ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬೇಡಿಕೆ ಈಡೇರಿಕೆಗಾಗಿ ಕಚೇರಿಗೆ ಬೀಗ ಜಡಿದು ವೈದ್ಯ ಸಿಬ್ಬಂದಿ ಪ್ರತಿಭಟನೆ

Rashmi Kasaragodu
Updated On : 7 Feb 2013, 12:06 pm





ರಾಮನಗರ:  ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳು ಮತ್ತು ನೌಕರರ ಹಿತರಕ್ಷಣಾ ಸಮಿತಿ ಸದಸ್ಯರು ಬುಧವಾರ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ಸರ್ಕಾರ ಹಿಂದಿನಿಂದಲೂ ಆರೋಗ್ಯ ಇಲಾಖೆ ಬಗ್ಗೆ ನಿರ್ಲಕ್ಷ್ಯ ಮನೋಭಾವ ತಾಳಿದೆ. ಇಲಾಖೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಮಾತ್ರ ನಮ್ಮ ಬೇಡಿಕೆಗಳ ಈಡೇರಿಕೆ ಸೂಕ್ತ ನಿರ್ಧಾರ ಕೈಗೊಂಡಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತಿರುವ ನೌಕರರು ಅನ್ಯ ಮಾರ್ಗವಿಲ್ಲದೆ ಪ್ರತಿಭಟನೆ ಹಾದಿ ತುಳಿದಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ.ರಾಜ್ಕುಮಾರ್ ತಿಳಿಸಿದರು.ಆರೋಗ್ಯ ಇಲಾಖೆ ಅಧೀನದಲ್ಲಿದ್ದ 10 ಜಿಲ್ಲಾಸ್ಪತ್ರೆಗಳನ್ನು ಸರ್ಕಾರ ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಿದೆ. ಮತ್ತೆ 7 ಜಿಲ್ಲಾಸ್ಪತ್ರೆಗಳನ್ನು ನೀಡಲು ಮುಂದಾಗಿದೆ. ಇದು ಇಡೀ ಇಲಾಖೆಯನ್ನೇ ಹಂತ ಹಂತವಾಗಿ ಖಾಸಗೀಕರಣಗೊಳಿಸುವ ಕುತಂತ್ರವಾಗಿದೆ. ಇದು ಇಲಾಖೆಯ ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ ಎಂದರು.
ಸರ್ಕಾರವು ಪ್ರತಿವರ್ಷ ಹೊಸ ಆಸ್ಪತ್ರೆಗಳಿಗೆ ಮಂಜೂರಾತಿ ನೀಡುತ್ತಿದೆ. 100 ಹಾಸಿಗೆಗಳುಳ್ಳ ಆಸ್ಪತ್ರೆಗಳನ್ನು 200 ಹಾಸಿಗೆಗಳಾಗಿ ಮೇಲ್ದರ್ಜೆಗೆ ಏರಿಸುವ ಸರ್ಕಾರ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಳ ಮಾಡಿಲ್ಲ. ಇದರಿಂದ ಸೀಮಿತ ಸಂಖ್ಯೆಯಲ್ಲಿರುವ ಸಿಬ್ಬಂದಿಗಳೇ ಹೆಚ್ಚು ರೋಗಿಗಳಿಗೆ ಆರೈಕೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ ಎಂದು ತಿಳಿಸಿದರು.ಸಿಬ್ಬಂದಿ ಹೆಚ್ಚಳವೂ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಶೀಘ್ರವಾಗಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಒಂದು ವೇಳೆ ಫೆ.8ರೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಸೇವೆಯನ್ನು ನಿಲ್ಲಿಸಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಡಾ.ರಾಜ್ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಎಚ್.ಪಿ. ಜಯರಾಂ, ಉಪಾಧ್ಯಕ್ಷ ರೇಣುಕಾಸ್ವಾಮಿ, ಪದಾಧಿಕಾರಿಗಳಾದ ಗುತ್ತಲಯ್ಯ, ಡಾ.ರಾಕೇಶ್, ಶಿವಕುಮಾರ್, ಮುನಿಆಂಜನಪ್ಪ, ಟಿ.ಕೆ.ಆಂಜನಪ್ಪ, ಚಂದ್ರಶೇಖರ್, ಕೋಕಿಲಾ, ಮಹೇಶ್, ಶಿವಕೆಂಪೇಗೌಡ, ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement