'ಅಧಿಕಾರಕ್ಕೆ ಬಂದರೆ ಹೈನೋದ್ಯಮಕ್ಕೆ ಒತ್ತು'
ಚನ್ನಪಟ್ಟಣ: ಬರದಿಂದ ಕಂಗಾಲಾಗಿರುವ ರೈತರಿಗೆ ಹೈನೋದ್ಯಮ ಜೀವನಾಶ್ರಯವಾಗಿದ್ದು, ಹೈನುಗಾರಿಕೆಗೆ ಪೂರಕ ವಾತಾವರಣ ನಿರ್ಮಿಸಲು ಅಗತ್ಯವಿರುವ ಯೋಜನೆಯನ್ನು ನಮ್ಮ ಜೆಡಿಎಸ್ ಮುಂದಿನ ದಿನಗಳಲ್ಲಿ ಕೈಗೊಳ್ಳಲಿದೆ ಎಂದು ಶಾಸಕಿ ಅನಿತಾಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಬಮೂಲ್ ಶಿಬಿರದ ಕಚೇರಿಯಲ್ಲಿ ಮೃತ ರಾಸುಗಳು ಮತ್ತು ಮೃತ ಸದಸ್ಯರ ಕುಟುಂಬದವರಿಗೆ ಪರಿಹಾರ ಧನ ವಿತರಿಸಿ ಅವರು ಮಾತನಾಡಿದರು.
ಹಾಲು ಒಕ್ಕೂಟವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕೆಂಬುದು ಕುಮಾರಸ್ವಾಮಿ ಅವರ ಕನಸಾಗಿದ್ದು, ಅದನ್ನವರು ಸಾಧಿಸೇ ತೀರುತ್ತಾರೆ
ಎಂದು ವಿಶ್ವಾಸ ವ್ಯಕ್ತಪಡಿಸದರು.
ಈ ಬಾರಿ ಜೆಡಿಎಸ್ ಅಧಿಕಾರ ಗಳಿಸುವುದುಖಚಿತ. ಜನತೆಯ ಆಶೀರ್ವಾದದೊಂದಿಗೆ ಗೆಲುವು ಸಾಧಿಸುವ ನಮ್ಮ ಪಕ್ಷ ಮುಂದಿನ ದಿನಗಳಲ್ಲಿ ಹೈನೋದ್ಯಮ ಶ್ರೀಮಂತಗೊಳಿಸಲು ಮುಂದಾಗಲಿದೆ ಎಂದರು.
ರು. 4 ಬೆಂಬಲ ಬೆಲೆ: ರೈತರಿಗೆ ನೆರವಾಗುವ ಉದ್ದೇಶದಿಂದ ಜೆಡಿಎಸ್ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿ ಲೀಟರ್ ಹಾಲಿಗೆ 4 ರು. ಬೆಂಬಲ ಬೆಲೆ ನೀಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.ಅಮೃತ ಯೋಜನೆ: ವಿಧವೆಯರಿಗೆ ನೆರವಾಗುವ ಅಮೃತ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ, ಹೆಚ್ಚು ಹೆಚ್ಚು ಹಸು ಖರೀದಿ ಮಾಡಲು ಸಹಾಯಧನ ನೀಡಿ ಅವರಿಗೆ ಆರ್ಥಿಕ ಭದ್ರತೆ ಕಲ್ಪಿಸಬೇಕಿದ್ದು, ಈ ಯೋಜನೆಗೆ ಒತ್ತು ನೀಡುವಂತೆ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ, ರಾಮನಗರದ ಸಮೀಪ ಪಶು ಆಹಾರ ಘಟಕ ಸ್ಥಾಪನೆಗೆ ಮುಂದಾಗಿದ್ದರು. ಆದರೆ ಬಿಜೆಪಿ ಸರ್ಕಾರದ ರಾಜಕೀಯ ವೈಷಮ್ಯದಿಂದಾಗಿ ಈ ಘಟಕ ಸ್ಥಾಪನೆಯಾಗದೆ ರೈತರು ಪಶು ಆಹಾರಕ್ಕಾಗಿ ಪರಿತಪಿಸುವಂತಾಗಿದೆ ಎಂದು ಆರೋಪಿಸಿದರು. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಮುನಿರಾಜು, ಡಾ.ಶ್ರೀಧರ್, ವಿಸ್ತರಣಾಧಿಕಾರಿಗಳಾದ ಮಹದೇವೇಗೌಡ, ಶಿವಪ್ರಸನ್ನ, ಅಮಿತಾಹೆಗಡೆ, ಟಿಎಪಿಸಿಎಂಎಸ್ ಅಧ್ಯಕ್ಷ ಗರಕಹಳ್ಳಿ ಕೃಷ್ಣೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಮಲ್ಲಿಕಾರ್ಜುನಗೌಡ, ಉದ್ಯಮಿ ನಿಜಲಿಂಗೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು.