ಗ್ರಾಮೀಣ ಕಲೆ ಉಳಿದಿರೋದು ಕಲಾವಿದರಿಂದ ಮಾತ್ರ: ಗೌಡ
ಮಾಗಡಿ: ದೃಶ್ಯಮಾಧ್ಯಮಗಳ ನಡುವೆಯೂ ಗ್ರಾಮೀಣ ಕಲೆ ಜೀವಂತವಾಗಿ ಉಳಿದಿರುವುದು ಗ್ರಾಮೀಣ ಕಲಾವಿದರಿಂದ ಮಾತ್ರ ಎಂದು ಸಮಾಜ ಸೇವಕ ಸಾಮ್ರಾಟ್ ಗೌಡ ತಿಳಿಸಿದರು. ಅವರು ತಾಲೂಕಿನ ಬೆಳಗವಾಡಿ ಗ್ರಾಮದಲ್ಲಿ ಶ್ರೀ ಬಾಲಗಂಗಾಧರನಾಥಸ್ವಾಮೀಜಿ ಅವರ ಸ್ಮರಣಾರ್ಥ ಕಾಸಾಘಟ್ಟದ ಗ್ರಾಮದ ಅರ್ಚಕ ರಂಗಸ್ವಾಮಿ ಅವರ ಒಂದೇ ಕುಟುಂಬ ಕಲಾವಿದರಿಂದ ಮಂಗಳವಾರ ನಡೆದ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಜನರ ಜೀವನವೇ ಜಾನಪದ ಕಲೆಯಾಗಿದೆ. ರಂಗಕಲೆ, ಜಾನಪದ ಕಲೆ, ಯಕ್ಷಗಾನ, ವೀರಗಾಸೆ ನೃತ್ಯ ಕಲೆ, ಆಧುನಿಕ ಭರಾಟೆಯಲ್ಲಿ ಕಣ್ಣರೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ತಾ.ಪಂ. ಅಧ್ಯಕ್ಷ ಬಿ.ಟಿ.ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲೆ ಗ್ರಾಮೀಣ ಜನರ ಅವಿಭಾಜ್ಯ ಅಂಗವಾಗಿದೆ. ತಾಲೂಕಿನಲ್ಲಿ ನೂರಾರು ಕಲಾವಿದರಿದ್ದು, ಕಲಾವಿದರ ಬದುಕು ಕಷ್ಟಕ್ಕೆ ಸಿಲುಕಿದೆ. ಕಲಾವಿದರಿಗೆ ಸರ್ಕಾರ ವಿಶೇಷ ಯೋಜನೆ ರೂಪಿಸಿ ಪ್ರೋತ್ಸಾಹಿಸಿದರೆ ಕಲಾವಿದರು ಉಳಿಯುತ್ತಾರೆ. ಕಲೆಯೂ ಉಳಿಯುತ್ತದೆ ಬಣ್ಣದ ಬದುಕು ಸುಂದರವಾಗುತ್ತದೆ ಎಂದರು.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ರಂಗಸ್ವಾಮಿ, ಬಿ.ಆರ್. ಕೃಷ್ಣಪ್ಪ, ಕಾರ್ಯದರ್ಶಿ ಬಿ.ಎಂ.ನಾಗರಾಜು, ಖಜಾಂಚಿ ಬೆಳಗವಾಡಿ ಶಂಕರ್, ಬಿ.ಬಿ. ಚನ್ನಪ್ಪ, ಶಿವಕುಮಾರ್, ಬಿ.ಕೆ.ತಿಮ್ಮಯ್ಯ, ನಾಡಪ್ರಭು ಕೆಂಪೇಗೌಡ ಯುವಕರ ಸಂಘದ ಅಧ್ಯಕ್ಷ ಬಿ.ಸಿ. ನಾಗೇಶ್, ಸೇಹಿತರು, ಕಲಾಭಿಮಾನಿಗಳು, ಗ್ರಾಮಸ್ಥರು ಹಾಜರಿದ್ದರು.