ಅಣ್ಣೇಶ್ವರ ಗ್ರಾಪಂಗೆ ಜರ್ಮನಿ ವಿದ್ಯಾರ್ಥಿನಿಯರು
ದೇವನಹಳ್ಳಿ: ತಾಲೂಕಿನಲ್ಲಿ ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವ ಅಣ್ಣೇಶ್ವರ ಗ್ರಾಪಂಗೆ ಜರ್ಮನಿಯ ಸಕ್ಸೋನಿ ರಾಜ್ಯದ ರಾಜಧಾನಿ ಡ್ರೆಸ್‌ಡೆನ್ ಪಟ್ಟಣದ ಬೆನ್ನೋ ಜಿಮ್ನಾಯಿಸಂ ವಿಶ್ವ ವಿದ್ಯಾಲಯದ ಐದು ಮಂದಿ ವಿದ್ಯಾರ್ಥಿನಿಯರು ಅಲ್ಲಿನ ಇಂಗ್ಲಿಷ್ ಡಿಪಾರ್ಟ್‌ಮೆಂಟ್ ಮುಖ್ಯಸ್ಥರಾದ ಜೋನಿ ತೋಬಿಸ್ಚ್ ರವರೊಂದಿಗೆ ಶುಕ್ರವಾರ ಆಗಮಿಸಿ ಪಂಚಾಯಿತಿಯ ಅಭಿವೃದ್ಧಿ ಯೋಜನೆಗಳು ಹಾಗೂ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಘಟಕಕ್ಕೂ ಭೇಟಿ ನೀಡಿದರು.
ಬೆಂಗಳೂರು ಜಿಪಂ ನಿರ್ಮಲ ಭಾರತ ಅಭಿಯಾನ ಜಿಲ್ಲಾ ಸಮಾಲೋಚಕರಾದ ಶಿವ ಪ್ರಸಾದ್‌ರವರು ವಿದ್ಯಾರ್ಥಿಗಳಿಗೆ ಪಂಚಾಯತಿಯಿಂದ ಕೈಗೊಂಡಿರುವ ಕಾರ್ಯಕ್ರಮಗಳು ಅಲ್ಲದೆ ಪಂಚಾಯಿತಿ ವ್ಯಾಪ್ತಿ ಜನಜೀವನ, ಶಿಕ್ಷಣ, ಪಂಚಾಯಿತಿಯ ಎಲ್ಲ ಮನೆಗಳಲ್ಲಿ ಶೌಚಾಲಯಗಳಿರುವುದು, ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರಲ್ಲದೆ ನಿರಂತರವಾಗಿ ವರ್ಷಕ್ಕೆರಡು ಬಾರಿ ಗ್ರಾಮಸಭೆ ಮತ್ತು ಮಕ್ಕಳ ಗ್ರಾಮಸಭೆ ಸಹ ಮಾಡಲಾಗುತ್ತಿದ್ದು ಗ್ರಾಮ ಅವಶ್ಯಕತೆಗಳು ಮತ್ತು ಶಿಕ್ಷಣ ಪಡೆಯಲು ಮಕ್ಕಳಿಂದ ಬರುವ ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದು ನಂತರ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷರಾದ ಚಂದ್ರಶೇಖರ್‌ರವರು ಮಾತನಾಡಿ, ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ಘಟಕ ಸ್ಥಾಪಿಸಲು ತಮಿಳುನಾಡಿನ ವೆಲ್ಲೂರು ಬಳಿ ಇರುವ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ತರಬೇತಿ ಪಡೆದು ನಂತರ ಈ ಪಂಚಾಯಿತಿಯಲ್ಲಿ ಅಳವಡಿಸಿಕೊಳ್ಳಲಾಯಿತು ಎಂದರಲ್ಲದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗಿದ್ದು ಎಲ್ಲ ಮನೆಗಳಿಗೆ ಹತ್ತಿ ಬಟ್ಟೆಯ ಕೈಚೀಲ, ಹಸಿ ಮತ್ತು ಒಣ ತ್ಯಾಜ್ಯಕ್ಕಾಗಿ ಪ್ರತ್ಯೇಕ ಬಕೆಟ್‌ಗಳನ್ನು ನೀಡಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಪಂಚಾಯತಿ ಉಪಾಧ್ಯಕ್ಷರಾದ ಲಕ್ಷ್ಮಮ್ಮ, ಪಂಚಾಯಿತಿ ಕಾರ್ಯದರ್ಶಿ ಸೋಮಮೂರ್ತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.