ಅಲೆಮಾರಿಗಳ ಅಭಿವೃದ್ಧಿಗೆ ಕನಿಷ್ಠ ಕಾಳಜಿ ಇಲ್ಲ
ರಾಮನಗರ: ಮಠಮಾನ್ಯಗಳಿಗೆ ಬಜೆಟ್ನಲ್ಲಿ ಕೋಟಿಗಟ್ಟಲೆ ಅನುದಾನ ಘೋಷಿಸುವ ಸರ್ಕಾರವು ಇಂದಿಗೂ ನಾಗರಿಕ ಸೌಲಭ್ಯಗಳಿಲ್ಲದೆ ಪರಿತಪಿಸುತ್ತಿರುವ ಅಲೆಮಾರಿಗಳ ಅಭಿವೃದ್ಧಿ, ಅವರ ಭಾಷೆ ಮತ್ತು ಕಲೆಗಳ ಉಳಿವಿಗೆ ಕನಿಷ್ಠ ಕಾಳಜಿ ವಹಿಸಿಲ್ಲ ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ವಿಷಾದಿಸಿದರು.
ನಗರದ ಜಾನಪದಲೋಕದಲ್ಲಿ ನಡೆಯುತ್ತಿರುವ ಮೂರು ದಿನಗಳ ಲೋಕೋತ್ಸವದಲ್ಲಿ ಶನಿವಾರ ಅಲೆಮಾರಿ ಜಾನಪದ ಕಲಾವಿದರ ಕುರಿತ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾನವ ಸಂಸ್ಕೃತಿಯ ಮೂಲವಾದ ಅಲೆಮಾರಿಗಳ ಸಂಸ್ಕೃತಿ, ಭಾಷೆ, ಕಲೆಗಳ ಉಳಿವು ಮತ್ತು ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮ ಅಗತ್ಯ ಎಂದರು.
ಮಾನವ ಸಂಸ್ಕೃತಿಯಲ್ಲಿ ನಿರಂತರ ಬದಲಾವಣೆಯನ್ನು ಕಾಣುತ್ತಿದ್ದೇವೆ. ನಮ್ಮ ಮೂಲ ಸಂಸ್ಕೃತಿಯನ್ನು ತಿಳಿಯಲು ಅಲೆಮಾರಿಗಳ ಸಂಸ್ಕೃತಿಯನ್ನು ಆಳವಾಗಿ ಅಭ್ಯಸಿಸಬೇಕು. ಅಲೆಮಾರಿಗಳು ಇಂದಿಗೂ ಗ್ರಾಮೀಣ ಸಂಸ್ಕೃತಿ, ನಗರೀಕರಣದ ಪ್ರಭಾವಕ್ಕೆ ಒಳಗಾಗದೆ ತಮ್ಮ ಮೂಲ ನೆಲೆಯಲ್ಲೇ ಬದುಕುತ್ತಿದ್ದಾರೆ. ಆ ಮೂಲಕ ತಮ್ಮತನವನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಸಹಸ್ರಾರು ವರ್ಷಗಳಿಂದ ಬೆಟ್ಟ-ಗುಡ್ಡ, ಕಾಡು-ಮೇಡು, ದ್ವೀಪ ಮೊದಲಾದ ಸ್ಥಳಗಳಲ್ಲಿ ನೆಲೆಸಿರುವ ಅಲೆಮಾರಿಗಳು ತಮ್ಮ ಆದಿ ದೈವ, ಮೂಲ ಪುರುಷರ ಪೂಜೆಯಲ್ಲಿ ತೊಡಗಿದ್ದಾರೆ. ಅವರದೇ ಆದ ಸಾಮಾಜಿಕ ಉಪಭಾಷೆ, ಮನರಂಜನೆಯ ಕಲೆಗಳು, ಕ್ರೀಡೆ ಮತ್ತಿತರೆ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ ಎಂದು ಬೋರಲಿಂಗಯ್ಯ ಹೇಳಿದರು.
ಸಮಸ್ಯೆ ಗುರುತಿಸಿಲ್ಲ: ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ ಮಾತನಾಡಿ ಅಲೆಮಾರಿ ಬುಡಕಟ್ಟುಗಳು ಮತ್ತು ಜನಪದ ಕಲೆಗಳ ಬಗ್ಗೆ ಪಿಎಚ್.ಡಿ. ಪದವಿಗಾಗಿ ನಡೆಯುತ್ತಿರುವ ಅಧ್ಯಯನಗಳಾಗುತ್ತಿವೆಯೆ ಹೊರತು ಇವರು ಪ್ರಸ್ತುತ ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸುತ್ತಿಲ್ಲ. ಕಲೆ ಉಳಿಯಬೇಕಾದರೆ ಅಲೆಮಾರಿ ಸಮುದಾಯಗಳ ಜೀವನ ಸುಧಾರಣೆಯಾಗಬೇಕಿದೆ. ಇರುವ ಅಕಾಡೆಮಿಗಳು ಅಲೆಮಾರಿಗಳ ಜೀವನಮಟ್ಟ ಸುಧಾರಿಸುವಂತಹ ಕೆಲಸವನ್ನು ಮಾಡುತ್ತಿಲ್ಲ. ಆದ್ದರಿಂದ ಪ್ರತ್ಯೇಕ ಅಲೆಮಾರಿ ಅಕಾಡೆಮಿಯ ಅವಶ್ಯಕತೆಯಿದೆ ಎಂದು ತಿಳಿಸಿದರು.
ನಿಕೃಷ್ಟವಾಗಿ ಕಾಣಬೇಡಿ: ಪ್ರಸ್ತುತ ದಿನಗಳಲ್ಲಿ ಕಲೆಗಳು ಮತ್ತು ಕಲಾವಿದರು ಕಳೆದು ಹೋಗುತ್ತಿದ್ದಾರೆ. ಅಬ್ಬರದ ಕಲೆಗಳಿಗೆ ಸಿಗುತ್ತಿರುವ ಪ್ರಾಶಸ್ತ್ಯ, ಪ್ರಾತಿನಿಧ್ಯವನ್ನು ಮೂಲ ಜಾನಪದ, ಅಲೆಮಾರಿ ಸಮುದಾಯದ ಕಲೆಗಳಿಗೆ ನೀಡಲಾಗುತ್ತಿಲ್ಲ. ದೃಶ್ಯ ಮಾಧ್ಯಮಗಳು ಅಲೆಮಾರಿ ಸಮುದಾಯದ ಕಲೆಗಳನ್ನು ನಿಕೃಷ್ಟವಾಗಿ ಕಾಣುತ್ತಿದ್ದು, ಅದನ್ನು ಮಾರಾಟದ ವಸ್ತುವನ್ನಾಗಿಸಿಕೊಂಡಿದ್ದಾರೆ ಎಂದು ಜಾನಪದ ಮಹಾವಿದ್ಯಾಲಯದ ನಿರ್ದೇಶಕ ಡಾ.ಹಿ.ಶಿ.ರಾಮಚಂದ್ರೇಗೌಡ ಹೇಳಿದರು.
ಜಾನಪದ ವಿದ್ವಾಂಸ ಡಾ.ಬಾಲಗುರುಮೂರ್ತಿ ಮಾತನಾಡಿ, ಜಾತ್ಯತೀತ ಮನೋಭಾವದ ಅಲೆಮಾರಿಗಳ ಬದುಕು ಮೌಖಿಕ ಪರಂಪರೆಯಿಂದ ಕೂಡಿದ್ದಾಗಿದೆ. ಅನುತ್ಪಾದಕ ವರ್ಗವಾದ ಸಮುದಾಯ ಅಸಂಘಟಿತವಾಗಿದೆ. ಸರ್ಕಾರವು ಅವರನ್ನು ಪರಿಶಿಷ್ಟ ಪಂಗಡವೆಂದು ಗುರ್ತಿಸಿ, ಆ ಸಮುದಾಯದ ನಿಯಮಗಳನ್ನು ಹೇರುತ್ತಿದೆ. ಇದರಿಂದ ಅಲೆಮಾರಿಗಳ ಕಸುಬುಗಳ ಮೇಲೆ ನಿರ್ಬಂಧ ಹೇರಿದಂತಾಗಿದೆ ಎಂದು ಟೀಕಿಸಿದರು.
