ಆದಿಶ್ರೀ ಸ್ಮರಣಾರ್ಥ 'ಕಿನ್ನುಡಿಯ ಬೆಳಕಲ್ಲಿ' ಕಾಲ ಭೈರವ ನಾಟಕ
ರಾಮನಗರ: ಶೈಕ್ಷಣಿಕ, ಸಾಮಾಜಿಕ, ಸಾಮುದಾಯಿಕ ಏಳಿಗೆಗೆ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಬಾಲಗಂಗಾಧರನಾಥ ಮಹಾಸ್ವಾಮಿಗಳ ಸ್ಮರಣಾರ್ಥ ಕಿನ್ನುಡಿಯ ಬೆಳಕಲ್ಲಿ ಕಾಲಭೈರವ ನಾಟಕವನ್ನು ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಪ್ರಸ್ತುತ ಪಡಿಸುತ್ತಿದೆ.
ಕಳೆದ ಆರು ತಿಂಗಳಿನಿಂದ ಕಿನ್ನುಡಿಯ ಬೆಳಕಲ್ಲಿ ನಾಟಕ ನಾಡಿನ ವಿವಿಧ ಭಾಗಗಳಲ್ಲಿ ಹದಿನಾರು ಪ್ರದರ್ಶನಗಳನ್ನು ಕಂಡಿದೆ. ಫೆ.8ರಂದು ಜಾನಪದ ಲೋಕದಲ್ಲಿ ನಡೆಯುವ ಲೋಕೋತ್ಸವದಲ್ಲಿ, ಫೆ.16 ರಂದು ಮುಂಬೈನ ಕರ್ನಾಟಕ ಸಂಘದಲ್ಲಿ ಹಾಗೂ ಫೆ.20 ರಂದು ಕನಕಪುರದಲ್ಲಿ ಪ್ರದರ್ಶನ ಕಾಣಲಿದೆ.
ಈ ಮೂರೂ ಪ್ರದರ್ಶನಗಳನ್ನು ಈಚೆಗೆ ಅಗಲಿದ ವೃಕ್ಷಭೈರವ ಸ್ವರೂಪಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಟ್ರಸ್ಟ್ ಅರ್ಪಿಸುತ್ತಿದೆ. ಭೈರವನ ಅವತಾರ ಹಾಗೂ ಆತ ಆದಿಚುಂಚನಗಿರಿಯಲ್ಲಿ ನೆಲೆನಿಂತ ಬಗೆಯೇ ನಾಟಕದ ಮೂಲನೆಲೆಯಾಗಿದೆ. ಜನರ ನಾಲಗೆಯ ಮೇಲೆ ಹರಿದಾಡುತ್ತಿರುವ ದಂತಕಥೆಗಳು, ಪೌರಾಣಿಕ ಘಟನೆಗಳನ್ನು ಉಲ್ಲೇಖಿಸುವ ಕಾಲಭೈರವನ ಕಥಾನಕವಿದು.
ಪ್ರದರ್ಶನದಲ್ಲಿ ಲಕ್ಷ್ಮಣ ಎಸ್.ತಟ್ನಳ್ಳಿ, ರವೀಶ್, ಸ್ವಾತಿ, ಪುನೀತ್, ಯೋಗೇಶ್, ವಿನೋದ್, ವಿಜಯ್, ರಶ್ಮಿ, ಯಶವಂತ್, ಶಿವಪ್ರಸಾದ್, ಸುಷ್ಮ, ಪ್ರಕಾಶ್ ಶಿವಪ್ಪ ಸಂದೊನಿ, ಭರತ್, ನಾಯಕ್, ಅಬ್ದುಲ್ ಅಜೀಜ್, ನಾಗಾರ್ಜುನ್, ಅನಿಲ್, ಜೈ ಭೀಮ್, ಲವ ಕಲಾವಿದರಾಗಿದ್ದಾರೆ.
ಡಾ.ಎಂ.ಬೈರೇಗೌಡ ರಚನೆಯ ನಾಟಕಕ್ಕೆ ರಾಜಗುರು ಹೊಸಕೋಟಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೃಷ್ಣಾಪುರದೊಡ್ಡಿಯ ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಪ್ರಸ್ತುತಿಯ ನಾಟಕಕ್ಕೆ ಭರತ್ ಕೋಲಾರ್ ಅವರ ಸಂಗೀತ ನಿರ್ವಹಣೆ, ಎಸ್.ಮಹದೇವಸ್ವಾಮಿ ಬೆಳಕು, ಆರ್.ಲವ ನಿರ್ವಹಣೆ ಇದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.