ನೈಜ ಸಾಹಿತ್ಯಿಕ ಮೌಲ್ಯ ಶೈಕ್ಷಣಿಕ ಪಠ್ಯದಲ್ಲಿ ಮಾಯ: ರಾಮಚಂದ್ರ
ದೊಡ್ಡಬಳ್ಳಾಪುರ: ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗದಂತೆ, ಜನಾಂಗಗಳ ಮನಸ್ಸುಗಳಿಗೆ ನೋವಾಗದಂತೆ ಪಠ್ಯ ಪುಸ್ತಕಗಳನ್ನು ರಚಿಸುವ ಇಕ್ಕಟ್ಟಿನಲ್ಲಿ ವಿಶ್ವವಿದ್ಯಾಲಯಗಳು, ಶಿಕ್ಷಣ ಇಲಾಖೆ ಇರುವುದರಿಂದ ಪಠ್ಯದ ನೈಜ ಸಾಹಿತ್ಯಿಕ ಉದ್ದೇಶಗಳನ್ನು ವಿದ್ಯಾರ್ಥಿಗಳಿಗೆ ಕಟ್ಟಿಕೊಡುವಲ್ಲಿ ಇಂದಿನ ಓದು ವಿಫಲವಾಗುತ್ತಿದೆ ಎಂದು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಿ. ರಾಮಚಂದ್ರ ಅಭಿಪ್ರಾಯಪಟ್ಟರು.
ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಕೊಂಗಾಡಿಯಪ್ಪ ಕಾಲೇಜಿನಲ್ಲಿ ನಡೆದ ಪಟೇಲ್ ಟಿ.ಸಿ.ಸುಬ್ಬೇಗೌಡ-ಕೆಂಪಮ್ಮ ದತ್ತಿ ಮತ್ತು ಕೋಸು ಸಂಪುಟಾಣೆ-ಪ್ರಭಾ ಸಂಪುಟಾಣೆ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಪಠ್ಯ ವಿಚಾರದ ಕುರಿತು ಮಾತನಾಡಿದರು. ಮೂಲ ಪರಿಕಲ್ಪನೆಗಳನ್ನು ಕಟ್ಟಿಕೊಡುವ ಪಠ್ಯ ನಮಗೆ ಬೇಕಾಗಿದೆಯೇ ಹೊರತು ವಿವಾದಗಳ ಮಿತಿಯಲ್ಲಿ ಕಟ್ಟಿಕೊಡುವ ಪಠ್ಯವಲ್ಲ ಎಂದರು.ಉಪನ್ಯಾಸಕ ಕೆ.ಆರ್. ಮಂಜುನಾಥ್, ಶಿವರಾಮಕಾರಂತರ ಚೋಮನದುಡಿ ವಿಚಾರದ ಬಗ್ಗೆ ಮಾತನಾಡಿದರು. ಕೋಸು ಸಂಪುಟಾಣೆ ಬದುಕು ಬರೆಹದ ಕುರಿತು ವಿವರಿಸಿದರು. ಪ್ರೊ.ಬಿ.ಟಿ. ಮಹದೇವ್, ತಾ.ಕಸಾಪ ಅಧ್ಯಕ್ಷ ರವಿಕಿರಣ್, ಡಾ.ಬಿ. ನರಸಿಂಹಮೂರ್ತಿ, ಪ್ರೊ. ರಂಗಸ್ವಾಮಿ, ಮರಿಸ್ವಾಮಿ ಇದ್ದರು.