ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಿಂಡಿಕೇಟ್ ಸಭೆ ನಡೆದದ್ದು ಸದಸ್ಯರಿಗೇ ಗೊತ್ತಿಲ್ಲ

Mainashree
Updated On : 5 Feb 2013, 12:04 pm

ವಿಶೇಷ ವರದಿ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಹಂಗಾಮಿ ಕುಲಪತಿಯಾಗಿದ್ದ ಡಾ.ಎನ್. ರಂಗಸ್ವಾಮಿ ಅವರು ಅಧಿಕಾರ ದುರುಪಯೋಗ ಪಡೆಸಿಕೊಂಡು ಕಾನೂನು ಬಾಹಿರವಾಗಿ ಮಿನಿ ಸಿಂಡಿಕೇಟ್ ಸಭೆ ನಡೆಸಿರುವುದು ಇದೀಗ  ಬೆಳಕಿಗೆ ಬಂದಿದೆ.
ಶೋಧನಾ ಸಮಿತಿ ಅಧಿಸೂಚನೆಯಾದ ಮೇಲೆ ನಿಯಮಬಾಹಿರವಾಗಿ ಈ ಸಭೆ ನಡೆಸಿ ಎರಡು ಸಮಿತಿ ರಚನೆ ಮಾಡಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಪಾಳು ಬಿದ್ದಿರುವ ಕಟ್ಟಡಗಳ ಮರು ನಿರ್ಮಾಣಕ್ಕಾಗಿ 565ಲಕ್ಷ ವೆಚ್ಚ ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಿದ್ದಾರೆ.
ಈ ಭಾರೀ ಮೊತ್ತದ ಹಣ ಬಿಡುಗಡೆ ಸಂಬಂಧ ಹಂಗಾಮಿ ಕುಲಪತಿಗಳು ಬೆಂಗಳೂರು ವಿವಿ ವಿತ್ತ ಇಲಾಖೆಯನ್ನು ಸಂಪರ್ಕಿಸಿಲ್ಲ. ಅಷ್ಟೇ ಏಕೆ, ಈ ಮಿನಿ ಸಿಂಡಿಕೇಟ್ ಸಭೆ ನಡೆದಿರುವುದೇ ಬಹುತೇಕ ಸಿಂಡಿಕೇಟ್ ಸದಸ್ಯರಿಗೆ ತಿಳಿದಿಲ್ಲ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ 2000 ಪರಿಚ್ಛೇದ 32 ರ ಪ್ರಕಾರ ಹಣಕಾಸು ಸಮಿತಿಯ  ಅನುಮೋದನೆ ಪಡೆಯಬೇಕಾಗಿರುತ್ತದೆ. ಈ ರೀತಿಯ ಯಾವುದೇ ಕ್ರಮವನ್ನು ಹಂಗಾಮಿ ಕುಲಪತಿಯವರು ಅನುಸರಿಸಿಲ್ಲ.
ತುರ್ತು ಸಮಿತಿ:  ರಂಗಸ್ವಾಮಿ ಅವರು ಜ.17ರಂದು ತುರ್ತು ಮಿನಿ ಸಿಂಡಿಕೇಟ್ ಸಭೆ ನಡೆಸಿದರು. ಸಭೆಯ ಅಧ್ಯಕ್ಷರಾಗಿ ಪ್ರೊ. ಎನ್. ರಂಗಸ್ವಾಮಿ ಸೇರಿದಂತೆ 8 ಸಿಂಡಿಕೇಟ್ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಶ್ವವಿದ್ಯಾಲಯದ ಭದ್ರತೆ ಬಗ್ಗೆ ಚರ್ಚೆ ನಡೆಸಿದ ನಂತರ ಹಲವು ವರ್ಷಗಳಿಂದ ಕಾಮಗಾರಿ ನಿಂತಿರುವ ಕಟ್ಟಡಗಳಿಗೆ ಮರು ಜೀವ ನೀಡುವ ವಿಷಯದ ಬಗ್ಗೆ ಚರ್ಚಿಸಿ ಸಮಿತಿ ಭಾರಿ ದೊಡ್ಡ ವೆಚ್ಚವನ್ನು ವ್ಯಯಿಸಲು ಅನುಮೋದನೆಯ ಬಗ್ಗೆ ತೀರ್ಮಾನಿಸಿದೆ.
