ಕೃಷಿ ಯಂತ್ರ ಖರೀದಿಗೆ ಅರ್ಜಿ (ಸುದ್ದಿ ಸಂಕ್ಷೇಪ)
ಚನ್ನಪಟ್ಟಣ: ಕೃಷಿ ಯಾಂತ್ರೀಕರಣ ಲಘು ನೀರಾವರಿ ಯೋಜನೆಯಲ್ಲಿ ಸಹಾಯಧನದ ಮೂಲಕ ಕೃಷಿ ಯಂತ್ರಗಳ ಖರೀದಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಪವರ್ ಟಿಲ್ಲರ್, ಡೀಸೆಲ್ ಪಂಪ್ಸೆಟ್, ಕಲ್ಟಿವೇಟರ್, ಬ್ಯಾಟರಿ ಆಪರೇಟರ್ ಪ್ಲೇಯರ್ಗಳ ಖರೀದಿಗೆ ಇಲಾಖೆಯಿಂದ ಶೇ.50ರ ರಿಯಾಯಿತಿ ದರದಲ್ಲಿ ಖರೀದಿಸಬಹುದಾದೆ. ಹಾಗೆಯೇ ವಿಶೇಷ ಘಟಕ ಯೋಜನೆಯಡಿಯಲ್ಲಿ 15ಹೆಕ್ಟೇರ್ ಪ್ರದೇಶಕ್ಕೆ ತುಂತುರು ನೀರಾವರಿ ಘಟಕಗಳನ್ನು ಖರೀದಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ರೈತರಿಂದ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳು ಹಾಗೂ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.
'ಅಧಿಸೂಚನೆ ಮರಣ ಶಾಸನ'
ಚನ್ನಪಟ್ಟಣ: ರಾಜ್ಯದ ಪಾಲಿಗೆ ಮರಣ ಶಾಸನವಾಗಿರುವ ಕಾವೇರಿ ಅಂತಿಮ ತೀರ್ಪಿನ ಅಧಿಸೂಚನೆ ಹೊರಡಿಸದಂತೆ ಆಗ್ರಹಿಸಿ ಕರ್ನಾಟಕ ಜನಪರ ವೇದಿಕೆ ಹಮ್ಮಿಕೊಂಡಿರುವ ಎರಡು ದಿನಗಳ ಜನಾಂದೋಲನ ಗುರುವಾರ ಪಟ್ಟಣ ಪ್ರವೇಶಿಸಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಂದೋಲನ ಉದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ರಮೇಶ್ ಗೌಡ, ಅಧಿಸೂಚನೆ ಹೊರ ಬಿದ್ದಿದ್ದೇ ಆದಲ್ಲಿ ಕನ್ನಡಿಗರಿಗೆ ಹನಿ ನೀರೂ ದೊರಕದಂತಾಗುತ್ತದೆ ಎಂದು ಆತಂಕ ವ್ಯಕ್ತ ಪಡಿಸಿದರು. ಜನಾಂದೋಲನದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಮಂಗಳಮ್ಮ, ಉಪಾಧ್ಯಕ್ಷ ಸಿ.ಕೆ.ಎಂ. ಗೌಡ, ಯುವ ಘಟಕದ ಅಧ್ಯಕ್ಷ ನಿಲೇಶ್ ಗೌಡ, ಸಂಘಟನಾ ಕಾರ್ಯದರ್ಶಿ ದಿನೇಶ್, ಮಲ್ಲೇಶ್, ಲಕ್ಷ್ಮಮ್ಮ, ತಾಲೂಕು ಅಧ್ಯಕ್ಷ ಬೇವೂರು ಯೋಗೇಶ್ ಮುಂತಾದವರು ಉಪಸ್ಥಿತರಿದ್ದರು.
ಬಾಲಕಿ ಅತ್ಯಾಚಾರ ಆರೋಪಿ ಬಂಧನ
ಹೊಸಕೋಟೆ: ಪಟ್ಟಣದ ಕಮ್ಮವಾರಿಪೇಟೆಯ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅರಳೇಪೇಟೆಯ ಆರೋಪಿ ವೇಣುಗೋಪಾಲ (27) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮುಸ್ಲಿಂ ಸಮುದಾಯದ 17 ವರ್ಷದ ಬಾಲಕಿಯನ್ನು ಅಪಹರಿಸಿ ವಿವಾಹವಾಗುವುದಾಗಿ ನಂಬಿಸಿ ಚೆನೈಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಜ.18ರಂದು ತಮ್ಮ ಮಗಳು ಕಾಣೆಯಾಗಿರುವ ಹಾಗೂ ವೇಣುಗೋಪಾಲ ಅಪಹರಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಬಾಲಕಿ ತಂದೆ ಮೊಹಮದ್ ಷಫಿಉಲ್ಲಾ ಪೊಲೀಸರಿಗೆ ದೂರ ನೀಡಿದ್ದರು. ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಚೆನೈನ ಹೊಟೇಲೊಂದರಲ್ಲಿ ಪತ್ತೆಹಚ್ಚಿದ್ದಾರೆ. ಬಾಲಕಿ ಸಹ ಪೊಲೀಸರಿಗೆ ದೂರು ನೀಡಿದ್ದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.