ಅಂತರ ಕಡಿಮೆಯಾಗಲಿ: ಅಲೆಮಾರಿಗಳು ಮತ್ತು ಇತರೆ ಸಮುದಾಯದವರ ನಡುವಿನ ಅಂತರ ಕಡಿಮೆಯಾಗಬೇಕು. ಹೀಗಾದಾಗ ಅಲೆಮಾರಿಗಳ ಸೃಜನಾತ್ಮಕ ಕಲೆ ಮತ್ತು ಭಾಷೆಯ ಉಳು ಸಾಧ್ಯವಾಗುತ್ತದೆ. ಅಲೆಮಾರಿ ಸಮುದಾಯದ ಅಭ್ಯುದಯದ ಬಗ್ಗೆ ಸರ್ಕಾರ ಸೂಕ್ತ ಯೋಜನೆಗಳನ್ನು ರೂಪಿಸಬೇಕು. ನಾಗರಿಕ ಸೌಲಭ್ಯಗಳು ಅವರೆಲ್ಲರಿಗೂ ತಲುಪುವಂತಾಗಬೇಕು ಎಂದು ಸಾಹಿತಿ ದೇವನೂರು ಮಹಾದೇವ ಅಭಿಪ್ರಾಯಪಟ್ಟರು.
ಜಾನಪದ ವಿದ್ವಾಂಸ ಪ್ರಮೋದ್ ಶಿಗ್ಗಾಂವ್ ಮಾತನಾಡಿ, ಕಲೆಗಳ ಜತೆಗೆ ಕಲಾವಿದರನ್ನೂ ಉಳಿಸಿಕೊಳ್ಳಬೇಕಿದೆ. ಜಾನಪದ ಅಭ್ಯಸಿಸುವವರು ಓದುವುದರಲ್ಲೇ ನಿರತರಾಗಿರುತ್ತಾರೆಯೇ ಹೊರತು ಪ್ರಯೋಗಾತ್ಮಕವಾಗಿ ಅಧ್ಯಯನಕ್ಕೆ ಮುಂದಾಗುತ್ತಿಲ್ಲ. ಜಾನಪದ ಕಲೆ ಮತ್ತು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಪರಿಪೂರ್ಣವಾದ ಶಾಲೆ ಬೇಕಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ, ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ, ಸಾಹಿತಿ ಮೀರಸಾಬಹಳ್ಳಿ ಶಿವಣ್ಣ, ಜಾನಪದ ವಿದ್ವಾಂಸರಾದ ಡಾ.ವ.ನಂ.ಶಿವರಾಂ, ವಡ್ಡಗೆರೆ ನಾಗರಾಜಯ್ಯ, ಅಶೋಕ ವಾಟಗಾರ, ಡಾ.ಚಂದ್ರು ಕಾಳೇನಹಳ್ಳಿ, ಜಾನಪದ ಲೋಕದ ಕ್ಯುರೇಟರ್ ಡಾ.ಕುರುವ ಬಸವರಾಜ್, ಪಿ.ಎನ್.ಕೃಷ್ಣಮೂರ್ತಿ, ಕೃಷ್ಣಮೂರ್ತಿ ಕವತಾರ, ಗೊಡ್ಡಗೆರೆ ನಾಗರಾಜಯ್ಯ, ಶಿವಪ್ಪ, ಶೇಷಪ್ಪ ಮತ್ತಿತರರು ಭಾಗವಹಿಸಿದ್ದರು.