ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ನಾನೂ ಈ ನೆಲದಲ್ಲೇ ಹುಟ್ಟಿ ಬೆಳೆದವಳು

Rashmi Kasaragodu
Updated On : 7 Feb 2013, 12:06 pm





ಚನ್ನಪಟ್ಟಣ: ಚನ್ನಪಟ್ಟಣಕ್ಕೂ ನನಗೂ ಇರುವ ಸಂಬಂಧ ಪಾಪ ಸಚಿವರಿಗೆ ಗೊತ್ತಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಸಚಿವ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದರು.
ತಾಲೂಕಿನ ಅಂಬಾಡಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿ ಅವರು ಮಾತನಾಡಿದರು.
ನಾನು ಈ ನೆಲದಲೇ ಹುಟ್ಟಿ ಬೆಳೆದ ಹೆಣ್ಣು ಮಗಳು, ನಾನು ಕಲಿತಿದ್ದು, ಬೆಳೆದಿದ್ದು ಇಲ್ಲೇ, ಈ ತಾಲೂಕಿನ ಜನ ಇಂದಿಗೂ ನನ್ನನ್ನು ಸೀತಾರಾಮ ಡಾಕ್ಟರ ಮಗಳೆಂದು ಗುರುತಿಸುತ್ತಾರೆ ಅದು ಮಾನ್ಯ ಸಚಿವರಿಗೆ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ನನ್ನ ಪತಿ ಕ್ಷೇತ್ರದ ಸಂಸದ, ಮಾವನವರೂ ಕ್ಷೇತ ಪ್ರತಿನಿಧಿಸಿದ್ದರು. ಇಲ್ಲಿನ ಕುಂದು ಕೊರತೆ ಆಲಿಸುವ ಜವಾಬ್ದಾರಿ ನನ್ನ ಮೇಲಿದೆ ಅದನ್ನು ನಾನು ನಿಭಾಯಿಸುತ್ತಿದ್ದೇನೆ ತಾಕೀತು ಮಾಡಿದರು.
ಮಾತಿಗೆ ಮಿತಿ ಇರಲಿ: ಸೋಲುವ ಹತಾಶೆಯಿಂದ ಯೋಗೇಶ್ವರ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವುದು ಸಂವಿಧಾನ ನೀಡಿರುವ ಹಕ್ಕು ಇದನ್ನು ಪ್ರಶ್ನಿಸಲು ಅವರುಯಾರು ಎಂದು ಪ್ರಶ್ನಿಸಿದರು.
ಯೋಗೇಶ್ವರ್ ಹತಾಶ ಹೇಳಿಕೆಗೆ ಜನತೆಯೇ ಉತ್ತರ ನೀಡಲಿದ್ದಾರೆ, ಬಾಯಿಗೆ ಬಂದಂತೆ ಹೇಳಿಕೆ ನೀಡುವುದನ್ನು ಬಿಟ್ಟು ಚುನಾವಣೆಯನ್ನು ಸ್ಪರ್ಧಾತ್ಮಕವಾಗಿ ತೆಗೆದು ಕೊಂಡು ಎದುರಿಸಲಿ ಎಂದು ಸವಾಲಾಕಿದರು.
ಕೊಚ್ಚೆಗೆ ಕಲ್ಲು ಎಸೆಯುವುದಿಲ್ಲ: ಅವರಿವರ ಬಗ್ಗೆ ಆರೋಪ ಮಾಡಲು ಇಲ್ಲಿಗೆ ಬಂದಿಲ್ಲ, ನೊಂದವರಿಗೆ ನೆರವಾಗುವ ಉದ್ದೇಶದಿಂದ ಬಂದಿದ್ದೇನೆ, ಕೊಚ್ಚೆಗೆ ಕಲ್ಲೆಸೆದು ಮುಖಕ್ಕೆ ಹಾರಿಸಿ ಕೊಳ್ಳುವ ಕೆಲಸ ನನಗೆ ಬೇಕಿಲ್ಲ ಎಂದು ಯೋಗೇಶ್ವರ್ ವಿರುದ್ಧ ಪರೋಕ್ಷ ಟೀಕೆ ಮಾಡಿದರು.
