ಜನಪದ ಕಲೆ ಉಳಿಸಿ, ಬೆಳೆಸಿ: ನಾಗರಾಜು
ಮಾಗಡಿ: ಸಾಹಿತ್ಯ, ಜನಪದ ಹಾಡುಗಳು, ಯಕ್ಷಗಾನ, ನಾಟಕಗಳು ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ತಿಳಿಸಿಕೊಡುವ ಮೂಲ ಜನಪದ ಕಲೆಯಾಗಿದೆ. ಆಧುನಿಕ ಜಗತ್ತಿನಲ್ಲಿ ನಶಿಸುತ್ತಿರುವ ಜೀವಂತ ಜನಪದಕಲೆಯನ್ನು ಉಳಿಸಿ, ಬೆಳೆಸುವ ಅವಶ್ಯಕತೆ ಇದೆ ಎಂದು ಕಲಾವಿದ ಅಡಿಕೆಮಾರನಹಳ್ಳಿ ಎ.ಎಂ.ನಾಗರಾಜು ನುಡಿದರು.
ಪಟ್ಟಣದ ಕೆಂಪೇಗೌಡ ಬಯಲು ರಂಗಮಂದಿರದಲ್ಲಿ ನಡೆದ ಲಕ್ಷ್ಮೀರಂಗನಾಥ ಮೂಡಲಪಾಯ ಯಕ್ಷಗಾನ ಸಾಂಸ್ಕೃತಿಕ ಕಲಾವಿದರ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನ ಅಡಿಕೆಮಾರನಹಳ್ಳಿ, ಮಾಡಬಾಳ್, ತೂಬಿನಕೆರೆ ಇನ್ನಿತರೆಡೆ ಮೂಡಲಪಾಯ ಯಕ್ಷಗಾನದಲ್ಲಿ ಅಭಿನಯಿಸುತ್ತಿರುವ ಹಿರಿಯ ಕಲಾವಿದರಿದ್ದಾರೆ. ಯಕ್ಷಗಾನ ಕಲಾವಿದರ ಬದುಕು ತೀರ ಸಂಕಷ್ಟದಲ್ಲಿದೆ. ಶಾಲಾ ಮಕ್ಕಳಿಗೆ ಮೂಡಲಪಾಯ ಯಕ್ಷಗಾನ ನಾಟಕ ಅಭಿನಯ ಕಲಿಸಲು ಸಂಘ ಸಿದ್ಧವಿದೆ. ಸರ್ಕಾರ ಶಿಕ್ಷಣ ಇಲಾಖೆ ಮೂಲಕ ಮಕ್ಕಳಿಗೆ ಯಕ್ಷಗಾನ ಕಲಿಯಲು ಅವಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದರು. ಯಕ್ಷಗಾನ ಕಲೆಯ ಸರ್ವಾಂಗೀಣ ವಿಕಾಸಕ್ಕೆ ಸಂಪ್ರದಾಯ ಪಾಲನೆಯ ಅಗತ್ಯವಿದೆ. ಈ ಕಲೆಯು ಸಂಸ್ಕಾರ, ನೈತಿಕ ಮೌಲ್ಯವನ್ನು ಪ್ರತಿಪಾದಿಸುತ್ತದೆ ಎಂದರು.