ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪೋಷಕರ ಪಾತ್ರ ಮುಖ್ಯ: ಕನಕಕುಮಾರ್
ದೇವನಹಳ್ಳಿ: ಪ್ರತಿನಿತ್ಯ ಅಪರಾಧಕ್ಕೆ ಸಂಭಂಧಪಟ್ಟ ಪ್ರಕರಣಗಳನ್ನು ಮಾಧ್ಯಮಗಳಲ್ಲಿ ನೋಡುತ್ತಲೇ ಇದ್ದೀರಿ. ಆದರೆ, ಅಪರಾಧ ಮುಕ್ತ ಸಮಾಜ ನಿರ್ಮಾಣದಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆ ಎಂದು ದೇವನಹಳ್ಳಿ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಸಿ. ಕನಕಕುಮಾರ್ ಹೇಳಿದರು. ಇಲ್ಲಿನ ಕನ್ನಮಂಗಲ ಎಂವಿಎಂ ಶಾಲೆಯ ಚಿಣ್ಣರ ಹಬ್ಬ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಕೆ.ಶ್ರೀನಿವಾಸ್ ಮಾತನಾಡಿ, ಮಕ್ಕಳ ಮನಸನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಪೋಷಕರಿಗೆ ಬರಬೇಕು. ಇಂದಿನ ಆಧುನಿಕ ದಿನಗಳಲ್ಲಿ ತಂದೆ- ತಾಯಿಗಳಿಗೆ ತಮ್ಮ ಮಕ್ಕಳನ್ನು ಸಾಕುವ ಬಗ್ಗೆ ತರಬೇತಿ ಅಗತ್ಯ ಎಂದರು. ಶಾಸಕ ವೆಂಕಟಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟವಾಗಿದೆ. ಅಂತಹದರಲ್ಲೂ ಇಲ್ಲಿನ ವಿದ್ಯಾಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಅಭಿನಂದನೀಯ ಎಂದರು.