ಯಾವುದೇ ಖರ್ಚು ವೆಚ್ಚದ ಬಗ್ಗೆ ಸಭೆಯಲ್ಲಿ ಚರ್ಚಿಸುವಾಗ ವಿತ್ತಾಧಿಕಾರಿಗಳು ಇರಬೇಕಾಗುತ್ತದೆ. ಆದರೆ,  ಈ ಸಭೆಯಲ್ಲಿ ಯಾರೂ ಇರಲಿಲ್ಲ. ಅಲ್ಲದೆ, ವಿವಿಯಲ್ಲಿರುವ ಕಾಮಗಾರಿ ಸಮಿತಿ, ತಾಂತ್ರಿಕ ಸಮಿತಿ, ಹಣಕಾಸು ಸಮಿತಿ ಗಮನಕ್ಕೆ ತಂದು ಆನಂತರ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಬೇಕಾಗುತ್ತದೆ. ಈ ಪ್ರಕ್ರಿಯೆ ನಡೆದಿಲ್ಲ.
ಗುಣಮಟ್ಟ ಪರಿಶೀಲನೆಗೆ ಸಮಿತಿ
ಈ ಸಭೆ ನಡೆಸಿರುವುದೇ ಕಾನೂನು ಬಾಹಿರ ಇಂತಹ ಸಮಯದಲ್ಲಿ ಸಮಿತಿಯಲ್ಲೇ ಉಪ ಸಮಿತಿ  ರಚನೆ ಮಾಡಲಾಗಿದೆ. ಈ ಉಪ ಸಮಿತಿ ಏಕೆ ಗೊತ್ತೆ?
ಬಿಬಿಎಂಪಿ 11ಕೋಟಿ ವೆಚ್ಚದಲ್ಲಿ ಜ್ಞಾನಭಾರತಿ ಆವರಣದಲ್ಲಿ ನಿರ್ಮಿಸುತ್ತಿರುವ ರಸ್ತೆಯ ಗುಣಮಟ್ಟ ಪರಿಶೀಲನೆ ನಡೆಸಲು. ಈ ಸಮಿತಿಯಲ್ಲಿ ಸಿಂಡಿಕೇಟ್ ಸದಸ್ಯರಾದ ಎಂ. ಗಿರೀಶ್, ಸಿ.ಕೆ. ಜಗದೀಶ್, ವಿವಿ ಸಿವಿಲ್ ಎಂಜಿನಿಯರಿಂಗ್ ವಿಭಾಗ ಡಾ.ಎಂ.ಎಸ್. ಅಮರ್ನಾಥ್, ವಿವಿ ಎಂಜಿನಿಯರ್ ಸೇರಿ ನಾಲ್ಕು ಸದಸ್ಯರಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಪರಿನಿಯಮಾವಳಿ 5.21ರ ಪ್ರಕಾರ ಸಿಂಡಿಕೇಟ್ ಉಪಸಮಿತಿ ನೇಮಿಸಲು ಸಿಂಡಿಕೇಟ್ಗೆ ಮಾತ್ರ ಅಧಿಕಾರವಿರುತ್ತದೆ.
ಆದರೆ, ಮಾನ್ಯ ಹಂಗಾಮಿ ಕುಲಪತಿಗಳು ತಮ್ಮ ಅಧಿಕಾರವಧಿಯಲ್ಲಿ  ಸುಮಾರು 8 ಸಿಂಡಿಕೇಟ್ ಸಭೆ ನಡೆಸಿ ಒಂದರಲ್ಲೂ ಈ ಭಾರೀ ವೆಚ್ಚಗಳ ಬಗ್ಗೆ ಪ್ರಸ್ತಾಪ ಮಾಡದಿರುವುದು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೋಲಾರ ಪಿ.ಜಿ. ಕೇಂದ್ರ ಕಾಮಗಾರಿ ನೆಲಗುದ್ದಿಗೆ ಬಿದ್ದಿದ್ದು, ಈ ಬಗ್ಗೆ ಕಾಳಜಿವಹಿಸಿದ ಹಂಗಾಮಿ ಕುಲಪತಿಗಳು ರಸ್ತೆ ಗುಣಮಟ್ಟದ ಬಗ್ಗೆ ಕಾಳಜಿವಹಿಸಿರುವುದು ಚರ್ಚಾ ವಿಷಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement