ. ಎಲ್ಲ ಅಕ್ರಮಗಳು ಲೀಲಾಜಾಲವಾಗಿಯೇ ಸರ್ಕಾರಿ ಯಂತ್ರದ ಸಹಕಾರದಿಂದಲೇ ನಡೆಯುತ್ತಿದೆ. ಕಿಡ್ನಿ ಜಾಲ, ಬದುಕಿದ್ದವರ ಹೆಸರಿನಲ್ಲೇ ವಿಮೆ ಹಣ ಲಪಟಾಸಿದ ವಂಚಕರ ಜಾಲವೂ ಇದೇ ವರ್ಷ ಸಿಕ್ಕಿಬಿದ್ದಿದೆ.
ಎದ್ದಿದೆ ನೀರಾವರಿ ಕೂಗು: ನಿರಂತರವಾಗಿ ಬರದ ಬವಣೆಗೆ ತುತ್ತಾಗಿರುವ ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಕಲ್ಪಿಸಬೇಕೆನ್ನುವ ಕೂಗು ರಾಮನಗರದಲ್ಲೂ ಎದ್ದಿದೆ. ಇಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಬೀದಿಗಿಳಿದ ರೈತ ಸಮುದಾಯ, ವಿವಿಧ ವರ್ಗದವರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಹೋರಾಟವನ್ನು ನಿರಂತರವಾಗಿ ಮುಂದುವರೆಸಲು ನಿರ್ಧಾರವಾಗಿದೆ.
ಹೊಸಬರಿಗೆ ದಕ್ಕದ ಶಾಸಕಗಿರಿ
2013ನೇ ವರ್ಷದಲ್ಲಿ ಸಾಲು ಸಾಲು ಚುನಾವಣೆಗಳು ಎದುರಾಗಿವೆ. ಮಾರ್ಚ್ 11ರಂದೇ ಫಲಿತಾಂಶ ಪ್ರಕಟಗೊಂಡರೂ ಈ ಜಿಲ್ಲೆಯ 4 ಪೌರ ಸಂಸ್ಥೆಗಳ 112 ಮಂದಿ ಪುರಪಿತೃಗಳಿಗೆ ಇನ್ನೂ ಅಧಿಕಾರ ಭಾಗ್ಯ ದಕ್ಕಲಿಲ್ಲ. ಮೇ 5ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಮತದಾರ ಮಣೆ ಹಾಕಲಿಲ್ಲ. ಎಲ್ಲ 4 ಕಡೆಯೂ ಹಳಬರೇ ಗೆದ್ದು ಬೀಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ರಾಜಿನಾಮೆಯಿಂದ ತೆರವಾದ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಆ.21ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಜತೆಗೂಡಿದರೂ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗೆ ಗೆಲವು ದಕ್ಕಲಿಲ್ಲ. ಬಿಜೆಪಿ ಜತೆಗಿನ ಜೆಡಿಎಸ್ ದೋಸ್ತಿ, ಅನ್ನಭಾಗ್ಯದ ಎಫೆಕ್ಟ್ ಕಾಂಗ್ರೆಸ್ ಪಕ್ಷದ ಡಿ.ಕೆ.ಸುರೇಶ್ ಗೆಲವಿನಲ್ಲಿ ಪಾತ್ರ ವಹಿಸಿತು. ಇದೀಗ 2014ರಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷಗಳು ಸಜ್ಜುಗೊಳ್ಳುತ್ತಿವೆ. 2010ರಲ್ಲಿ ನಡೆದಿದ್ದ ಜಿ.ಪಂ. ಚುನಾವಣೆಯಲ್ಲಿ ಕೂಟಗಲ್ ಕ್ಷೇತ್ರದಿಂದ ಆಯ್ಕೆಯಾದ ಮಂಜುಳಾ ಮರಿದೇವರು ಸದಸ್ಯತ್ವ ರದ್ದುಗೊಂಡಿದ್ದು, ಪರಾಜಿತ ಅಭ್ಯರ್ಥಿಯಾಗಿದ್ದ ಸುಮಿತ್ರಮ್ಮಗೆ ಕೋರ್ಟ್ನಿಂದ ಈ ವರ್ಷಾಂತ್ಯದಲ್ಲಿ ಗೆಲವಿನ ಉಡುಗೊರೆ ಸಿಕ್ಕಿದೆ. ಜೆಡಿಎಸ್ ಜಿಪಂ ಚುಕ್ಕಾಣಿ ಉಳಿಸಿಕೊಂಡರೆ, ಸ್ವಪಕ್ಷೀಯರ ಕಚ್ಚಾಟದಿಂದ ರಾಮನಗರ ತಾ.ಪಂ.ನಲ್ಲಿ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಉಳಿಸಿಕೊಳ್ಳಲಿಲ್ಲ.