ದಾಖಲೆ ಬಿಡುಗಡೆ ಮಾಡುವೆ: ಮಧುಗಿರಿಯ ಅಭಿವೃದ್ಧಿ ಬಗ್ಗೆ ಯೋಗೇಶ್ವರ್ ಮಾತನಾಡುತ್ತಲೇ ಇರುತ್ತಾರೆ. ಕೆಲವೇ ದಿನಗಳಲ್ಲಿ ಮಧುಗಿರಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ದಾಖಲೆ ಬಿಡುಗಡೆ ಮಾಡುತ್ತೇನೆ, ಬಳಿಕ ಅವರು 12 ವರ್ಷ ಈ ಕ್ಷೇತ್ರದ ಶಾಸಕರಾಗಿ ಮಾಡಿರುವ ಸಾಧನೆ ಏನೆಂದು ತಿಳಿಸಲಿ ಎಂದು ಸವಾಲು ಹಾಕಿದರು.
ಆಧುನಿಕ ಭಗೀರಥ ಯಾರು?: ಅವರಿಗೆ ಆಧುನಿಕ ಭಗೀರಥ ಎಂಬ ಬಿರುದು ಕೊಟ್ಟವರು ಯಾರು, ಅವರಷ್ಟಕ್ಕೆ ಅವರೇ ಆಧುನಿಕ ಭಗೀರಥ ಎಂದು ಕರೆದು ಕೊಂಡರೇ ನಾವೇನು ಮಾಡಲಾಗುತ್ತದೆ, ಕ್ಷೇತ್ರದಲ್ಲಿ ನೂರಾರು ಹಳ್ಳಿಗಳಿಗೆ ಕುಡಿಯಲು ನೀರಿಲ್ಲ ದಂತಾಗಿದೆ,  ಜನರ ಸಮಸ್ಯೆ ಹೇಳ ತೀರಾದಾಗಿದ್ದು, ಸಮಸ್ಯೆಗೆ ಸ್ಪಂದಿಸಬೇಕಾದ ಆಧುನಿಕ ಭಗೀರಥರು ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ಜೆಡಿಎಸ್ ಕೊಡುಗೆ ಅಪಾರ: ಇಗ್ಗಲೂರು ಜಲಾಶಯ ನಿರ್ಮಾಣ ಮಾಡಿದ್ದು ದೇವೇಗೌಡರು ಇದಕ್ಕೆ ಸಾಕಷ್ಟು ಪುರಾವೆಗಳಿವೆ, ಅಂದು ವರದೇಗೌಡರು ಮತ್ತು  ದೇವೇಗೌಡರು ಶ್ರಮಿಸದಿದ್ದರೆ ಬ್ಯಾರೇಜ್ ನಿರ್ಮಾಣವಾಗುತ್ತಿತ್ತೇ ಎಂಂಬುದನ್ನು ಆಧುನಿಕ ಭಗೀರಥರೆ ಉತ್ತರಿಸಲಿ ಎಂದು ಕುಟುಕಿದರು. ಬಮೂಲ್ ನಿರ್ದೇಶಕ  ಎಸ್. ಲಿಂಗೇಶ್ ಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಕೃಷ್ಣೇಗೌಡ, ನಿಜಲಿಂಗೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ಮಲ್ಲಿಕಾರ್ಜುನಗೌಡ, ನಗರ ಜೆಡಿಎಸ್ ಅಧ್ಯಕ್ಷ ಸತ್ಯನಾರಾಯಣ, ಮಹಿಳಾ ಜೆಡಿಎಸ್ ಜಿಲ್ಲಾಧ್ಯಕ್ಷೆ ರೇಖಾ ಉಮಾಶಂಕರ್, ಮೈಲನಾಯ್ಕನ ಹಳ್ಳಿ ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement