ಬಡಜನರ ಅನ್ನ ಕಸಿಯುವ ಸರ್ಕಾರಗಳು: ಪುರುಷೋತ್ತಮ
ದೊಡ್ಡಬಳ್ಳಾಪುರ: ಬಡಜನರ ಅನ್ನ ಕಿತ್ತು ತಿನ್ನುವ ಕೆಲಸ ನೇರ ನಗದು ವರ್ಗಾವಣೆ ಕಾಯಿದೆಯ ಮೂಲಕ ಆಗುತ್ತಿದ್ದು ಕೂಡಲೇ ಈ ಕಾಯ್ದೆಯನ್ನು ರದ್ದು ಮಾಡಬೇಕು. ಮನುವಾದಿ ಸರ್ಕಾರಗಳ ಇಂತಹ ವಿಚಿತ್ರ ಕಾನೂನುಗಳಿಂದ ಬಹುಜನರ ಬದುಕು ಮೂರಾಬಟ್ಟೆಯಾಗಿದೆ ಎಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಪುರುಷೋತ್ತಮ್ ಹೇಳಿದರು.
ಬೆಂಗಳೂರಿನಲ್ಲಿ ಫೆ.10ರಂದು ಮಾಯಾವತಿ ಅವರ ನೇತೃತ್ವದಲ್ಲಿ ನಡೆಯಲಿರುವ ಬಿಎಸ್ಪಿಯ ಬಹುಜನ ಸಮಾವೇಶದ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆಯುತ್ತಿರುವ ಬಹುಜನ ಜಾಗೃತಿ ಯಾತ್ರೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ಮೇಲ್ಪಂಕ್ತಿಯ ಪಕ್ಷಗಳು ಮತ್ತು ಪಟ್ಟಭದ್ರಹಿತಾಸಕ್ತಿಗಳು ಮೀಸಲಾತಿ ಜಾರಿಗೆ ಬಂದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ ಅದನ್ನು ವಿರೋಧಿಸುತ್ತಾ ಗೊಂದಲ ಸೃಷ್ಟಿಸುತ್ತಾ ಮನವಾದಿಗಳು ಆಟಾಟೋಪ ಮೆರೆಯುತ್ತಿದ್ದಾರೆ. ಕೆಲವೊಮ್ಮೆ ತಮ್ಮ ಪಕ್ಷಗಳ ಹೈಕಮಾಂಡ್‌ಗಳಿಗೆ ಹೆದರಿ ದಲಿತ ಸಂಸದರೂ ತಮ್ಮ ಹಿತ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಬಹುಜನರ ಮೀಸಲಾತಿ ವಿರುದ್ಧ ಅವರ ನಾಳಿನ ನೆಮ್ಮದಿಯ ಬದುಕಿನ ವಿರುದ್ಧ ಕೇಂದ್ರದ ಮನುವಾದಿ ಕಾಂಗ್ರೆಸ್ ಸರ್ಕಾರ ರೂಪಿಸುತ್ತಿರುವ ಎಲ್ಲ ಹುನ್ನಾರಗಳನ್ನು ಪರಿಹರಿಸಲು ರಾಷ್ಟ್ರ ಮಟ್ಟದಲ್ಲಿ ಇರುವ ಏಕೈಕ ಅಸ್ತ್ರವೆಂದರೆ ಅದು ಬಿಎಸ್ಪಿ. ಈ ನಿಟ್ಟಿನಲ್ಲಿ ದಕ್ಷಿಣದ 4 ರಾಜ್ಯಗಳಲ್ಲಿ ಸಂಘಟಿಸಲು ಬಿಎಸ್ಪಿ ಅಧಿನಾಯಕಿ ಮಾಯಾವತಿ ಫೆ.10ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಖಂಡ ಬಹುಜನರು ಒಗ್ಗಟ್ಟು ಪ್ರದರ್ಶಿಸಿ ಮನುವಾದಿ ಪಕ್ಷಗಳ ವಿರುದ್ಧ ದನಿಯಾಗಬೇಕು ಎಂದರು.
ಹೀಗಾಗಿ ಈಗಾಗಲೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸಂಘಟನೆ ಮಾಡಲಾಗಿದ್ದು, ಹಳ್ಳಿ ಹಳ್ಳಿಯಲ್ಲೂ ಜಾಗೃತಿ ಬಹುಜನ ಮೀಸಲಾತಿ ಯಾತ್ರೆ ನಡೆಯುತ್ತಿದೆ. ಸಮಾವೇಶಕ್ಕೆ ಕನಿಷ್ಠ 5 ಸಾವಿರ ಜನರನ್ನು ಕರೆದೊಯ್ಯುವ ನಿರೀಕ್ಷೆ ಇದೆ ಎಂದು ಅವರು ವಿವರಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ನಂದಿಗುಂದ ಪಿ.ವೆಂಕಟೇಶ್, ತಾಲೂಕು ಅಧ್ಯಕ್ಷ ಎಂ.ಹನುಮಂತಗೌಡ, ತಾಲೂಕು ಉಸ್ತುವಾರಿ ಕೆ.ವಿ.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಕಾರ್ಯದರ್ಶಿ ನರೇಂದ್ರಮೂರ್ತಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.