ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಆರೋಪ-ಪ್ರತ್ಯಾರೋಪ: ನಾಯಕರ ಕೆಸರೆರಚಾಟ

Parashurama
Updated On : 1 Feb 2013, 11:53 am

ರಾಮನಗರ: ಚುನಾವಣಾ ಸಮರಾಭ್ಯಾಸದಲ್ಲಿ ನಿರತರಾಗಿರುವ ಪ್ರಮುಖ ಪಕ್ಷಗಳ ಸಂಭವನೀಯ ಅಭ್ಯರ್ಥಿಗಳು ಪರಸ್ಪರ ಆರೋಪ, ಪ್ರತ್ಯಾರೋಪಗಳ ಸುರಿಮಳೆ ಜತೆಗೆ ಕೆಸರೆರಚಾಟಕ್ಕೆ ಇಳಿದಿದ್ದಾರೆ. ನಾಯಕರು ಜನತೆ ಮುಂದೆ ತಮ್ಮ ಸಾಧನೆ-ವೇದನೆ ನಿವೇದಿಸಿಕೊಳ್ಳುವ ಬದಲು ಟೀಕಾರೋಪಗಳ ಮೂಲಕ ಎದುರಾಳಿಯನ್ನು ಹಣಿಯಲು ಕಸರತ್ತು ನಡೆಸುತ್ತಿದ್ದಾರೆ.
ರಾಜಕೀಯ ಸಭೆ-ಸಮಾವೇಶ, ಸರ್ಕಾರಿ ಕಾರ್ಯಕ್ರಮದ ವೇದಿಕೆ, ಪತ್ರಿಕಾಗೋಷ್ಠಿ, ಅಷ್ಟೇ ಅಲ್ಲದೆ ಕಾಲಿಟ್ಟ ಕಡೆಯಲ್ಲೆಲ್ಲಾ ತಮ್ಮ ಎದುರಾಳಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದೇ ಇಲ್ಲಿನ ಸ್ಪರ್ಧಾಕಾಂಕ್ಷಿಗಳ ಗುರಿಯಾಗಿದೆ.
ಪ್ರಜಾಪ್ರಭುತ್ವದ ಅಣಕ: ಈ ಜಿಲ್ಲೆಯಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಇದ್ದುದರಲ್ಲಿ ರಾಮನಗರದಲ್ಲೇ ವಾಸಿ. ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರ ಕ್ಷೇತ್ರಗಳಲ್ಲಿ ಸ್ಪರ್ಧಾಕಾಂಕ್ಷಿಗಳು ಎದುರಾಳಿ ವಿರುದ್ಧ ಟೀಕಾರೋಪದಲ್ಲೇ ಮುಳುಗಿದ್ದಾರೆ.  ಈ ಭಾಗವು ಕೆಲವೇ ವರ್ಷಗಳ ಹಿಂದಿನವರೆಗೂ ಸ್ವಾಭಿಮಾನಿ ರಾಜಕಾರಣಕ್ಕೆ ಹೆಸರಾಗಿತ್ತು. ಇಲ್ಲಿನ ಜನರು ಜಾತಿ ಮತ್ತು ಧರ್ಮಾಧಾರಿತ ರಾಜಕಾರಣಕ್ಕೆ ಸೊಪ್ಪು ಹಾಕಿದವರಲ್ಲ. ಈಚೆಗೆ ದರ್ಪ, ದೌರ್ಜನ್ಯ, ಆಮಿಷಗಳು ಇಲ್ಲಿನ ರಾಜಕಾರಣದಲ್ಲಿ ಮೇಳೈಸಿವೆ. ಜಾತಿ ರಾಜಕಾರಣವಂತೂ ಮಿತಿ ಮೀರಿದೆ. ಮತಗಳನ್ನು ಖರೀದಿಸಿ ಆಯ್ಕೆಯಾಗುತ್ತಿರುವ ನಾಯಕರು ಸ್ವೇಚ್ಛೆಯಿಂದ ವರ್ತಿಸುತ್ತಿದ್ದಾರೆ. ಈ ರಾಜಕಾರಣ  ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಭ್ರಷ್ಟಾಚಾರ ಮಾಮೂಲು: ಜಿಲ್ಲೆಯಲ್ಲಿ ಪ್ರಮುಖ ಪಕ್ಷಗಳಿಂದ ಕಣಕ್ಕಿಳಿಯಲು ಹೊರಟಿರುವ ಬಹುತೇಕರು, ಹಾಲಿ-ಮಾಜಿ ಶಾಸಕರು ಮತ್ತು ಸಂಸದರು ಒಂದಿಲ್ಲೊಂದು ಆರೋಪಕ್ಕೆ ಗುರಿಯಾದವರೇ. ಭ್ರಷ್ಟಾಚಾರದ ವಿಷಯದಲ್ಲಿ ಟೀಕಾರೋಪ ಮಾಡುವುದು ಗಾಜಿನ ಮನೆಯಲ್ಲಿದ್ದುಕೊಂಡು ಕಲ್ಲು ಹೊಡೆದಂತೆಯೇ ಸರಿ. ಹೀಗಾಗಿ ಭ್ರಷ್ಟಾಚಾರ ಬದಿಗಿಟ್ಟು, ಬೇರೆ ಪ್ರಕರಣಗಳಿಗೆ ಒತ್ತು ನೀಡಲಾಗುತ್ತಿದೆ.
ಡಿ ನೋಟಿಫಿಕೇಷನ್, ಗಣಿಗಾರಿಕೆ, ನಿವೇಶನಗಳ ಮಂಜೂರು, ರಿಯಲ್ ಎಸ್ಟೇಟ್ ದಂಧೆ, ಸರ್ಕಾರಿ ಆಸ್ತಿ ಕಬಳಿಕೆ, ಅನುದಾನಗಳಲ್ಲಿ ಗೋಲ್‌ಮಾಲ್, ಸಾರ್ವಜನಿಕ ವಂಚನೆ ಸೇರಿದಂತೆ ಕರ್ಮಕಾಂಡಗಳು ಇಲ್ಲಿನ ರಾಜಕಾರಣಿಗಳಿಗೆ ದೊಡ್ಡದಾಗಿ ಕಾಣುತ್ತಲೇ ಇಲ್ಲ. ಇಂತಹ ವಿಷಯದಲ್ಲಿ ಎತ್ತಿದ ಆಕ್ಷೇಪ, ನಡೆಸಿದ ಹೋರಾಟ, ತನಿಖೆಗಳು ಅಂತಿಮ ಘಟಕ ತಲುಪಿಯೇ ಇಲ್ಲ. ಎಲ್ಲರದೂ ತಾ ಕಳ್ಳ, ಪರರನ್ನು ನಂಬ ಎನ್ನುವ ಧೋರಣೆಯೇ.
ಆಯೋಗಕ್ಕೆ ದೂರು: ಕನಕಪುರದಲ್ಲಿ ಸೆಣೆಸಾಟಕ್ಕೆ ಇಳಿಯಲು ಸಜ್ಜಾಗಿರುವ ಮಾಜಿ ಸಚಿವದ್ವಯರಾದ ಡಿ.ಕೆ.ಶಿವಕುಮಾರ್ ಮತ್ತು ಪಿ.ಜಿ.ಆರ್. ಸಿಂಧ್ಯಾ ಅವರೀಗ ಕ್ಷೇತ್ರದ ಮತದಾರರ ಪಟ್ಟಿ ವಿಷಯವನ್ನೇ ದೊಡ್ಡದು ಮಾಡಿಕೊಂಡು, ಚುನಾವಣಾ ಆಯೋಗಕ್ಕೆ ಪರಸ್ಪರ ದೂರು ದಾಖಲಿಸಿದ್ದಾರೆ. ಕನಕಪುರಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಪಂಥಾಹ್ವಾನದ ಮಾತುಗಳಿಗೇನೂ ಕಮ್ಮಿಯಿಲ್ಲ. ಎರಡೂವರೆ ದಶಕ ದೋಸ್ತ್‌ಗಳಾಗಿದ್ದವರು ಈಗ ದುಶ್ಮನ್‌ಗಳಂತೆ ಬೀದಿ ಕಾಳಗಕ್ಕೆ ಇಳಿದಿದ್ದು, ಕನಕಪುರ ರಾಜಕಾರಣವನ್ನು ರಂಗೇರುವಂತೆ ಮಾಡಿದೆ.
