ಜಾನಪದ ಕಲೆ ಎಲ್ಲ ಸಂಸ್ಕೃತಿಗೂ ತಾಯಿ ಬೇರು
ರಾಮನಗರ: ನಶಿಸುತ್ತಿರುವ ಜಾನಪದ ಕಲೆಗಳನ್ನು ಉಳಿಸಲು ಹಗಲಿರುಳು ಶ್ರಮಿಸಿದ ಡಾ.ಎಚ್.ಎಲ್. ನಾಗೇಗೌಡ ಅವರ ಸ್ಮರಣಾರ್ಥ ಮೂಡಬಿದಿರೆಯಲ್ಲಿ ಸಭಾಂಗಣ ನಿರ್ಮಿಸಲಾಗುವುದು ಎಂದು ಜಾನಪದ ಸಂಘಟಕ ಡಾ.ಮೋಹನ್ ಆಳ್ವ ತಿಳಿಸಿದರು. ಜಾನಪದ ಲೋಕದಲ್ಲಿ ಕಳೆದ 3 ದಿನಗಳಿಂದ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ನಾಡೋಜ ಡಾ.ಜಿ.ನಾರಾಯಣ ಜಾನಪದ ಲೋಕಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಆಳ್ವಾಸ್ ಸಮ್ಮೇಳನದಲ್ಲಿ ಜಾನಪದ ಕಲೆಗಳಿಗೆ ಮತ್ತು ಸಾಹಿತ್ಯಕ್ಕೆ ಒತ್ತು ನೀಡಿದೆ. ಜಾನಪದ ಕಲೆ ವಿಚಾರವು ಮೂಲಬೇರು. ಇದು ಎಲ್ಲಾ ಸಂಸ್ಕೃತಿಗೂ ತಾಯಿಬೇರು ಇದ್ದಂತೆ. ಇದಕ್ಕೆ ತೊಂದರೆಯಾದಲ್ಲಿ ನಮ್ಮ ಇಡಿ ಸಂಸ್ಕೃತಿ ನಾಶವಾಗುವುದು ಎಂದು ತಿಳಿಸಿದರು. ಆಳ್ವಾಸ್ ಸಂಸ್ಕೃತಿ ಸಮ್ಮೇಳನಕ್ಕೆ ರು.15 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಇದರಲ್ಲಿ ರು.3-4 ಕೋಟಿ ಹಣವನ್ನು ಜಾನಪದ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಮೀಸಲಿರಿಸಲಾಗಿದೆ. ಜಾನಪದ ಕಲೆ ಮತ್ತು ಸಾಹಿತ್ಯ ಸಂರಕ್ಷಿಸುವ ವಿಚಾರದಲ್ಲಿ ಸರ್ಕಾರ ಮಾತ್ರವಲ್ಲದೆ ಸಮಾಜದ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.ಆಶಾಭಾವನೆ: ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮಾತನಾಡಿ, ಕಲಾವಿದರ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಮುಜರಾಯಿ ದೇವಸ್ಥಾನಗಳಲ್ಲಿ ಸ್ಥಳೀಯ ಕಲಾವಿದರಿಗೆ ತಿಂಗಳಿಗೆ ಒಂದರಂತೆ ಕಾರ್ಯಕ್ರಮ ನೀಡಬೇಕು. ಈ ಸಂಬಂಧ ಮುಜರಾಯಿ ಸಚಿವರ ಗಮನ ಸೆಳೆಯಲು ಪತ್ರ ಬರೆಯಲಾಗಿದೆ. ಸರ್ಕಾರವು ಸೂಕ್ತ ಕ್ರಮಕೈಗೊಳ್ಳುವ ಆಶಾಭಾವನೆ ಹೊಂದಿರುವುದಾಗಿ ಅವರು ತಿಳಿಸಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಮಾತನಾಡಿ ಜಾನಪದ ಕಲೆಗೆ ಪ್ರೋತ್ಸಾಹ ಕಡಿಮೆಯಾಗಿದ್ದು, ಪತ್ರಿಕೆಗಳಲ್ಲಿ ಈ ವಿಷಯಕ್ಕೆ ಪ್ರಮುಖ ಆದ್ಯತೆ ನೀಡುತ್ತಿಲ್ಲ. ಜಾನಪದ ವಿಶ್ವವಿದ್ಯಾಲಯ ಜಾನಪದ ಪರಿಷತ್ತು ಇವುಗಳ ಸಹಯೋಗದಲ್ಲಿ ಯುವ ಪತ್ರಕರ್ತರಿಗೆ ಜಾನಪದ ಲೋಕದಲ್ಲಿ ಮುಂದಿನ ತಿಂಗಳು ಕಾರ್ಯಾಗಾರವನ್ನು ಏರ್ಪಡಿಸಿ, ಜಾನಪದ ಕಲೆಗಳ ಮಹತ್ವ ತಿಳಿಸಲಾಗುವುದು ಎಂದ ಅವರು ಜಾನಪದ ವಿಶ್ವವಿದ್ಯಾಲಯಕ್ಕೆ ಡಾ.ಎಚ್.ಎಲ್. ನಾಗೇಗೌಡರ ಹೆಸರಿಡಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.ನಗರಗಳಿಂದ ಮಾಯ: ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಮಾತನಾಡಿ ಸುಮಾರು 40 ವರ್ಷಗಳ ಹಿಂದೆಯೆ ಜಾನಪದ ಕಲೆಯ ಸೊಗಡು ನಗರಗಳಿಂದ ಮಾಯವಾಗಿದೆ. ಇಂದು ಯಾವುದೇ ಶುಭ ಸಮಾರಂಭಗಳಿಗೆ ಹೋದರೂ ಕೇವಲ ಸಿನಿಮಾ ಹಾಡುಗಳೇ ಕೇಳಿ ಬರುತ್ತವೆ. ಜಾನಪದ ಗೀತೆಗಳಲ್ಲಿಯೂ ಇಂದು ಅಶ್ಲೀಲತೆ ಸೇರಿ, ನಮ್ಮ ಕಲೆ ಹಾಳಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಕಲಾವಿದರು ಇತರರಂತೆ ಬದುಕಲು ಅವರಿಗೆ ನೀಡಲಾಗುತ್ತಿರುವ ಮಾಸಾಶನವನ್ನು ಹೆಚ್ಚಿಸಬೇಕು. ತಾರಾ ಮೌಲ್ಯವಿಲ್ಲದ ಜಾನಪದ ಕಲಾವಿದರು ಸರ್ಕಾರದ ಮಾಸಾಶನದಿಂದ ಜೀವನ ನಡೆಸುವುದು ಕಷ್ಟಕರವಾಗಿದೆ. ಕಲಾವಿದರ ಕಲೆ ಉಳಿಸಲು ಸರ್ಕಾರವು ಪ್ರಯತ್ನಿಸಲಿ ಎಂದರು.ಕಾರ್ಯಕ್ರಮದಲ್ಲಿ ಲೋಕಸಿರಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳ ಕಲಾವಿದರುಗಳನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಾಜು, ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ರಾಜ್ಯ ಸಭಾ ಸದಸ್ಯೆ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ.ಜಯಶ್ರೀ, ಹಂಪಿ ಕನ್ನಡ ವಿವಿ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ, ಮ್ಯಾನೆಜಿಂಗ್ ಟ್ರಸ್ಟಿ ಇಂದಿರಾ ಬಾಲಕಣಷ್ಣ, ಮಲೆಮಹದೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಜೈವಿಭವ ಸ್ವಾಮಿ ಮತ್ತಿತರರು ಹಾಜರಿದ್ದರು.