ಸಹಾಯಧನದ ಚೆಕ್ ವಿತರಣೆ ಇಂದು
ಮಾಗಡಿ: ತಾಲೂಕಿನ ಮಾಡಬಾಳ್ ಹೋಬಳಿ ಅಜ್ಜನಹಳ್ಳಿ, ಹಂಚೀಕುಪ್ಪೆ, ಮಾಡಬಾಳ್, ಮತ್ತೀಕೆರೆ, ಸೀಗೇಕುಪ್ಪೆ, ಆಗಲಕೋಟೆ, ನೇತೇನಹಳ್ಳಿ ಮತ್ತು ಸಾತನೂರು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆ ಪಲಾನುಭವಿಗಳಿಗೆ ಸ್ವಸಹಾಯ ಗುಂಪುಗಳ ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಣೆ, ವಿವಿಧ ಅಭಿವೃದ್ಧಿಗಳ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಸಮಾರಂಭ ಫೆ.4 ರಂದು ಸೋಮವಾರ ಮಧ್ಯಾಹ್ನ 2 ಗಂಟೆ ಆಯೋಜಿಸಲಾಗಿದೆ ಎಂದು ಅಜ್ಜನಹಳ್ಳಿ ಗ್ರಾ.ಪಂ. ಕಾರ್ಯದರ್ಶಿ ಕಂಬೇಗೌಡ ತಿಳಿಸಿದ್ದಾರೆ.
25 ಠೇವಣಿಗೆ ಮೂಲ
ಉಳಿತಾಯ ಖಾತೆ
ದೊಡ್ಡಬಳ್ಳಾಪುರ: ಇಲ್ಲಿನ ದಿ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಚರರ್ಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 2013ರಲ್ಲಿ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಇದರ ಅಂಗವಾಗಿ ಬ್ಯಾಂಕಿನಲ್ಲಿ ಎಲ್ಲ ವರ್ಗದ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕೇವಲ ರು.25 ಠೇವಣಿಗೆ ಮೂಲ ಉಳಿತಾಯ ಖಾತೆ ತೆರೆಯುವ ಯೋಜನೆ ರೂಪಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೆ.ಪಿ.ವಾಸುದೇವ್ ಹೇಳಿದ್ದಾರೆ. ಈ ಉಳಿತಾಯ ಖಾತೆಗೆ ಚೆಕ್‌ಪುಸ್ತಕ, ಪಾಸ್‌ಪುಸ್ತಕ ನೀಡಲಾಗುವುದು. ಖಾತೆಗೆ ಹಣ ಜಮಾ ಮಾಡಲು ಯಾವುದೇ ಕಟ್ಟುಪಾಡು-ಮಿತಿ ವಿಧಿಸಿಲ್ಲ. ಖಾತೆಯಲ್ಲಿ ಎಷ್ಟು ಬೇಕಾದರೂ ನಗದು ವಹಿವಾಟು ನಿರ್ವಹಿಸಬಹುದು. ಪ್ರತಿ ತ್ರೈಮಾಸಿಕ ಅಂತ್ಯದಲ್ಲಿ ಎಲ್ಲಾ ಉಳಿತಾಯ ಖಾತೆಗಳಲ್ಲಿನ ಪ್ರತಿ ದಿನದ ಬಾಕಿ ಮೊತ್ತದ ಮೇಲೆ ವಾರ್ಷಿಕ ಶೇ.5 ದರದಲ್ಲಿ ಬಡ್‌ಡಿ ಜಮೆ ಮಾಡಲಾಗುವುದು. ಈ ಅವಕಾಶವನ್ನು ನಾಗರೀಕರು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಪೂರ್ವಭಾವಿ
ಸಭೆ ನಾಳೆ
ನೆಲಮಂಗಲ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 2012-13ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನೆಲಮಂಗಲ ತಾಲೂಕಿನಲ್ಲಿ ಹಮ್ಮಿಕೊಳ್ಳುವ ಬಗ್ಗೆ ಫೆಬ್ರವರಿ 5ರ ಮಂಗಳವಾರದಂದು ಸಂಜೆ 5-00 ಗಂಟೆಗೆ ಪಟ್ಟಣದ ಸೊಂಡೆಕೊಪ್ಪ ರಸ್ತೆಯಲ್ಲಿರುವ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಲಾಗುವುದು. ತಾಲೂಕಿನ ಕನ್ನಡ ಸಾಹಿತ್ಯಾಭಿಮಾನಿಗಳು, ಸರ್ವ ಸದಸ್ಯರುಗಳು ಸಭೆಗೆ ಆಗಮಿಸಿ ತಮ್ಮ ಅತ್ಯಮೂಲ್ಯವಾದ ಸಲಹೆ ಮತ್ತು ಸೂಕ್ತವಾದ ಮಾರ್ಗದರ್ಶನಗಳನ್ನು ನೀಡುವಂತೆ ಗೌರವ ಕಾರ್ಯದರ್ಶಿ ಎಂ.ಸೂರ್ಯಪ್ರಕಾಶ್ ತಿಳಿಸಿದ್ದಾರೆ.