ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದ.ರಾ.ಬೇಂದ್ರೆ ಕಾವ್ಯದಲ್ಲಿ ಉತ್ತರ ಕರ್ನಾಟಕ ಭಾಷೆ, ಜಾನಪದ ಅಂತಃಸತ್ವವೇ ಕಾವ್ಯಭಾಷೆ: ಎಲ್ಲೇಗೌಡ

Lingaraj Badiger
Updated On : 4 Feb 2013, 11:00 am

ಕನಕಪುರ: ಕನಕಪುರದ ಎಸ್. ಕರಿಯಪ್ಪ ಶಿಕ್ಷಕರ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಬೇಂದ್ರೆ ಜನ್ಮದಿನೋತ್ಸವ ಕಾರ್ಯಕ್ರಮ ನಡೆಯಿತು.
ವಚನಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಬೇಂದ್ರೆ ಬದುಕು ಬರಹಗಳ ಬಗ್ಗೆ ಉಪನ್ಯಾಸ ನೀಡುತ್ತಾ, ವರಕವಿ ದ.ರಾ.ಬೇಂದ್ರೆಯವರು ಉತ್ತರ ಕರ್ನಾಟಕದ ಗಂಡುಮೆಟ್ಟಿನ ಭಾಷೆಯನ್ನು, ಜಾನಪದದ ಅಂತಃಸ್ಸತ್ವವನ್ನು ತಮ್ಮ ಕಾವ್ಯಭಾಷೆಯನ್ನಾಗಿಸಿಕೊಂಡು ಲವಲವಿಕೆಯ ಜೀವಂತ ಕಾವ್ಯ ನೀಡಿದವರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಚ್.ಎಸ್. ಹರೀಶ್ ಮಾತನಾಡಿ, ನೋವುನುಂಗಿ ಕನ್ನಡ ಕಾವ್ಯ ಲೋಕಕ್ಕೆ ನಲಿವಿನ ಸಾಹಿತ್ಯ ನೀಡಿದ ರಸಜನನ, ವಿರಸಮರಣ, ಸಮರಸವೇ ಜೀವನವೆಂದು ಸಾರಿದ, ಒಲವೇ ನಮ್ಮ ಬದುಕೆಂದು ಹಾಡಿದ ಅಂಬಿಕಾತನಯದತ್ತರು ಅನೇಕ ಅಸಂಗತ ನಾಟಕಗಳನ್ನೂ ರಚಿಸಿದ್ದಾರೆ ಎಂದರು. ಉಪನ್ಯಾಸಕ ಅನಂತಗೌಡ ಬೇಂದ್ರೆ ವಿರಚಿತ ಸಾಯೋ ಆಟ ನಾಟಕವನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಗಮಕಿ ವಿಜಯಾಶಂಕರ್ ತಂಡ ದವರಿಂದ ಬೇಂದ್ರೆ ಗೀತಗಾಯನ ನಡೆಯಿತು.
ಸಾರ್ವಜನಿಕ ಗ್ರಂಥಾಲಯದಲ್ಲಿ ಬೇಂದ್ರೆ ಜನ್ಮ ದಿನಾಚರಣೆ
ಕನಕಪುರ: ವಚನ ಸಾಹಿತ್ಯ ಅಕಾಡೆಮಿ, ಕರ್ನಾಟಕ ಗಮಕಕಲಾ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಕನಕಪುರದ ಸಾರ್ವಜನಿಕ ಗ್ರಂಥಾಲಯದಲ್ಲಿ ವರಕವಿ ಬೇಂದ್ರೆ ಜನ್ಮದಿನಾಚರಣೆ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಎಲ್ಲೇಗೌಡ ಬೆಸಗರಹಳ್ಳಿ ನೆರವೇರಿಸಿದರು. ಗ್ರಂಥಾಲಯ ಅಧಿಕಾರಿ ಕಾಳರಾಜು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅ.ಭಾ.79 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೋ.ಚನ್ನಬಸಪ್ಪ ಬದುಕು-ಬರಹಗಳನ್ನು ಕುರಿತು ಪ್ರೌಢಪ್ರಬಂಧ ರಚಿಸಿರುವ ಡಾ.ಮಲ್ಲಿಕಾರ್ಜುನ ಛಬ್ಬಿ ಅವರು ಮಾತನಾಡಿದರು. ಕೋಚೆಯವರು ನ್ಯಾಯಾಧೀಶರು ಮಾತ್ರವಲ್ಲ,
ಸ್ವಾತಂತ್ರ್ಯ ಸೇನಾನಿಯಾಗಿದ್ದವರು. ಕುವೆಂಪು ರಾಮಾಯಣ ದರ್ಶನಂ ಕುರಿತ ಸುದೀರ್ಘವಾದ ವಿಮರ್ಶಾಕೃತಿ ಹೊರತಂದವರು. ವಿವೇಕಾನಂದರ, ಅರವಿಂದರ ಅನೇಕ ಕೃತಿಗಳನ್ನು ಕನ್ನಡ ಭಾಷೆಗೆ ಅನುವಾದಿಸಿದವರು, ಸ್ವತಂತ್ರವಾದ ಎಂಟು ಕಾದಂಬರಿಗಳೂ ಸೇರಿದಂತೆ ಒಟ್ಟಾರೆ 80 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಹಿರಿಮೆ ಚನ್ನಬಸಪ್ಪನವರದ್ದು ಎಂದು ಡಾ.ಛಬ್ಬಿ ನುಡಿದರು. ಕಸಾಪ ನಗರಾಧ್ಯಕ್ಷ ಸೇನಯ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement