ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಕಾವೇರಿ ನೀರು ಕಸಿದ ಕರುಣಾನಿಧಿ, ಜಯಲಲಿತಾ

Mainashree
Updated On : 8 Feb 2013, 12:37 pm

ರಾಮನಗರ:  ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಅಧಿಸೂಚನೆ ಹೊರಡಿಸುವುದನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಾರ್ಯಕರ್ತರು ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಖಾಲಿ ಕೊಡಗಳ ಪ್ರದರ್ಶನದೊಂದಿಗೆ ತಮಟೆ ಚಳವಳಿ ನಡೆಸಿದರು.
ಬೆಂಗಳೂರಿನಿಂದ ಬಂದಿಳಿದ ಪ್ರತಿಭಟನಾಕಾರರು ನಗರದ ಐಜೂರು ವೃತ್ತದಲ್ಲಿ ಕೆಲ ಕಾಲ ಪ್ರತಿಭಟಿಸಿದರು. ರಾಜ್ಯ, ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಅಧಿಸೂಚನೆ ಹೊರಡಿಸಿದ್ದೇ ಆದಲ್ಲಿ ಕರ್ನಾಟಕ ಬಂದ್ ಮಾಡಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಯಿತು.
ತ.ನಾಡು ಮುಷ್ಠಿಯಲ್ಲಿ ಕೇಂದ್ರ ಸರ್ಕಾರ: ಕೇಂದ್ರ ಸರ್ಕಾರವು ತಮಿಳುನಾಡಿನ ಮುಷ್ಠಿಗೆ ಸಿಲುಕಿದ್ದು, ಕಾವೇರಿ ವಿಷಯದಲ್ಲಿ ಪ್ರಾರಂಭದಿಂದಲೂ ಕರ್ನಾಟಕಕ್ಕೆ ಅನ್ಯಾಯ ಎಸುಗುತ್ತಾ ಬಂದಿದೆ. ಕರುಣಾನಿಧಿ ಮತ್ತು ಜಯಲಲಿತಾ ಒಬ್ಬರ ಬಳಿಕ ಮತ್ತೊಬ್ಬರು ಕರ್ನಾಟಕದ ಪಾಲಿನ ನೀರು ಕಸಿದುಕೊಂಡು, ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಲೇ ಬಂದಿದ್ದಾರೆ ಎಂದು ವಾಟಾಳ್ ನಾಗರಾಜ್ ಆರೋಪಿಸಿದರು.
ವಿ.ಸಿ.ಸಿಂಗ್ ಪ್ರಧಾನಿ ಆಗಿದ್ದಾಗ ಕರುಣಾನಿಧಿ ಒತ್ತಡಕ್ಕೆ ಮಣಿದು ಕಾವೇರಿ ನ್ಯಾಯ ಮಂಡಳಿ ಅಸ್ತಿತ್ವಕ್ಕೆ ತಂದರು.  ತಮಿಳುನಾಡಿನ ಒತ್ತಡಕ್ಕೆ ಮಣಿಯುವ ಕೇಂದ್ರ ಸರ್ಕಾರವು ಕರ್ನಾಟಕವನ್ನು ಒಕ್ಕೂಟ ವ್ಯವಸ್ಥೆಯಲ್ಲಿರುವ ಒಂದು ರಾಜ್ಯ ಎನ್ನುವುದನ್ನೇ ಮರೆತಿದೆ. ಇದಕ್ಕೆ ನಮ್ಮ ಸಂಸದರ ವೈಫಲ್ಯವೇ ಕಾರಣ ಎಂದು ಟೀಕಿಸಿದರು.
ಸಂಸದರ ವಿರುದ್ಧ ಪ್ರಹಾರ:  ನಮ್ಮ ಸಂಸದರು ಗಂಡಸರೂ ಅಲ್ಲ, ಹೆಂಗಸರೂ ಅಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ.  ಒಂದೂ ದಿನವೂ ಇವರು ಕಾವೇರಿ ವಿಚಾರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಲಿಲ್ಲ, ಪ್ರಧಾನ ಮಂತ್ರಿಗಳ ಮನೆ ಮುಂದೆ ಪ್ರತಿಭಟಿಸಲಿಲ್ಲ. ಕೇವಲ ಪೊಳ್ಳು ರಾಜಕೀಯ ಮಾಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ ಎಂದು ವಾಟಾಳ್ ನಾಗರಾಜ್ ಟೀಕಾ ಪ್ರಹಾರ ನಡೆಸಿದರು.
ಕರ್ನಾಟಕದ ಶಾಸನ ಸಭೆಯಲ್ಲಿ ಕೆಲಸಕ್ಕೆ ಬಾರದ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಕಾಲ ವ್ಯರ್ಥ ಮಾಡುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳುವಲ್ಲಿ ಉಭಯ ಸದನಗಳು ವಿಫಲವಾಗಿವೆ. ಬಂಗಾರಪ್ಪ ಹೊರತುಪಡಿಸಿ ಉಳಿದೆಲ್ಲರೂ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಆದ್ಯತೆ ನೀಡಿದರೇ ಹೊರತು ರಾಜ್ಯದ ಹಿತ ಕಾಯಲಿಲ್ಲ ಎಂದು ಆರೋಪಿಸಿದರು.
ದಿಟ್ಟ ತೀರ್ಮಾನ ಅಗತ್ಯ:  ಬೆಂಗಳೂರು ಸೇರಿದಂತೆ ಕಾವೇರಿ ಆಶ್ರಿತ ಪ್ರದೇಶಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕೆನ್ನುವ ಆದೇಶ ಅವೈಜ್‌ಞಾನಿಕ. ನೀರು ಬಿಡುಗಡೆ ಮಾಡದಿರುವ ಬಗ್ಗೆ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ತಳೆಯಬೇಕು ಎಂದು ಅವರು ಆಗ್ರಹಿಸಿದರು.
9ಕ್ಕೆ ಪ್ರಮುಖ ಸಭೆ:  ಕಾವೇರಿ ವಿಚಾರವಾಗಿ ಮುಂದಿನ ಹೋರಾಟ ರೂಪಿಸುವ ನಿಟ್ಟಿನಲ್ಲಿ ಫೆ.9ರಂದು ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳ ಮಹತ್ವದ ಸಭೆ ನಡೆಯಲಿದೆ. ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದು, ರೈಲು ಸಂಚಾರ ಬಂದ್ ಮಾಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಾಟಾಳ್ ನಾಗರಾಜು ಹೇಳಿದರು.
ಪ್ರತಿಭಟನೆಯಲ್ಲಿ ಗೋಪಿ, ಪಾರ್ಥಸಾರಥಿ, ತೇಜಸ್ ಗೌಡ, ಖಾಸಿಂ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement