ಸಾಮಾಜಿಕ ಸೇವೆಯಿಂದ ಆತ್ಮತೃಪ್ತಿ: ಇಕ್ಬಾಲ್ ಹುಸೇನ್
ಕನಕಪುರ: ಸಾಮಾಜಿಕ ಸೇವೆಯಿಂದ ಆತ್ಮತೃಪ್ತಿ ಲಭಿಸುತ್ತದೆ. ಸಮುದಾಯದ ಋಣ ತೀರಿಸುವ ಭಾಗ್ಯ ದೊರೆಯುತ್ತದೆ. ನಮ್ಮ ನೆರೆ ಹೊರೆಯವರಿಗೆ ಸದಾ ಸಹಾಯ ಮಾಡಲು ಮುಂದಾಗುವುದು, ಸಮಾಜದ ಬಡವರ, ದೀನ, ದಲಿತರರಿಗೆ ನೆರವಾಗುವುದು ಎಂದಿಗೂ ನೆಮ್ಮದಿ ತರುವ ಕೆಲಸವಾಗಿದೆ ಎಂದು ಜಿಪಂ ಸದಸ್ಯ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಅವರು ಹೊಸಕಬ್ಬಾಳು ಗ್ರಾಮದ ಅಂಬೇಡ್ಕರ್ ಪ್ರೌಢಶಾಲೆ ವಾರ್ಷಿಕೋತ್ಸವದಲ್ಲಿ ಮಾತನಾಡುತ್ತಿದ್ದರು. ಸರ್ಕಾರಿ ಪಪೂ ಕಾಲೇಜು ಪ್ರಾಂಶುಪಾಲ ದೊಡ್ಡರಸಿನಕೆರೆ ಮಾಯಪ್ಪ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜ ಸೇವಕ ಹೊನ್ನಿಗನಹಳ್ಳಿಶ್ರೀಕಂಠು ಮಾತನಾಡಿ, ಗ್ರಾಮೀಣಪ್ರದೇಶದ ಯುವಕರಿಗೆ ಅವಕಾಶಗಳು ಲಭಿಸದೆ ಅವರ ಪ್ರತಿಭೆ ಮೂಲೆಗುಂಪಾಗುತ್ತಿದೆ, ಅವರನ್ನು ಗುರುತಿಸಿ ಉತ್ತೇಜಿಸುವ ಕೆಲಸವನ್ನು ಸಂಘ ಸಂಸ್ಥೆಗಳು ನಡೆಸಬೇಕು. ಶಾಲೆಗಳು ಉತ್ತಮ ಪ್ರಜೆಗಳನ್ನು ರೂಪಿಸುವ ತಾಣವಾಗಬೇಕು ಎಂದು ಹೇಳಿದರು.
ಶಾಲೆಯ ಬೆಳವಣಿಗೆಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಲಾಯಿತು. ಜಾನಪದ ಗಾಯಕ ಬೇಗೂರು ರಾಮಯ್ಯ ತಂಡದವರಿಂದ ಗೀತಗಾಯನ ನಡೆಯಿತು. ಮುಖ್ಯ ಶಿಕ್ಷಕ ಪುಟ್ಟಸ್ವಾಮಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು.