'ಶಾಸಕರ ದುರಾಡಳಿತದಿಂದ ತಾಲೂಕು ಹಿಂದೆ'
ಚನ್ನಪಟ್ಟಣ: ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗದೇ ಹಿಂದುಳಿದಿದ್ದು ಇದಕ್ಕೆ ಇಲ್ಲಿನ ಸ್ಥಳೀಯ ಶಾಸಕರ ನಿರ್ಲಕ್ಷ್ಯ, ಬೇಜವಾಬ್ದಾರಿತನದ ಆಡಳಿತವೇ ಕಾರಣ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಆರೋಪಿಸಿದರು.
ತಾಲೂಕಿನ ಸುಣ್ಣಘಟ್ಟ, ಬಿ.ವಿ.ಹಳ್ಳಿ, ಮಾಳಗಾಳು, ಸೋಮನಾಥಪುರ, ಅಕ್ಕೂರು ಹೊಸಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಜನತೆಯಿಂದ ಅಹವಾಲು ಸ್ವೀಕರಿಸಿದ ನಂತರ ಮಾತನಾಡಿ, ತಾಲೂಕಿನಲ್ಲಿ ಪಡಿತರ ಚೀಟಿ ಅವ್ಯವಸ್ಥೆ ಮತ್ತು ವಿಧವಾವೇತನ, ಅಂಗವಿಕಲ ವೇತನ ಸೇರಿದಂತೆ ಸುಮಾರು 11 ಸಾವಿರ ಮಾಸಾಶನಗಳ ರದ್ದುಗೊಳಿಸಿರುವುದೇ ಇಲ್ಲಿನ ಶಾಸಕರ ಸಾಧನೆಯಾಗಿದೆ ಎಂದು ಅಣಕವಾಡಿದರು. ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿದ್ದು ದೇವೇಗೌಡರು. ಅಂದೇ ತಾಲೂಕಿನ ರೈತರ ಭೂಮಿಗೆ ನೀರು ಹರಿಸುವ ಕನಸು ಕಂಡು ಇಗ್ಗಲೂರು ಯೋಜನೆ ಅನುಷ್ಠಾನಗೊಳಿಸಿದ್ದರು. ಆದರೆ ಈಗ ಕೆಲವೊಂದು ಕೆರೆಗಳಿಗೆ ನೀರು ಹರಿಸಿ ನನ್ನ ಸಾಧನೆ ಎಂದು ಹೇಳಿಕೊಳ್ಳುವ ಮೂಲಕ ಇಲ್ಲಿನ ಶಾಸಕರು ಗಿಮಿಕ್ ರಾಜಕಾರಣದಿಂದ ಹೊರಬಂದಿಲ್ಲವೆಂದು ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿಯವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆಂಬ ವಿಶ್ವಾಸವಿದೆ. ಅಧಿಕಾರಕ್ಕೆ ಬಂದ ತಕ್ಷಣವೇ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರುವುದೇ ನಮ್ಮ ಧ್ಯೇಯ. ಮತ್ತಷ್ಟು ಜನಪರವಾದ ಯೋಜನೆ ಜಾರಿಗೆ ತಂದು ಅಂಗವಿಕಲರು, ವಿಧವೆಯರ ಮಾಶಾಸನ ಏರಿಕೆ ಮಾಡಲು ಎಚ್.ಡಿ. ಕುಮಾರಸ್ವಾಮಿಯವರು ಮನಸ್ಸು ಮಾಡಿದ್ದಾರೆಂದು ತಿಳಿಸಿದರು. ಮುಂದಿನ ಚುನಾವಣೆಯಲ್ಲಿ ನನ್ನನ್ನ ಆಶೀರ್ವದಿಸಬೇಕೆಂದು ಜನರಲ್ಲಿ ಮನವಿ ಮಾಡಿದ ಅವರು ನಿಮ್ಮ ಮನೆ ಮಗಳಾಗಿ ಕೆಲಸ ಮಾಡಿ ಋಣ ತೀರಿಸುವೆ. ಕ್ಷೇತ್ರದ ಅಭಿವೃದ್ಧಿ ಮತ್ತು ಜನಸೇವೆ ನನ್ನ ಧ್ಯೇಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ತಾಪಂ ಅಧ್ಯಕ್ಷೆ ಶಾಂತಮ್ಮ ಮಹೇಶ್, ಉಪಾಧ್ಯಕ್ಷ ವೆಂಕಟೇಶ್, ಮುಖಂಡರಾದ ಸಿಂ.ಲಿಂ.ನಾಗರಾಜ್, ತಾಪಂ ಸದಸ್ಯರಾದ ಮಾರೇಗೌಡ, ಚನ್ನಗಿರಿಗೌಡ, ತಾ.ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಮುಖಂಡರಾದ ಈಶ್ವರಪ್ಪ, ನಿಜಲಿಂಗೇಗೌಡ, ದಯಾನಂದ, ಎಸ್.ಎನ್.ಪುಟ್ಟಸ್ವಾಮಿ, ಹೆಚ್.ಡಿ.ಕೆ ಅಭಿಮಾನಿ ಸಂಘದ ಅಧ್ಯಕ್ಷ ಅಶ್ವಥ್, ಮಾಳಗಾಳ್ ಅಪ್ಪಾಜಿ, ಎಸ್.ಎಮ್.ಪ್ರಕಾಶ್, ಕುಮಾರಿ, ಜಿ.ಪಂ. ಮಾಜಿ ಸದಸ್ಯರಾದ ಸದಾನಂದ, ಕೃಷ್ಣಪ್ಪ ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.