ಉಸ್ತುವಾರಿ ಸಚಿವ
ಡಿಸಿ ಬದಲಾವಣೆ
2013ರಲ್ಲೂ ಜಿಲ್ಲಾಧಿಕಾರಿ ಹುದ್ದೆಗೆ 3 ಬಾರಿ ಬದಲಾವಣೆ ಕಾಣಲಾಯಿತು. ಶ್ರೀರಾಮರೆಡ್ಡಿ, ನವೀನ್ರಾಜ್ ಸಿಂಗ್, ಮತ್ತೆ ಶ್ರೀರಾಮರೆಡ್ಡಿ ಆಗಮನವಾಯಿತು. ವರ್ಷದ ಕಡೆಗೆ ಡಾ.ಡಿ.ಎಸ್. ವಿಶ್ವನಾಥ್ ಹುದ್ದೆಗೇರಿದ್ದರು. ಉಸ್ತುವಾರಿ ಸಚಿವ ಸ್ಥಾನದಲ್ಲೂ 4 ಬದಲಾವಣೆ ಆಗಿದೆ. ಯೋಗೇಶ್ವರ್ ಬಳಿಕ ರೇಣುಕಾಚಾರ್ಯ ನಿಯೋಜಿಸಲ್ಪಟ್ಟರು. ಅವರು ಹೊಣೆ ನಿಭಾವಣೆಯಲ್ಲಿ ವಿಫಲರಾದರು. ಕಾಂಗ್ರೆಸ್ ಸರ್ಕಾರ ಕೃಷ್ಣಬೈರೇಗೌಡರನ್ನು ನೇಮಿಸಿ, 24 ತಾಸಿನಲ್ಲೇ ಜಾರ್ಜ್ಗೆ ಹೊಣೆ ವಹಿಸಿತು. ಸಂಪುಟ ಸೇರ್ಪಡೆಗೊಂಡರೆ ಡಿ.ಕೆ.ಶಿವಕುಮಾರ್ ಹೊಸ ವರ್ಷಕ್ಕೆ ಹೊಸ ಉಸ್ತುವಾರಿ ಸಚಿವರಾಗಲಿದ್ದಾರೆ.
ರೈತ ಗಂಗಯ್ಯ ಆತ್ಮಹತ್ಯೆ
ತನ್ನ ಜಮೀನಿನ ಖಾತೆ ಮಾಡಿಕೊಡುವ ವಿಷಯದಲ್ಲಿ ಅಧಿಕಾರಿಗಳು, ಸಿಬ್ಬಂದಿ ತಾತ್ಸಾರ ಮತ್ತು ಲಂಚಕ್ಕಾಗಿ ಪೀಡನೆಯಿಂದ ಬೇಸತ್ತು ಜಾಲಮಂಗಲದ ರೈತ ಗಂಗಯ್ಯ ಮಿನಿ ವಿಧಾನಸೌಧದ ಮೊದಲ ಮಹಡಿಯಿಂದ ಹಾರಿ ಮಾ.31ರಂದು ಆತ್ಮಹತ್ಯೆ ಮಾಡಿಕೊಂಡರು.
ತಗ್ಗದ ಅಪರಾಧಅಪಘಾತ
ರಾಮನಗರ ಜಿಲ್ಲೆಯಲ್ಲಿ 2013ರಲ್ಲಿ 21 ಅತ್ಯಾಚಾರ, 50 ಕೊಲೆ, 364 ಅಪಘಾತದಿಂದ ಸಾವಿನ ಪ್ರಕರಣ, 11 ವರದಕ್ಷಿಣೆ ಕಿರುಕುಳದ ಸಾವು, 197 ಅಸ್ವಾಭಾವಿಕ ಸಾವು, 347 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಇವಲ್ಲದೆ 7 ಸಾವಿರಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಪಘಾತ-ಅಪರಾಧ ಪ್ರಕರಣಗಳಲ್ಲಿ ಶೇಕಡ 10ರಷ್ಟು ಹೆಚ್ಚಳ ಕಂಡು ಬಂದಿದೆ. ಈ ಬಾರಿ ಮೇಕೆದಾಟುವಿನಲ್ಲಿ ಸತ್ತವರ ಸಂಖ್ಯೆ ತಗ್ಗಿದ್ದರೂ ಮಂಚನಬಲೆಯಲ್ಲಿ ಜಲಸಮಾಧಿ ಕಳೆದಬಾರಿಗಿಂತ ಹೆಚ್ಚಾಗಿದೆ.
ಉದ್ಯಮಿ ಸುದರ್ಶನ್ ಬಲಿ
ರಾಮನಗರ ಜಿಲ್ಲೆಯ ಹೆಜ್ಜಾಲದ ಫಾರಂ ಹೌಸ್ವಾಸಿಯಾದ ಉದ್ಯಮಿ ಸುದರ್ಶನ್ ಅವರು ಕೀನ್ಯಾದ ನೈರೋಬಿಯಲ್ಲಿ ನಡೆದ ಉಗ್ರರ ದಾಳಿಗೆ ಬಲಿಯಾದರು. ವಾರದ ಬಳಿಕ ಅವರ ಪಾರ್ಥೀವ ಶರೀರವನ್ನು ಸ್ವಗೃಹಕ್ಕೆ ತಂದು, ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ನಿಲ್ಲದ ಆನೆ ದಾಳಿ
ಈ ಜಿಲ್ಲೆಯಲ್ಲಿ ಆನೆ ಸೇರಿದಂತೆ ವನ್ಯಜೀವಿಗಳ ಹಾವಳಿ 2013ರಲ್ಲೂ ಮುಂದುವರೆಯಿತು. ವರ್ಷದಲ್ಲಿ 4 ಮಂದಿ ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಸಾಕಷ್ಟು ಆಸ್ತಿಪಾಸ್ತಿ ನಷ್ಟಕ್ಕೀಡಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಲಭಿಸಿಯೇ ಇಲ್ಲ.