ಕಾಂಗ್ರೆಸ್ಗೆ ಮುಸ್ಲಿಂ ಮುಖಂಡರ ಸೇರ್ಪಡೆ
ಕನಕಪುರ: ವಿಪ ಮಾಜಿ ಸದಸ್ಯ ಎಸ್.ರವಿ, ಕಾಂಗ್ರೆಸ್ ಮುಖಂಡ ಜೋಸೆಫ್ ಗೊನ್ಸಾಲ್ವಿಸ್ ನೇತೃತ್ವದಲ್ಲಿ ಅನೇಕ ಮುಸ್ಲಿಂ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಮುಸ್ಲಿ ಂ ಮುಖಂಡರಾದ ಸಲಾವುದ್ದೀನ್, ಬರ್ಖತ್, ಸಾದಿಕ್, ಮುಜಾಹಿದ್, ಮುನಾವರ್, ಬಷೀರ್, ಮಹ್ಮದ್ಅಲಿ ಕಾಂಗ್ರೆಸ್ಸೇರಿದ ಪ್ರಮುಖರು. ಎಸ್. ರವಿ ಮಾತನಾಡಿ, ಸ್ವಾತಂತ್ರ್ಯಾನಂತರದ ಭಾರತದಲ್ಲಿ ಮುಸ್ಲಿಮರಿಗೆ ರಕ್ಷಣೆ, ನೈತಿಕ ಬೆಂಬಲಗಳನ್ನು ನೀಡಿದ ಪಕ್ಷ ಕಾಂಗ್ರೆಸ್ ಎಂದು ಹೇಳಿದರು. ಮುಖಂಡ ಸಲಾವುದ್ದೀನ್ ಮಾತನಾಡಿದರು.
ದಲಿತರ ಸ್ಮಶಾನಕ್ಕೆ ಸ್ಥಳ ನೀಡಿ: ಕೃಷ್ಣ
ಆನೇಕಲ್: ಬೆಂಗಳೂರು ದಕ್ಷಿಣ ತಿರುಪಾಳ್ಯ, ಹೆಬ್ಬಗೋಡಿ, ಗೊಲ್ಲಹಳ್ಳಿ ಭಾಗದಲ್ಲಿ ಸಾವಿರಾರು ದಲಿತ ಕುಟುಂಬಗಳಿದ್ದು ಜೀವನದ ಅಂತಿಮ ಪ್ರಯಾಣವನ್ನೂ ನೆಮ್ಮದಿಯಾಗಿ ನಡೆಸಲು ಸರ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳು ಅವಕಾಶ ನೀಡುತ್ತಿಲ್ಲ ಎಂದು ಜೆಡಿಯು ಮುಖಂಡ ತಿರುಪಾಳ್ಯ ಕೃಷ್ಣ ಆರೋಪಿಸಿದ್ದಾರೆ. ಕ್ಷೇತ್ರದಲ್ಲಿ ದಲಿತ ಪರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ತಿರುಪಾಳ್ಯ ಗ್ರಾಮದ ಸಂ.ನಂ. 9 ರಲ್ಲಿ 6 ಎಕರೆ ಸರ್ಕಾರಿ ಜಮೀನಿದ್ದು ದಲಿತರ ಸ್ಮಷಾನಕ್ಕೆ ಕನಿಷ್ಠ 2 ಎಕರೆ ಭೂಮಿ ನೀಡಲು ತಹಸೀಲ್ದಾರ್ ಅವರಿಗೆ 2011ರಲ್ಲಿ ಅರ್ಜಿ ನೀಡಿದ್ದೆವು. ಆದರೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
ಆರೋಪಿ ಶಬೀರ್ ಅಹ್ಮದ್ ಬಂಧನ
ಕೆಜಿಎಫ್: 1997ರ ಅರ್ಚನಾ ಗ್ರಾನೈಟ್ಸ್ ವ್ಯವಸ್ಥಾಪಕ ಎಂ.ಡಿ.ರಾಮಮೂರ್ತಿ ಅವರ ಮಗ ರಾಜೇಶ್ ಅಪಹರಣ ಹಾಗೂ ಹಲ್ಲೆ ಪ್ರಕರಣದ ಆರೋಪಿ ಶಬೀರ್ ಅಹ್ಮದ್ನನ್ನು ರಾಬರ್ಟ್ಸನ್ಪೇಟೆ ಪೊಲೀಸರು ಬಂಧಿಸಿದ್ದಾರೆ. ಕೆಜಿಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಧೀಶರು ಈತನನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ಎಂ.ಡಿ.ರಾಮಮೂರ್ತಿ ಅವರ ಮಗ ರಾಜೇಶ್ನನ್ನು ಜುಲೈ 19, 1997ರಲ್ಲಿ ರೌಡಿ ತಂಗಂ ಹಾಗೂ ಮೂವರು ಸಹಚರರಾದ ಶಿವಬಾಲನ್, ಶಬೀರ್ಅಹ್ಮದ್ ಮತ್ತು ಲೋಕೇಶ್ ಎಂಬವರು ಅಪಹರಿಸಿ 1ಲಕ್ಷ ಪಡೆದು ಹಲ್ಲೆ ನಡೆಸಿರುವ ಬಗ್ಗೆ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಎಂ.ಡಿ.ರಾಮಮೂರ್ತಿ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 363, 342, 392 ಅಡಿ ಅಪಹರಣ ಪ್ರಕರಣ ದಾಖಲಿಸಲಾಗಿತ್ತು. ಬಳಿಕ 1998ರಲ್ಲಿ ಕುಖ್ಯಾತ ರೌಡಿ ತಂಗಂ ಪೊಲೀಸರ ಎನ್ಕೌಂಟರ್ಗೆ ಬಲಿಯಾಗಿದ್ದ. ಈ ಅಪಹರಣ ಪ್ರಕರಣದಲ್ಲಿ ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ಸನ್ಪೇಟೆ ಪೊಲೀಸರು 16 ವರ್ಷಗಳ ನಂತರ ಬೆಂಗಳೂರಿನಲ್ಲಿ ಆರೋಪಿ ಶಬೀರ್ ಅಹ್ಮದ್ನನ್ನು ಬಂಧಿಸಿ ಮಂಗಳವಾರ ಸಂಜೆ ಕೆಜಿಎಫ್ನ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಈತನನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.