ವಿಜ್ಞಾನದ ಆಸಕ್ತಿ ಬೆಳೆಯಲಿ: ವೆಂಕಟೇಶ್
ವಿಜಯಪುರ: ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಿಂದಲೇ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಡಿಡಿಪಿಐ ವೆಂಕಟೇಶ್ ತಿಳಿಸಿದರು.
ಇಲ್ಲಿನ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ವಿದ್ಯಾರ್ಥಿ-ವಿಜ್ಞಾನ ನೇರ ಸಂವಾದ ಕಾರ್ಯಕ್ರಮಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೋಹನ್ ಕುಮಾರ್ ಮಾತನಾಡಿ, ಎಸ್ಸೆಸ್ಸೆಲ್ಸಿಯ ನಂತರ ಶೇ.28ರಷ್ಟು ವಿದ್ಯಾರ್ಥಿಗಳು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳನ್ನು ವಿಜ್ಞಾನದ ಕಡೆಗೆ ಆಕರ್ಷಿಸುವ ಸಲುವಾಗಿ ಕೇಂದ್ರ ಸರ್ಕಾರದಿಂದ ಬಿ.ಎಸ್ಸಿ ಓದುವ ಮಕ್ಕಳಿಗೆ ವರ್ಷಕ್ಕೆ 80000 ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು.
ನಗರೇಶ್ವರ ಸ್ವಾಮಿ ಏಜುಕೇಷನ್ ಟ್ರಸ್ಟನ ಅಧ್ಯಕ್ಷ ಎಂ. ಸತೀಶ್ ಕುಮಾರ್ ಮಾತನಾಡಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಬೆಂಗಳೂರು ವಿಭಾಗದ ಸಂಚಾಲಕ ಚಳ್ಳಕೆರೆ ಯರ್ರಿಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಬೆಂಗಳೂರು ಭಾರತೀಯ ವಿದ್ಯಾಭವನದ ವಿಜ್ಞಾನಿ ಡಾ.ಎನ್. ಬಾಲಚಂದರ್, ಬಿಇಒ ಮುನಿರಾಜು, ಹಿರಿಯ ಉಪನ್ಯಾಸಕರಾದ ನಾಗೇಶ್, ಕೃಷ್ಣಪ್ರಸಾದ್, ರಾಜ್ಯ ಮುಖ್ಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ಖಜಾಂಜಿ, ಕೃಷ್ಣಮೂರ್ತಿ ಇದ್ದರು.