ಡಾಂಬರೀಕರಣ ಕಾಮಗಾರಿಗೆ ಚಾಲನೆ (ಸುದ್ದಿ ಸಂಕ್ಷೇಪ)
ರಾಮನಗರ: ತಾಲೂಕಿನ ನಾಗೋಹಳ್ಳಿಯಿಂದ ಸಿಂಗಸಂದ್ರವರೆಗೆ ರು.1.80 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ 4.5 ಕಿ.ಮೀ. ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಶಾಸಕ ಕೆ.ರಾಜು ಚಾಲನೆ ನೀಡಿದರು. ನಾಗೋಹಳ್ಳಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗುಣಮಟ್ಟ ಕಾಯ್ದುಕೊಳ್ಳುವ ಜತೆಗೆ ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ತಾಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಹದಗೆಟ್ಟ ರಸ್ತೆಗಳಿಂದ ಜನತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಅದು ತಮ್ಮ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದರು. ಮುಂಬರುವ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಮರಳವಾಡಿ ಮತ್ತು ಹಾರೋಹಳ್ಳಿ ಹೋಬಳಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ರಾಜು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಎಚ್.ಸಿ.ರಾಜು, ರಮೇಶ್, ಪುಟ್ಟಸ್ವಾಮಿ, ದೇವರಾಜು, ತಮ್ಮಣ್ಣ, ಗೋವಿಂದಯ್ಯ, ಪಾಂಡು ಮತ್ತಿತರರು ಭಾಗವಹಿಸಿದ್ದರು.
ಇಂದು ಗರುಡಸ್ವಾಮಿ ಜಯಂತ್ಯುತ್ಸವ
ಮಾಗಡಿ: ತಾಲೂಕಿನ ಪ್ರಸಿದ್ಧ ಸುಗ್ಗನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಗರುಡಸ್ವಾಮಿ ಜಯಂತ್ಯುತ್ಸವ ಫೆ.10 ರಂದು ಬೆಳಿಗ್ಗೆ 11 ಗಂಟೆಗೆ ನೆರವೇರಿಸಲಾಗುವುದು ಎಂದು ಮಾಜಿ ಧರ್ಮದರ್ಶಿ ಹಿರಿಯ ವಕೀಲ ಜಿ.ಪಾಪಣ್ಣ ತಿಳಿಸಿದ್ದಾರೆ. ಗುರುಡ ಜಯಂತಿ ಪ್ರಯುಕ್ತ ಗರುಡ ದೇವರಿಗೆ ಅಭಿಷೇಕ, ಅರ್ಚನೆ, ವಿಶೇಷ ಅಲಂಕಾರ, ಪೂಜೆ ಉತ್ಸವ ನಡೆಯಲಿದೆ. ಈಡೀ ರಾಜ್ಯದಲ್ಲೇ ಗರುಡ ಜಯಂತಿ ಆಚರಿಸುವುದು ತಾಲೂಕಿನ ಸುಗ್ಗನಹಳ್ಳಿಯಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಾತ್ರ ಎಂದು ಪಾಪಣ್ಣ ಜಯಂತ್ಯುತ್ಸವದ ಪೂಜಾ ವಿಧಿ ವಿಧಾನಗಳನ್ನು ತಿಳಿಸಿದರು.
ವೈದ್ಯರ ಮುಷ್ಕರ: ರೋಗಿಗಳ ಪರದಾಟ
ಸೂಲಿಬೆಲೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ವೈದ್ಯಾಧಿಕಾರಿಗಳ ನಡೆಸುತ್ತಿರುವ ಮುಷ್ಕರದಿಂದ ಸೂಲಿಬೆಲೆ ಸುತ್ತಮುತ್ತಲ್ಲಿನ ಬಡ ರೋಗಿಗಳು ಪರದಾಡುವಂತಾಗಿದೆ. ಸೂಲಿಬೆಲೆ ಸೇರಿದಂತೆ ಹೊಸಕೋಟೆ ತಾಲೂಕಿನ ಬಹುತೇಕ ಎಲ್ಲ ಸರ್ಕಾರಿ ಆಸ್ಟತ್ರೆಗಳಲ್ಲಿರುವ ವೈದ್ಯಾಧಿಕಾರಿಗಳು ಮುಷ್ಕರದಲ್ಲಿ ನಿರತವಾಗಿರುವ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಪರದಾಟಮಾಡುವಂತಾಗಿದೆ. ಮುಷ್ಕರ ನಿರತ ವೈದ್ಯರ ಬೇಡಿಕೆಗಳನ್ನು ಸರ್ಕಾರ ಈಡೇರಿಸಿ ರೋಗಿಗಳ ಸೇವೆಗೆ ವೈದ್ಯರನ್ನು ನಿಯೋಜನೆ ಮಾಡುವಂತೆ ಒತ್ತಾಯಿಸಿದ್ದಾರೆ.
ಪಾಣಿ ದಾಖಲೆ ದೊರೆಯದೆ ಪರದಾಟ
ಕನಕಪುರ: ಇಲ್ಲಿನ ತಾಲೂಕು ಕಚೇರಿಯಲ್ಲಿ ರೈತರಿಗೆ ಸಕಾಲಕ್ಕೆ ಪಾಣಿ ದಾಖಲೆಗಳು ದೊರೆಯದೆ ಪರದಾಡುವಂತಾಗಿದೆ. ಪ್ರತಿನಿತ್ಯ ನೂರಾರು ಮಂದಿ ತಾಲೂಕು ಕಚೇರಿ ಮುಂದೆ ಸರತಿಸಾಲಿನಲ್ಲಿ ನಿಂತು ಬಿಸಿಲಿನಲ್ಲಿ ಒದ್ದಾಡುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ತಾಲೂಕಿನ ಗ್ರಾಪಂ ಕಚೇರಿಗಳಲ್ಲಿ ಪಾಣಿಗಳನ್ನು ವಿತರಿಸುತ್ತಿಲ್ಲ, ನೆಮ್ಮದಿ ಕೇಂದ್ರಗಳು ಕೆಲಸ ಮಾಡುತ್ತಿಲ್ಲ, ಗ್ರಾಮೀಣ ರೈತರು ಪಟ್ಟಣಕ್ಕೆ ಆಗಮಿಸಿ ನಿತ್ಯವೂ ನೂರಾರು ರು. ಗಳನ್ನು ವ್ಯಯಿಸಿ ಪಾಣಿಗಳಿಗಾಗಿ ಕಾಯಬೇಕಾಗಿದೆ. ತಹಸೀಲ್ದಾರರ ಕಚೇರಿ ಪಕ್ಕದಲ್ಲಿಯೇ ಇರುವ ಪಾಣಿ ವಿತರಣಾ ಕೇಂದ್ರದ ಗೋಳನ್ನು ತಾಲೂಕು ಆಡಳಿತವೂ ನಿರ್ಲಕ್ಷಿಸಿದೆ. ಸರ್ಕಾರ ಉಪೇಕ್ಷೆ ತೋರದೆ ತಕ್ಷಣವೇ ಪಾಣಿ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.