ಹೊಸ ಬಾಂಬ್: ಚನ್ನಪಟ್ಟಣದಲ್ಲಿ ನೀರಾವರಿಗೆ ಸಂಬಂಧಿಸಿದ ಸಾಕ್ಷಿಗುಡ್ಡೆಗಳನ್ನು ಅವಲೋಕಿಸಲು ಯಾರೂ ಮುಂದಾಗಿಲ್ಲ. ರಾಜಕೀಯ ಗಿಮಿಕ್, ಟೀಕಾರೋಪಗಳದ್ದೇ ಮೇಲಾಟ. ನೀರಾವರಿ ಕೊಡುಗೆಗಳ ಬಗ್ಗೆ ಯೋಗೇಶ್ವರ ಮತ್ತು ಅನಿತಾ ನಡುವೆ ವಾಕ್ಸಮರ ನಡೆಯುತ್ತಿದೆ. ವಿಶ್ರಾಂತಿ ಪ್ರಸ್ತಾಪದ ಬಳಿಕ ಯೋಗೇಶ್ವರ್ ತನ್ನ ಯೋಜನೆಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಯೋಗೇಶ್ವರ್ ದುರಾಡಳಿತ ಕೊನೆಗಾಣಿಸುವ ಶಪಥದೊಂದಿಗೆ ಅನಿತಾ ಪ್ರಚಾರನಿರತರಾಗಿದ್ದಾರೆ. ಅರಣ್ಯ ಗಣಿಗಾರಿಕೆಗೆ ಮಂಗಳ ಹಾಡುವ ಶಪಥವನ್ನು ಯೋಗೇಶ್ವರ್ ಮರೆತಿದ್ದಾರೆ.
ವೈಯಕ್ತಿಕ ನಿಂದನೆ: ಮಾಗಡಿ ಕ್ಷೇತ್ರದಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎ.ಮಂಜುನಾಥ್ ಪರಸ್ಪರ ಭೂ ಚಕ್ರ ಪ್ರಯೋಗಕ್ಕೆ ಇಳಿದಿದ್ದಾರೆ. ಮಂಜುನಾಥ್ ವಿರುದ್ಧ ರಿಯಲ್ ಎಸ್ಟೇಟ್ ವಂಚನೆಯನ್ನು ಮುಂದಿಟ್ಟುಕೊಂಡು ಬಾಲಕೃಷ್ಣ ಆರೋಪಗಳ ಸುರಿಮಳೆಗರೆದಿದ್ದಾರೆ. ಬಾಲಕೃಷ್ಣ ಅವರಿಂದ ಸರ್ಕಾರಿ ಭೂ ಕಬಳಿಕೆ, ಲೋಕೋಪಯೋಗಿ ಇಲಾಖೆ ಹಗರಣದ ಆರೋಪವನ್ನು ಮಂಜುನಾಥ್ ಹೊರಿಸಿದ್ದಾರೆ. ವೈಯಕ್ತಿಕ ನಿಂದನೆ ನಿರಂತರವಾಗಿದ್ದು, ಇಬ್ಬರ ಕದನ ಸದ್ಯಕ್ಕೆ ಅಂತ್ಯ ಕಾಣದಂತಿದೆ.
ರಾಮನಗರ ಕೂಲ್: ಇದ್ದುದರಲ್ಲಿ ರಾಮನಗರ ಕ್ಷೇತ್ರ ರಾಜಕಾರಣ ಸ್ವಲ್ಪ ಮಟ್ಟಿಗೆ ಕೂಲ್ ಆಗಿದೆ. ತಮ್ಮ ಭದ್ರಕೋಟೆಗೆ ಯಾರಿಂದಲೂ ಲಗ್ಗೆ ಸಾಧ್ಯವಿಲ್ಲವೆನ್ನುವಂತೆ ಎಚ್.ಡಿ. ಕುಮಾರಸ್ವಾಮಿ ಇತ್ತ ತಲೆ ಹಾಕದೆ ನೆಮ್ಮದಿಯಾಗಿದ್ದಾರೆ. ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ಮರಿದೇವರು ತಮ್ಮ ವ್ಯಕ್ತಿ ಪರಿಚಯದ ಕರಪತ್ರದೊಂದಿಗೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಶಾಸಕ ರಾಜು ವಿರುದ್ಧವೂ ಆರೋಪಗಳುಂಟು. ಆದರೆ, ಸ್ಪರ್ಧಾ ಕಣದಿಂದ ಹೊರಗುಳಿಯುತ್ತಿರುವ ಕಾರಣಕ್ಕೆ ಅವರ ವಿರುದ್ಧ ಯಾರೂ ಸೊಲ್ಲೆತ್ತುತ್ತಿಲ್ಲವಷ್ಟೇ. ಹೀಗಾಗಿ ರಾಜು ಸೇಫ್.
-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments