ಮತದಾರ ಪಟ್ಟಿ ಅಕ್ರಮ ಜೆಡಿಎಸ್ನಿಂದ ಪತ್ತೆ: ಸಿಂಧ್ಯಾ
ಕನಕಪುರ: ಕನಕಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಒಬ್ಬರೇ ಮತದಾರರು ಬೇರೆ ಬೇರೆ ವಿಳಾಸಗಳಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವುದು ಗಮನಕ್ಕೆ ಬಂದಿದೆ. ಇಂಥ ಸಾವಿರಾರು ಪ್ರಕರಣಗಳನ್ನು ಜಾತ್ಯತೀತ ಜನತಾದಳ ಕಾರ್ಯಕರ್ತರು ಪತ್ತೆಹಚ್ಚಿದ್ದಾರೆ. ಅವುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಕೋರಿ ತಹಸೀಲ್ದಾರರಿಗೆ ಹಾಗೂ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ.
ನಗರದ ಕೆಂಕೇರಮ್ಮ ಬಡಾವಣೆ ವ್ಯಾಪ್ತಿಯಲ್ಲಿ ಪಾದಯಾತ್ರೆ ಮೂಲಕ ಜನಸಂಪರ್ಕ ಸಭೆ ನಡೆಸಿ ಮಾತನಾಡಿದ ಅವರು, ಜೆಡಿಎಸ್ ಮುಖಂಡರಾದ ಬಿ.ನಾಗರಾಜು, ಪುಟ್ಟರಾಜು, ಸಿದ್ಧಮರಿ ಗೌಡ,ಬಿ.ಎಸ್.ಗೌಡ, ಸ್ಟುಡಿಯೋ ಚಂದ್ರು, ಹಲಗಪ್ಪ ಮೊದಲಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕನಕಪುರ ಕ್ಷೇತ್ರದ ಮತಪಟ್ಟಿಯಿಂದ ನಾಲ್ಕುಸಾವಿರ ಹೆಸರುಗಳನ್ನು ತೆಗೆದುಹಾಕಲು ತಾವು ಒತ್ತಾಯಿಸಿಲ್ಲ. ಮತಪಟ್ಟಿಯಲ್ಲಿನ ದೋಷಗಳನ್ನು ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ಒತ್ತಾಯಿಸಿದ್ದೇನೆ. ಒಬ್ಬರೇ ವ್ಯಕ್ತಿ ಮೂರ್ನಾಲ್ಕು ಕಡೆಗಳಲ್ಲಿ ಮತ ಚಲಾಯಿಸುವುದು ಸರಿಯೇ ಎಂದು ಸಿಂಧ್ಯಾ ಪ್ರಶ್ನಿಸಿದರು.
ಶಾಸಕ ಡಿ.ಕೆ. ಶಿವಕುಮಾರ್ ತಮ್ಮ ವಿರುದ್ಧವಾಗಿ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ರಾಜ್ಯ ಚುನಾವಣಾಧಿಕಾರಿ ಮೇಲೆ ಒತ್ತಡ ಹೇರಿದ್ದೇನೆಂದು ದೂರಿರುವುದು ಸತ್ಯಕ್ಕೆ ದೂರವಾದ ಸಂಗತಿ. ಅಂತೆಯೇ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆಂದು ಎಲ್ಲಿಯೂ ಹೇಳಿಲ್ಲ. ತಮ್ಮ ವಿರುದ್ಧ ಅಪಪ್ರಚಾರ ನಡೆಸಲು ಹಾಗೂ ಜನರನ್ನು ದಾರಿ ತಪ್ಪಿಸಲು ಅವರು ಹೂಡಿರುವ ಕುತಂತ್ರವಾಗಿದೆ ಎಂದು ಸಿಂಧ್ಯಾ ಸ್ಪಷ್ಟೀಕರಣ ನೀಡಿದರು.
ಬಿಜೆಪಿ ಸರ್ಕಾರಕ್ಕೆ ಬಜೆಟ್ ಅಧಿವೇಶನ ನಡೆಸುವ ನೈತಿಕ ಹಕ್ಕಿಲ್ಲ. ಸಮಯವನ್ನು ವ್ಯರ್ಥ ಮಾಡುವ ಅಧಿವೇಶನದಲ್ಲಿ ರಾಜ್ಯಪಾಲರೂ ಮಾತನಾಡಲು ಹೊರಡುವುದು ವಿಪರ್ಯಾಸ. ಆಂತರಿಕ ಕಚ್ಚಾಟದಲ್ಲಿಯೇ ತೊಡಗಿ ಅಭಿವೃದ್ಧಿಯನ್ನೇ ಮೂಲೆಗುಂಪು ಮಾಡಿರುವುದೇ ಬಿಜೆಪಿ ಸಾಧನೆ ಎಂದು ಸಿಂಧ್ಯಾ ಟೀಕಿಸಿದರು.
ಕೆಜೆಪಿ ರಾಜ್ಯಾಧ್ಯಕ್ಷ ಎಡೆಯೂರಪ್ಪ ಹೇಳಿಕೆಗಳನ್ನು ನೀಡುತ್ತಾ, ಬಿಜೆಪಿ ಸರ್ಕಾರ ಉರುಳಿದರೆ 60 ಮಂದಿ ಶಾಸಕರು ಕೆಜೆಪಿ ಸೇರಲಿದ್ದಾರೆ ಎಂದು ಹೇಳುತ್ತಿದ್ದರೂ ಹೆಸರುಗಳನ್ನು ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದ ಸಿಂಧ್ಯಾ, ಎಡೆಯೂರಪ್ಪ ಅವರು ತಮ್ಮ ಸಂಖ್ಯಾಬಲ ಪ್ರದರ್ಶಿಸಿ ವಿಧಾನಸಭೆ ವಿಸರ್ಜಿಸಲು ಕಾರಣರಾಗಿ ಮತ್ತೆ ಜನಾದೇಶ ಪಡೆಯುವುದೇ ಸೂಕ್ತ,ಎಂದು ಹೇಳಿದರು.