ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸೋಲೂರು ಹೊಲಗದ್ದೆಗಳಿಗೆ ರಾಸಾಯನಿಕ ನೀರು!

Rashmi Kasaragodu
Updated On : 7 Feb 2013, 12:04 pm




ಮಾಗಡಿ:  ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಸೋಲೂರು ಬಳಿ ಸ್ಥಾಪನೆಯಾಗಿರುವ ಮದ್ಯ ತಯಾರಿಕಾ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯಗಳು ಅಕ್ಕಪಕ್ಕದ ಹೊಲಗದ್ದೆ, ತೋಟಗಳಲ್ಲಿ ಶೇಖರಣೆಯಾಗಿ ಭೂಮಿ ಬರಡಾಗುತ್ತಿದೆ. ಬೆಳೆ ತೆಗೆಯಲಾರದ ಸ್ಥಿತಿಯಲ್ಲಿ ರೈತರು ಕಂಗಾಲಾಗಿದ್ದಾರೆ.
ಕಳೆದ ಆರು ವರ್ಷಗಳ ಹಿಂದೆ ಆಂಧ್ರ ಮೂಲಕ ಯುನಿಸ್ಟಿಲ್ ಆಲ್ಕೋ ಬ್ಲೆಂಡ್ ಪ್ರೈ. ಲಿ. ಹೆಸರಿನ ಕಾರ್ಖಾನೆಯನ್ನು ತೆರೆಯಲಾಗಿದೆ. ಈ ಕಾರ್ಖಾನೆಯಲ್ಲಿ ಜೈಮುನಿ ಡಿಸ್ಟಲರಿ ಹೆಸರಿನ ಮದ್ಯ ತಯಾರಿಸಲಾಗುತ್ತಿದೆ.  ಕಾರ್ಖಾನೆಯಿಂದ ಹೊರ ಹರಿದು ಬರುವ ರಾಸಾಯನಿಕ ತ್ಯಾಜಗಳ ನೀರು ಅಕ್ಕಪಕ್ಕದ ರೈತರ ಹೊಲಗದ್ದೆ, ತೋಟಗಳಿಗೆ ಹರಿದು ಬೆಳೆದ ಬೆಳೆ, ತೋಟಗಾರಿಕೆ ಫಸಲು ನಾಶವಾಗಿದೆ.
ಅಳಲು:  6 ವರ್ಷಗಳಿಂದಲೂ ನಿರಂತರವಾಗಿ ಕಾರ್ಖಾನೆ ರಾಸಾಯನಿಕ ತ್ಯಾಜ್ಯ ಹರಿದ ಪರಿಣಾಮ ರೈತರ ಭೂಮಿ ಫಲವತ್ತತೆ ಕ್ಷೀಣಿಸಿದೆ. ಬೆಳೆಗಳನ್ನು ಕಳೆದುಕೊಂಡ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸುಮಾರು 1300ಕ್ಕೂ ಹೆಚ್ಚು ಅಡಿಕೆ ಮರ, 150ಕ್ಕೂ ಹೆಚ್ಚು ತೆಂಗಿನ ಮರ, ಹೂತೋಟ, ತರಕಾರಿ ತೋಟ ಸಂಪೂರ್ಣ ನಾಶವಾಗಿದೆ. ಭೂಮಿಯಲ್ಲಿ ಇಂಗದೆ ನಿಂತಿರುವ ಕಲುಷಿತ ನೀರು ಇರುವ 3 ಕೊಳವೆಬಾವಿಗಳಲ್ಲಿ ಶೇಖರಣೆಯಾಗುತ್ತಿದೆ.  ಈ ನೀರಿನ ಬಳಕೆಯಿಂದ ಮನೆ ಮಂದಿಯಲ್ಲ ಅನಾರೋಗ್ಯಕ್ಕೆ ಒಳಗಾಗುವಂತಾಗಿದೆ. ಲಕ್ಷಾಂತರ ರು. ಖರ್ಚು ಮಾಡಿದರೂ ಆರೋಗ್ಯ ಸುಧಾರಣೆ ಕಂಡಿಲ್ಲ ಎಂದು ಜಯಮ್ಮ, ಸಿದ್ದಪ್ಪ ಅವರ ಅಳಲು.
ಜಯಮ್ಮ, ಸಿದ್ದಪ್ಪ ಅವರು ರಾಷ್ಟ್ರೀಯ ಹೆದ್ದಾರಿ 48ರ ಸೋಲೂರಿನಲ್ಲಿ ಸುಮಾರು 3.19  ಎಕ್ಕರೆ ಜಮೀನು ಹೊಂದಿದ್ದು, ಜಮೀನಿನಲ್ಲಿ  ಅಡಿಕೆ, ತೆಂಗು, ಹೂ, ತರಕಾರಿ ಬೆಳೆಯುತ್ತಿದ್ದಾರೆ. ಆದರೆ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯಗಳು ಹೊಲಗದ್ದೆ ತೋಟಗಳಲ್ಲಿ ಶೇಖರಣೆಯಾದ ಪರಿಣಾಮ ಬೆಳೆ, ತೆಗೆಯಲಾರದಂತಹ ಪರಿಸ್ಥಿತಿ ಎದುರಿಸುತ್ತಿದ್ದೇವೆ ಎಂದು ಮನದಾಳದ ನೋವನ್ನು ತೋಡಿಕೊಂಡರು. ಈ ಸಂಬಂಧ ಕಾರ್ಖಾನೆಯ ಮ್ಯಾನೇಜರ್ ಅವರಿಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ ಎಂದು ಜಯಮ್ಮ, ಸಿದ್ದಪ್ಪ ದೂರುತ್ತಾರೆ.
ಒತ್ತಾಯ:  ಸೋಲೂರು ಬಳಿ ಇರುವ ಯುನಿಸ್ಟಿಲ್ ಆಲ್ಕೋ ಬ್ಲೆಂಡ್ ಪ್ರೈ.ಲಿ. ಕಾರ್ಖಾನೆಯವರು ರಾಸಾಯನಿಕ ತ್ಯಾಜ್ಯಗಳನ್ನು ಅಕ್ಕಪಕ್ಕದ ರೈತರ ಹೊಲಗದ್ದೆ ತೋಟಗಳಿಗೆ ಹರಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ತಾಲೂಕು ರೈತ ಸಂಘಟನೆಗಳ ಹೋರಾಟ ಸಮಿತಿ ಒತ್ತಾಯಿಸಿದೆ.
ಇಲ್ಲದಿದ್ದರೆ ಕಾರ್ಖಾನೆ ಮುಂದೆ ಬೃಹತ್ ಪ್ರತಿಭಟನಾ ಧರಣೆ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಕಾರ್ಯದರ್ಶಿ ರಮೇಶ್ ಹಾಗು ರೈತ ಸಂಘಟನೆ ಹೋರಾಟ ಸಮಿತಿ ಅಧ್ಯಕ್ಷ ಎನ್.ಗಂಗರಾಜು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement