ಜಗತ್ತನ್ನೇ ಒಂದಾಗಿಸುವ ಶಕ್ತಿ ಜಾನಪದ ತಾಕತ್ತು
ರಾಮನಗರ: ಜಾನಪದ ಕಲೆಗಳಿಗೆ ಜಗತ್ತನ್ನೇ ಒಂದುಗೂಡಿಸುವ ಶಕ್ತಿಯಿದೆ. ಆದರೆ, ಆಧುನಿಕತೆ ಮತ್ತು ನಗರೀಕರಣದ ಹಾವಳಿಗೆ ಸಿಲುಕಿ ನಶಿಸುತ್ತಿರುವ ಜಾನಪದ ಕಲೆ, ಸಂಸ್ಕೃತಿಯ ಉಳಿವಿಗೆ ಹೋರಾಟ ನಡೆಸಬೇಕಿದೆ ಎಂದು ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಹೊರವಲಯದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ಶುಕ್ರವಾರ ನಡೆದ ಮೂರು ದಿನಗಳ ಜಾನಪದ ಲೋಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಾನಪದ ಕಲೆ ಮತ್ತು ಸಂಸ್ಕೃತಿಯ ವಿನಾಶದ ಭೀತಿ ಭಾರತವನ್ನಷ್ಟೇ ಅಲ್ಲದೆ, ನಾನಾ ದೇಶಗಳನ್ನು ಕಾಡುತ್ತಿದೆ ಎಂದರು.
ಜಗತ್ತಿನ ಹಲವಾರು ದೇಶಗಳು ತನ್ನದೇ ಆದ ಜಾನಪದ ಕಲೆ ಮತ್ತು ಸಂಸ್ಕೃತಿ ಹೊಂದಿವೆ. ಅಲ್ಲೂ ಆಧುನಿಕತೆ, ನಗರೀಕರಣದ ವೇಗದಿಂದ ಜಾನಪದಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಮೂಲ ಜಾನಪದವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಿರೂಪ ಮಾಡಬೇಡಿ: ತಮಟೆ ಸೇರಿದಂತೆ ಜಾನಪದ ವಾದನ ಪರಿಕರಗಳ ಮೂಲ ಸ್ವರೂಪವನ್ನೇ ಈಗ ಬದಲಿಸಲಾಗಿದೆ. ವಾದನಗಳಿಗೆ ಅಳವಡಿಸುತ್ತಿದ್ದ ಚರ್ಮದ ಬದಲು ಫೈಬರ್ ಬಳಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಆ ವಾದನಗಳನ್ನು ವಿರೂಪಗೊಳಿಸಿ, ಜಾನಪದವನ್ನು ಹಾಳುಗೆಡವುದು ಬೇಡ ಎಂದು ಅವರು ಸಲಹೆ ನೀಡಿದರು.
ಜಾನಪದ ವಾದನಗಳಿಗೆ ಚರ್ಮ ಬಳಸಲು ಸರ್ಕಾರ ಅನುಮತಿ ಜತೆಗೆ ಅನುದಾನವನ್ನೂ ನೀಡಬೇಕು. ಈ ವಾದನಗಳ ಮೂಲ ಸ್ವರೂಪ ಹಾಗೆಯೇ ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು. ಇಲ್ಲವಾದಲ್ಲಿ ಜಾನಪದ ವಾದನಗಳು ಹೇಗಿದ್ದವು ಎನ್ನುವುದು ಮುಂದಿನ ಪೀಳಿಗೆಗೆ ತಿಳಿಯದಾಗುತ್ತದೆ ಎಂದರು.
ಜಾನಪದ ಕಲೆ, ಸಂಸ್ಕೃತಿಯನ್ನು ಉಳಿಸಬೇಕೆಂದು ಭಾಷಣ ಮಾಡುವುದರಿಂದ ಏನೇನೂ ಪ್ರಯೋಜನವಿಲ್ಲ. ಜಾನಪದ ಕಲಾವಿದರು, ಕಲೆಗಳ ಪ್ರದರ್ಶನಕ್ಕೆ ಸೂಕ್ತ ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಜಾನಪದದ ಉಳಿವು ತಾನಾಗಿಯೇ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
2 ಕೋಟಿ ನೀಡಲಿ: ಜಾನಪದ ವಾದ್ಯ ಪರಿಕರಗಳನ್ನು ಚರ್ಮದಿಂದಲೇ ತಯಾರಿಸಿ, ಕಲಾವಿದರಿಗೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಗೆ 2 ಕೋಟಿ ಅನುದಾನ ಬಿಡುಗಡೆ ಮಾಡಬೆಕೆಂದು ಅಕಾಡೆಮಿ ಅಧ್ಯಕ್ಷ ಡಾ.ಬಾನಂದೂರು ಕೆಂಪಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದರು.
ಕಲಾವಿದರಿಗೆ ಚರ್ಮವಾದ್ಯದ ಬಗ್ಗೆ ಕಾರ್ಯಗಾರ, ತರಬೇತಿ ನೀಡಬೇಕಿದೆ. ಜಾನಪದ ಕಲೆಯ ಉಳಿವಿಗಾಗಿ ಅಕಾಡೆಮಿಯು ಮಾಡದ ಅನೇಕ ಕೆಲಸಗಳನ್ನು ಕರ್ನಾಟಕ ಜಾನಪದ ಪರಿಷತ್ತು ಕೈಗೊಂಡಿದೆ. ಮೂಲ ಜಾನಪದ ಕಲಾವಿದರಿಗೆ ತರಬೇತಿಯನ್ನು ಪರಿಷತ್ತು ನೀಡುತ್ತಿದೆ. ನಗರ, ಪಟ್ಟಣಗಳ ಮಕ್ಕಳಿಗೆ ಜಾನಪದ ಕಲೆಗಳನ್ನು ಪರಿಚಯಿಸುವ ಪ್ರಯತ್ನವೂ ನಡೆದಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ಚರ್ಮವಾದ್ಯ, ಮಹಿಳಾ ಜಾನಪದ ಸಮ್ಮೇಳನ, ಮಕ್ಕಳ ಜಾನಪದ ಸಮ್ಮೇಳನ ಆಯೋಜಿಸಲು ಕರ್ನಾಟಕ ಜಾನಪದ ಅಕಾಡೆಮಿ ನಿರ್ಧರಿಸಿದೆ. ಜಾನಪದವನ್ನು ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಾರ್ವಜನಿಕರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ತಾರತಮ್ಯಕ್ಕೆ ಕಟುಟೀಕೆ: ಸಮ್ಮೇಳನ, ಸಭೆ, ಸಮಾರಂಭ, ಉತ್ಸವಗಳಲ್ಲಿ ಪಾಲ್ಗೊಳ್ಳುವ ಕಲಾವಿದರನ್ನು ಸರ್ಕಾರ, ಆಯೋಜಕರು ಸಮನಾಗಿ ಕಾಣುತ್ತಿಲ್ಲ. ಶಿಷ್ಟ ಕಲಾವಿದರಿಗೆ ಐಶಾರಾಮಿ ಆತಿಥ್ಯ ದೊರೆಯುತ್ತಿದ್ದರೆ, ಜಾನಪದ ಕಲಾವಿದರಿಗೆ ಛತ್ರ ಇಲ್ಲವೇ ಫುಟ್ಪಾತ್ ವಾಸವೇ ಗತಿ ಎನ್ನುವ ಸ್ಥಿತಿ ಇದೆ ಎಂದು ಲೋಕೋತ್ಸವ ಉದ್ಘಾಟಿಸಿ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕಟುವಾಗಿ ಟೀಕಿಸಿದರು.
ಶಿಷ್ಟ ಕಲಾವಿದರಿಗೆ ನೀಡುತ್ತಿರುವ ಸಂಭಾವನೆ ಕೂಡ ಭಾರಿ ಪ್ರಮಾಣದಲ್ಲಿರುತ್ತದೆ. ಅವರಿಗೆ ಲಕ್ಷಗಟ್ಟಲೆ ಸಂಭಾವನೆ ನೀಡುತ್ತಿದ್ದು, ಜಾನಪದ ಕಲಾವಿದರಿಗೆ ಕವಡೆ ಕಾಸಿನ ಗೌರವಧನ ಸಿಗುತ್ತಿದೆ. ಕಲಾವಿದರನ್ನು ಅಗೌರವದಿಂದ ಕಾಣುವುದು, ಅನಾಗರಿಕತೆಯ ವರ್ತನೆ. ಕಲೆಗೆ ಬೆಲೆ ಕೊಡಬೇಕೇ ಹೊರತು ವ್ಯಕ್ತಿಗಲ್ಲ ಎಂದು ಅವರು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪರಿಷತ್ತಿನ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ, ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್. ಠ್ಯಾಗೂರ್, ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಜಿ.ಪಂ. ಸಿಇಒ ಡಾ.ವೆಂಕಟೇಶ್ ಮಾತನಾಡಿದರು. ಎಸ್ಪಿ ಅನುಪಮ್ ಅಗ್ರವಾಲ್, ಜಿ.ಪಂ. ಉಪ ಕಾರ್ಯದರ್ಶಿ ಡಾ.ಸಿದ್ದರಾಮಯ್ಯ, ರಘುನಂದನ್ ಭಾಗವಹಿಸಿದ್ದರು. ವ.ನಂ. ಶಿವರಾಮ್ ನಿರೂಪಿಸಿದರು. ಡಾ.ರಾಜೇಗೌಡ ಹೊಸಹಳ್ಳಿ ವಂದಿಸಿದರು.